ಮಂಗಳೂರು : ಮಂಗಳೂರಿನಲ್ಲಿ ಉದ್ಯಮಿಯೊಬ್ಬರನ್ನು ಹನಿ-ಟ್ರಾಪ್ ಮತ್ತು ಬ್ಲ್ಯಾಕ್‌ಮೇಲ್ ಮಾಡುವ ಮೂಲಕ ಸುಮಾರು 2.77 ಕೋಟಿ ರೂಪಾಯಿ ವಸೂಲಿ ಮಾಡಿರುವ ಘೋರ ಅಪರಾಧ ಪ್ರಕರಣ ಬೆಳಕಿಗೆ ಬಂದಿದ್ದು, ಈ ಸಂಬಂಧ ಸ್ಥಳೀಯ ಯೂತ್ ಕಾಂಗ್ರೆಸ್ ಪದಾಧಿಕಾರಿ ನಿಜಾಮ್ ಮತ್ತು ಆತನ ಸಹಚರ ಜಿತೇಶ್ ಎಂಬುವವರನ್ನು ಪೊಲೀಸರು ಬಂಧಿಸಿದ್ದಾರೆ. ಉರ್ವ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಈ ಪ್ರಕರಣದ ವಿವರಗಳು ಅತ್ಯಂತ ಆಘಾತಕಾರಿಯಾಗಿದ್ದು, ಇಡೀ ಸಮಾಜವೇ ತಲೆತಗ್ಗಿಸುವಂತೆ ಮಾಡಿದೆ ಎಂದು ಬಿಜೆಪಿ ಯುವ ಮೋರ್ಚಾ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಕಾಂಗ್ರೆಸ್ ಯುವ ನಾಯಕರ ನೈತಿಕ ಅಧಃಪತನ ಮತ್ತು ಕ್ರಿಮಿನಲ್ ಮನಸ್ಥಿತಿಯನ್ನು ಈ ಘಟನೆ ರಾಜ್ಯದ ಜನತೆಯ ಮುಂದೆ ಬಿಚ್ಚಿಟ್ಟಿದೆ. ಉದ್ಯಮಿಯೊಬ್ಬರ ಅಸಹಾಯಕತೆಯನ್ನು ಬಂಡವಾಳ ಮಾಡಿಕೊಂಡು, ಸುಲಿಗೆಕೋರರೊಂದಿಗೆ ಕೈಜೋಡಿಸಿ ಕೋಟ್ಯಾಂತರ ರೂಪಾಯಿ ಲೂಟಿ ಮಾಡಿರುವ ಯೂತ್ ಕಾಂಗ್ರೆಸ್ ನಾಯಕನ ನಡೆ ಅತ್ಯಂತ ಖಂಡನೀಯವಾಗಿದೆ.
ಈ ಇಡೀ ಪ್ರಕರಣದಲ್ಲಿ ಆರೋಪಿಗಳು ನಡೆಸಿರುವ ವಂಚನೆಯ ಜಾಲ ಅತ್ಯಂತ ವ್ಯವಸ್ಥಿತ ಮತ್ತು ಕ್ರೂರವಾದುದಾಗಿದೆ. ಸಂತ್ರಸ್ತ ಉದ್ಯಮಿ ತನಗೆ ಎದುರಾದ ಬ್ಲ್ಯಾಕ್‌ಮೇಲ್ ಸಮಸ್ಯೆಯಿಂದ ಪಾರಾಗಲು ಸಹಾಯ ಕೋರಿ ಯೂತ್ ಕಾಂಗ್ರೆಸ್ ಪದಾಧಿಕಾರಿ ನಿಜಾಮ್‌ನನ್ನು ಸಂಪರ್ಕಿಸಿದಾಗ, ಆತ ಸಂತ್ರಸ್ತನಿಗೆ ನೆರವಾಗುವ ಬದಲು ತಾನೇ ಸ್ವತಃ ಬ್ಲ್ಯಾಕ್‌ಮೇಲ್ ಜಾಲದ ಸೂತ್ರಧಾರನಾಗಿ ಬದಲಾಗಿದ್ದಾನೆ. ಅದಕ್ಕಿಂತಲೂ ಮಿಗಿಲಾಗಿ, ಸಹಚರ ಜಿತೇಶ್ 2024 ರಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಸುಳ್ಳು ಕಥೆಯನ್ನು ಸೃಷ್ಟಿಸಿ, ನಕಲಿ ಶವಸಂಸ್ಕಾರದ ಫೋಟೋಗಳು ಮತ್ತು ಉದ್ಯಮಿಯ ಹೆಸರಿರುವ ನಕಲಿ ಡೆತ್‌ನೋಟ್ ತೋರಿಸಿ ಸಂತ್ರಸ್ತನನ್ನು ಕಾನೂನು ಕ್ರಮದ ಹೆಸರಿನಲ್ಲಿ ಹೆದರಿಸಲಾಗಿದೆ. ಮಾನಹಾನಿ ಮತ್ತು ಜೈಲು ಶಿಕ್ಷೆಯ ಭೀತಿಯಿಂದ ಉದ್ಯಮಿ ಕಳೆದ ಎರಡು ವರ್ಷಗಳಿಂದ ಕೋಟ್ಯಾಂತರ ರೂಪಾಯಿಗಳನ್ನು ನೀಡುತ್ತಾ ಬಂದಿದ್ದು, ಕೊನೆಗೆ ಜಿತೇಶ್ ಜೀವಂತವಾಗಿರುವುದನ್ನು ಕಂಡು ಪೊಲೀಸರ ಮೊರೆ ಹೋಗಿದ್ದಾರೆ.
