image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಲಿ: ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ

ಪ್ರಿಯಾಂಕ್ ಖರ್ಗೆ ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಲಿ: ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ವಾಗ್ದಾಳಿ

ಉಡುಪಿ : ರಾಜ್ಯದ ಗೃಹ ಸಚಿವ ಪ್ರಿಯಾಂಕ ಖರ್ಗೆ ಅವರು ತಮ್ಮ ಇತಿಮಿತಿಗಳಲ್ಲಿ ಕೆಲಸ ಮಾಡಬೇಕು ಎಂದು ಸಂಸದ ಕೋಟಾ ಶ್ರೀನಿವಾಸ್ ಪೂಜಾರಿ ಅವರು ತೀಕ್ಷ್ಣವಾಗಿ ಹೇಳಿದ್ದಾರೆ. ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಗೃಹ ಸಚಿವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು (ಆರ್‌ಎಸ್‌ಎಸ್) ಅನಗತ್ಯವಾಗಿ ಟೀಕಿಸುವ ಬದಲು ರಾಜ್ಯದಲ್ಲಿ ಹೆಚ್ಚುತ್ತಿರುವ ಡ್ರಗ್ಸ್ ಜಾಲ, ಭಯೋತ್ಪಾದನೆ ನಿರ್ಮೂಲನೆ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಕಡೆಗೆ ಹೆಚ್ಚಿನ ಗಮನ ಹರಿಸಲಿ ಎಂದು ಸಲಹೆ ನೀಡಿದರು. ಆರ್‌ಎಸ್‌ಎಸ್ ಎಂದಿಗೂ ಪಾಕಿಸ್ತಾನಕ್ಕೆ ಜೈ ಎನ್ನುವ ಸಂಸ್ಥೆಯಲ್ಲ, ಅದು ದೇಶಭಕ್ತ ಸಂಘಟನೆ ಎಂಬುದನ್ನು ಅವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಆರ್‌ಎಸ್‌ಎಸ್ ಕೇವಲ ಕರ್ನಾಟಕ ಅಥವಾ ಭಾರತಕ್ಕೆ ಮಾತ್ರ ಸೀಮಿತವಾಗಿಲ್ಲ, ಜಗತ್ತಿನಾದ್ಯಂತ ಸುಮಾರು ಐವತ್ತು ದೇಶಗಳಲ್ಲಿ ಅದರ ಶಾಖೆಗಳು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿವೆ ಎಂದು ಅವರು ನೆನಪಿಸಿದರು.

ಇದೇ ವೇಳೆ ಆರ್‌ಎಸ್‌ಎಸ್ ನೋಂದಣಿ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು, ಸಂಘದ ನೋಂದಣಿ ಬಗ್ಗೆ ಈಗಾಗಲೇ ಆರ್ಎಸ್ಎಸ್ ಹಿರಿಯ ಮುಖಂಡರು ಮಾತನಾಡಿದ್ದಾರೆ. ಅದಕ್ಕೆ ನಾವು ರಾಜಕೀಯವಾಗಿ ಉತ್ತರ ಕೊಡುವ ಅಗತ್ಯವಿಲ್ಲ, ಸಂಘವೇ ಸೂಕ್ತ ಉತ್ತರವನ್ನು ನೀಡುತ್ತದೆ ಎಂದರು. ಇತಿಹಾಸವನ್ನು ಉಲ್ಲೇಖಿಸಿದ ಕೋಟಾ ಶ್ರೀನಿವಾಸ್ ಪೂಜಾರಿ, ಈ ಹಿಂದೆ ದೇಶದ ಪ್ರಧಾನಿಯಾಗಿದ್ದ ಜವಾಹರಲಾಲ್ ನೆಹರು ಅವರು ಆರ್‌ಎಸ್‌ಎಸ್ ಅನ್ನು ಬ್ಯಾನ್ ಮಾಡಿದ್ದರು, ಆದರೆ ಆ ನಂತರ ಅವರೇ ಸಂಘದ ದೇಶಸೇವೆಯನ್ನು ಕಂಡು ಗಣರಾಜೋತ್ಸವದ ಪರೇಡ್‌ನಲ್ಲಿ ಭಾಗಿಯಾಗುವಂತೆ ಮನವಿ ಮಾಡಿದ್ದರು. ಅದಾದ ಬಳಿಕ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರೂ ಸಹ ಸಂಘವನ್ನು ನಿಷೇಧಿಸಲು ಪ್ರಯತ್ನ ಪಟ್ಟರಾದರೂ ಅವರಿಂದಲೂ ಅದು ಸಾಧ್ಯವಾಗಲಿಲ್ಲ ಎಂದು ಇತಿಹಾಸದ ಪುಟಗಳನ್ನು ಬಿಚ್ಚಿಟ್ಟರು. ಪ್ರಸ್ತುತ ರಾಜ್ಯದಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಎಲ್ಲರನ್ನೂ ಒಟ್ಟಿಗೆ ಕರೆದುಕೊಂಡು ಹೋಗುತ್ತೇವೆ ಎಂದು ಹೇಳುತ್ತಿರುತ್ತಾರೆ. ಆದರೆ, ಮತ್ತೊಂದೆಡೆ ಆರ್‌ಎಸ್‌ಎಸ್ ವಿರುದ್ಧ ಸದಾ ಅಪಪ್ರಚಾರ ಮಾಡುವಂತಹ ವ್ಯಕ್ತಿಯನ್ನು ಗೃಹ ಸಚಿವರನ್ನಾಗಿ ಮಾಡಲಾಗಿದೆ. ಆರ್‌ಎಸ್‌ಎಸ್‌ ಸಂಸ್ಥೆಗೆ ನೀಡಲಾಗುತ್ತಿರುವ ಈ ಕಿರುಕುಳದ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಕ್ಷಣ ಗಮನ ಹರಿಸಬೇಕು ಎಂದು ಅವರು ಆಗ್ರಹಿಸಿದರು.

Category
ಕರಾವಳಿ ತರಂಗಿಣಿ