image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ: ಠಾಕ್ರೆ ಕುಟುಂಬದ ಬುಡಕ್ಕೆ ಕೈ ಹಾಕಿತೇ ಶಿಂಧೆ ಬಣ?

ಮಹಾರಾಷ್ಟ್ರ ರಾಜಕಾರಣದಲ್ಲಿ ಮತ್ತೊಂದು ಬಿರುಗಾಳಿ: ಠಾಕ್ರೆ ಕುಟುಂಬದ ಬುಡಕ್ಕೆ ಕೈ ಹಾಕಿತೇ ಶಿಂಧೆ ಬಣ?

ಮುಂಬೈ : ದೇಶದ ರಾಜಕಾರಣದಲ್ಲಿ ಸದ್ಯ ಪ್ರತಿಪಕ್ಷಗಳ ‘ಇಂಡಿಯಾ’ ಮೈತ್ರಿಕೂಟದ ಬಲ ಕುಸಿಯುತ್ತಿದೆಯೇ ಎನ್ನುವ ಚರ್ಚೆ ಜೋರಾಗಿದೆ. ಬಿಜೆಪಿಯ ಆಕ್ರಮಣಕಾರಿ ರಾಜಕೀಯ ತಂತ್ರಗಳು ಮತ್ತು ಪ್ರಾದೇಶಿಕ ಪಕ್ಷಗಳಲ್ಲಿನ ಭವಿಷ್ಯದ ಅನಿಶ್ಚಿತತೆ ಇದಕ್ಕೆ ಕಾರಣ ಎಂಬ ವಿಶ್ಲೇಷಣೆಗಳ ಬೆನ್ನಲ್ಲೇ, ಈಗ ದೇಶದ ವಾಣಿಜ್ಯ ನಗರಿ ಮುಂಬೈನಿಂದ ಅತಿ ದೊಡ್ಡ ರಾಜಕೀಯ ಸ್ಫೋಟದ ಮುನ್ಸೂಚನೆ ಸಿಗುತ್ತಿದೆ. ದೆಹಲಿಯಲ್ಲಿ ಆಮ್ ಆದ್ಮಿ ಪಾರ್ಟಿ ಮತ್ತು ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಎದುರಿಸುತ್ತಿರುವ ಸವಾಲುಗಳ ನಂತರ, ಈಗ ಮಹಾರಾಷ್ಟ್ರದಲ್ಲಿ ಶಿವಸೇನೆ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಕುಟುಂಬದ ರಾಜಕೀಯ ಅಸ್ತಿತ್ವಕ್ಕೆ ಮತ್ತೊಂದು ದೊಡ್ಡ ಧಕ್ಕೆ ಎದುರಾಗಿದೆ.

ಕಳೆದ ಕೆಲವು ವರ್ಷಗಳಿಂದ ಮಹಾರಾಷ್ಟ್ರದ ರಾಜಕೀಯ ಚದುರಂಗದಾಟ ರೋಚಕ ಹಂತಗಳನ್ನು ತಲುಪಿದೆ. ಜೀವಿತಾವಧಿಯಿಡೀ ಕಾಂಗ್ರೆಸ್ ಮತ್ತು ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಪಕ್ಷಗಳನ್ನು ಕಟ್ಟಾ ರಾಜಕೀಯ ವಿರೋಧಿಗಳು ಎಂದು ಪರಿಗಣಿಸಿದ್ದ ಶಿವಸೇನೆ, ಬಾಳಾ ಸಾಹೇಬ್ ಠಾಕ್ರೆ ನಿಧನದ ನಂತರ ಸಂಪೂರ್ಣ ಭಿನ್ನ ಹಾದಿ ತುಳಿಯಿತು. ಉದ್ದವ್ ಠಾಕ್ರೆ ಅವರು ಬಿಜೆಪಿಯೊಂದಿಗಿನ ದಶಕಗಳ ಮೈತ್ರಿ ಕಡಿದುಕೊಂಡು, ಅದೇ ವಿರೋಧಿಗಳ ಜೊತೆಗೂಡಿ ‘ಮಹಾವಿಕಾಸ್ ಆಘಾಡಿ’ (MVA) ಒಕ್ಕೂಟ ರಚಿಸಿದ್ದು ಶಿವಸೇನೆಯ ಇತಿಹಾಸದಲ್ಲೇ ದೊಡ್ಡ ತಿರುವು. ಪಕ್ಷದ ಸಿದ್ಧಾಂತಕ್ಕೆ ವಿರುದ್ಧವಾದ ಈ ನಿರ್ಧಾರದಿಂದ ಬೇಸತ್ತ ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರು ಬಂಡಾಯವೆದ್ದರು. ಇದರ ಪರಿಣಾಮವಾಗಿ ಏಕನಾಥ್ ಶಿಂಧೆ ನೇತೃತ್ವದ ಹೊಸ ಬಣ ಉದಯವಾಗಿ, ಶಿವಸೇನೆ ಇಬ್ಬಾಗವಾಯಿತು. ಮತ್ತೊಂದೆಡೆ, ಅಜಿತ್ ಪವಾರ್ ಕೂಡ ಶರದ್ ಪವಾರ್ ಅವರಿಂದ ದೂರಾಗಿ ಎನ್‌ಸಿಪಿ ಪಕ್ಷವನ್ನು ಸೀಳಿದರು. ಈ ಎರಡೂ ಬಣಗಳು ಬಿಜೆಪಿಯೊಂದಿಗೆ ಕೈಜೋಡಿಸಿ ‘ಮಹಾಯುತಿ’ ಒಕ್ಕೂಟದ ಮೂಲಕ ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಯಶಸ್ಸು ಸಾಧಿಸಿದವು.