ಕಾಂಗ್ರೆಸ್ ಪಕ್ಷವು ಸದಾ ಸಾರ್ವಜನಿಕವಾಗಿ ನೈತಿಕತೆಯ ಭಾಷಣ ಬಿಗಿಯುತ್ತದೆ, ಆದರೆ ಅದರ ಯುವ ನಾಯಕರು ಮಾತ್ರ ಇಂತಹ ಹನಿ-ಟ್ರಾಪ್ ಮತ್ತು ಬ್ಲ್ಯಾಕ್‌ಮೇಲ್ ದಂಧೆಗಳನ್ನು ನಡೆಸುತ್ತಿರುವುದು ಅವರ ದ್ವಿಮುಖ ನೀತಿಯನ್ನು ತೋರಿಸುತ್ತದೆ. ಇದು ಕೇವಲ ವೈಯಕ್ತಿಕ ಅಪರಾಧವಲ್ಲ, ಬದಲಿಗೆ ರಾಜಕೀಯ ಅಧಿಕಾರ ಮತ್ತು ಪ್ರಭಾವವನ್ನು ಬಳಸಿಕೊಂಡು ಸಾರ್ವಜನಿಕರನ್ನು ಹೆದರಿಸುವ ವ್ಯವಸ್ಥಿತ ಕ್ರಿಮಿನಲ್ ಜಾಲವಾಗಿದೆ. ಮಂಗಳೂರಿನ ಶಾಂತಿಪ್ರಿಯ ನಾಗರಿಕರು ಮತ್ತು ಉದ್ಯಮಿಗಳು ಇಂತಹ ರಾಜಕೀಯ ಗೂಂಡಾಗಿರಿಯ ನೆರಳಿನಲ್ಲಿ ಬದುಕುವಂತಾಗಿರುವುದು ದುರದೃಷ್ಟಕರ ಎಂದು ಭಾಜಪ ಯುವ ಮೋರ್ಚಾ ತೀವ್ರ ಕಳವಳ ವ್ಯಕ್ತಪಡಿಸಿದೆ.
ಈ ಹಿನ್ನೆಲೆಯಲ್ಲಿ ಭಾಜಪ ಯುವ ಮೋರ್ಚಾ ಮಂಗಳೂರು ಜಿಲ್ಲಾ ಘಟಕವು ಪೊಲೀಸ್ ಇಲಾಖೆಯಿಂದ ಶೀಘ್ರ ಮತ್ತು ನಿಷ್ಪಕ್ಷಪಾತ ತನಿಖೆಯನ್ನು ಆಗ್ರಹಿಸುತ್ತದೆ. ಈ ಲೂಟಿ ಮಾಡಿದ 2.77 ಕೋಟಿ ರೂಪಾಯಿಗಳ ಹಿಂದೆ ಬೇರೆ ಯಾವುದಾದರೂ ಪ್ರಭಾವಿ ರಾಜಕೀಯ ಮುಖಂಡರ ಹಸ್ತವಿದೆಯೇ ಅಥವಾ ಯಾರಿಗಾದರೂ ಹಣದ ಪಾಲು ಹೋಗಿದೆಯೇ ಎಂಬುದನ್ನು ಪತ್ತೆಹಚ್ಚಲು ಆಳವಾದ ತನಿಖೆಯಾಗಬೇಕು. ತಕ್ಷಣವೇ ಕಾರ್ಯಪ್ರವೃತ್ತರಾಗಿ ಆರೋಪಿಗಳನ್ನು ಬಂಧಿಸಿದ ಮಂಗಳೂರು ನಗರ ಪೊಲೀಸರ ಕ್ರಮವನ್ನು ಶ್ಲಾಘಿಸುತ್ತಾ, ಈ ಪ್ರಕರಣದಲ್ಲಿ ಯಾವುದೇ ರಾಜಕೀಯ ಒತ್ತಡಕ್ಕೆ ಮಣಿಯದೆ ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಒತ್ತಾಯಿಸುತ್ತೇವೆ. ಒಂದು ವೇಳೆ ಈ ತನಿಖೆಯನ್ನು ಹಳ್ಳಹಿಡಿಯಲು ರಾಜಕೀಯ ಪ್ರಭಾವ ಬಳಸಿದರೆ ಬಿಜೆಪಿ ಯುವ ಮೋರ್ಚಾ ಬೀದಿಗಿಳಿದು ಉಗ್ರ ಹೋರಾಟ ನಡೆಸಲಿದೆ ಎಂದು ಈ ಮೂಲಕ ಎಚ್ಚರಿಸುತ್ತೇವೆ ಎಂದು ಯುವ ಮೋರ್ಚಾ ಜಿಲ್ಲಾಧ್ಯಕ್ಷರಾದ ಯು. ನಂದನ್ ಮಲ್ಯ ತಿಳಿಸಿದ್ದಾರೆ.