ಲೋಕಸಭಾ ಚುನಾವಣೆಯಲ್ಲಿ ಮಹಾವಿಕಾಸ್ ಆಘಾಡಿ ಒಕ್ಕೂಟವು ಒಟ್ಟು 48 ಸ್ಥಾನಗಳಲ್ಲಿ 30 ಸ್ಥಾನಗಳನ್ನು ಗೆದ್ದು (ಕಾಂಗ್ರೆಸ್ 13, ಠಾಕ್ರೆ ಬಣ 9, ಶರದ್ ಪವಾರ್ ಬಣ 8) ಉತ್ತಮ ಸಾಧನೆ ತೋರಿತ್ತು. ಎದುರಾಳಿ ಮಹಾಯುತಿ ಒಕ್ಕೂಟ ಕೇವಲ 17 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿತ್ತು. ಆದರೆ, ಈಗ ಸಿಗುತ್ತಿರುವ ಸ್ಫೋಟಕ ಮಾಹಿತಿ ಏನೆಂದರೆ, ಉದ್ದವ್ ಠಾಕ್ರೆ ಬಣದಿಂದ ಗೆದ್ದಿರುವ ಒಂಬತ್ತು ಸಂಸದರ ಪೈಕಿ ಏಳು ಸಂಸದರು ಮುಖ್ಯಮಂತ್ರಿ ಏಕನಾಥ್ ಶಿಂಧೆ ಬಣದತ್ತ ಮುಖ ಮಾಡಿದ್ದಾರೆ. ಕೇಂದ್ರ ಸಚಿವ ಸಂಪುಟ ವಿಸ್ತರಣೆಯ ಸುದ್ದಿ ಬೆನ್ನಲ್ಲೇ ಈ ‘ಆಪರೇಷನ್ ಟೈಗರ್’ ಚುರುಕುಗೊಂಡಿದ್ದು, ಶಿಂಧೆ ಪುತ್ರ ಶ್ರೀಕಾಂತ್ ಶಿಂಧೆ ಈ ಸಂಸದರೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ ಎನ್ನಲಾಗಿದೆ.

ಏಳು ಸಂಸದರು ಒಟ್ಟಾಗಿ ಪಕ್ಷಾಂತರ ಮಾಡಿದರೆ, ಪಕ್ಷಾಂತರ ನಿಷೇಧ ಕಾಯ್ದೆಯ ಅಡಿಯಲ್ಲಿ ಅನರ್ಹತೆಯಿಂದ ಬಚಾವಾಗಲು ಅಗತ್ಯವಿರುವ ಮೂರನೇ ಎರಡರಷ್ಟು ಬಹುಮತ ಸಿಗುವುದರಿಂದ ಈ ನಡೆ ರಾಜಕೀಯವಾಗಿ ಅತ್ಯಂತ ಮಹತ್ವ ಪಡೆದಿದೆ. ಇದರಿಂದ ಶಿಂಧೆ ಬಣದ ಲೋಕಸಭಾ ಸಂಸದರ ಸಂಖ್ಯೆ 14ಕ್ಕೆ ಏರಲಿದ್ದು, ಕೇಂದ್ರ ರಾಜಕಾರಣದಲ್ಲೂ ಅವರ ತೂಕ ಹೆಚ್ಚಾಗಲಿದೆ. ಮುಂಬೈ ವ್ಯಾಪ್ತಿಯ ಇಬ್ಬರು ಸಂಸದರನ್ನು ಹೊರತುಪಡಿಸಿ ಉಳಿದವರೆಲ್ಲರೂ ಶಿಂಧೆ ಜೊತೆ ಕೈಜೋಡಿಸುವುದು ಬಹುತೇಕ ನಿಕ್ಕಿ ಎನ್ನಲಾಗುತ್ತಿದ್ದರೂ, ಠಾಕ್ರೆ ಬಣದ ಹಿರಿಯ ನಾಯಕ ಸಂಜಯ್ ರಾವತ್ ಮಾತ್ರ ಇದೆಲ್ಲವೂ ಸತ್ಯಕ್ಕೆ ದೂರವಾದ ವದಂತಿ ಎಂದು ಅಲ್ಲಗಳೆದಿದ್ದಾರೆ. ಈ ಮಹತ್ತರ ಬೆಳವಣಿಗೆ ನಿಜವಾದರೆ, ಅದು ಠಾಕ್ರೆ ಕುಟುಂಬದ ರಾಜಕೀಯ ಭವಿಷ್ಯಕ್ಕೆ ಚೇತರಿಸಿಕೊಳ್ಳಲಾಗದ ಹೊಡೆತ ನೀಡುವುದರಲ್ಲಿ ಸಂಶಯವಿಲ್ಲ.

Category
ಕರಾವಳಿ ತರಂಗಿಣಿ