image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೇವೇಗೌಡರಿಗೆ ತಪ್ಪಿದ ರಾಜ್ಯಸಭಾ ಟಿಕೆಟ್: ಕಾಂಗ್ರೆಸ್ ಟೀಕೆಗೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

ದೇವೇಗೌಡರಿಗೆ ತಪ್ಪಿದ ರಾಜ್ಯಸಭಾ ಟಿಕೆಟ್: ಕಾಂಗ್ರೆಸ್ ಟೀಕೆಗೆ ಹೆಚ್.ಡಿ. ಕುಮಾರಸ್ವಾಮಿ ತಿರುಗೇಟು

ಮಂಡ್ಯ : ರಾಜ್ಯಸಭಾ ಚುನಾವಣೆಗೆ ಎನ್‌ಡಿಎ ಅಭ್ಯರ್ಥಿಯಾಗಿ ಒಬಿಸಿ ನಾಯಕ ಪ್ರೊ. ಎಂ. ನಾಗರಾಜ ಅವರ ಹೆಸರನ್ನು ಬಿಜೆಪಿ ಅಧಿಕೃತವಾಗಿ ಪ್ರಕಟಿಸಿದ ಬೆನ್ನಲ್ಲೇ ಕರ್ನಾಟಕ ರಾಜಕಾರಣದಲ್ಲಿ ಹೊಸ ವಾಗ್ದಾಳಿ ಆರಂಭವಾಗಿದೆ. ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರಿಗೆ ಟಿಕೆಟ್ ಕೈತಪ್ಪಿದೆ ಎಂದು ಕಾಂಗ್ರೆಸ್ ನಾಯಕರು ಬಿಜೆಪಿ ಹಾಗೂ ಜೆಡಿಎಸ್ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಆದರೆ, ಮಂಡ್ಯ ತಾಲೂಕಿನ ತಗ್ಗಹಳ್ಳಿಯಲ್ಲಿ ಮಾತನಾಡಿರುವ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ, ಈ ಎಲ್ಲ ಊಹಾಪೋಹಗಳಿಗೆ ಮತ್ತು ಕಾಂಗ್ರೆಸ್ ಆರೋಪಗಳಿಗೆ ಸ್ಪಷ್ಟನೆ ನೀಡುವ ಮೂಲಕ ತಿರುಗೇಟು ನೀಡಿದ್ದಾರೆ. ಅಸಲಿಗೆ ಹೆಚ್.ಡಿ. ದೇವೇಗೌಡರು ರಾಜ್ಯಸಭೆ ಟಿಕೆಟ್‌ಗಾಗಿ ಯಾವುದೇ ಅರ್ಜಿಯನ್ನೇ ಹಾಕಿರಲಿಲ್ಲ ಎಂದು ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಚುನಾವಣೆ ಪ್ರಕ್ರಿಯೆಗಳಲ್ಲಿ ಸ್ಪರ್ಧಿಸುವ ಆಸಕ್ತಿ ಅವರಲ್ಲಿ ಇರಲಿಲ್ಲ. ಆದರೆ ಕಾಂಗ್ರೆಸ್ ನಾಯಕರು ಈಗ ಇಲ್ಲದ ಅನುಕಂಪ ತೋರಿಸಲು ಮುಂದಾಗಿದ್ದಾರೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಯಿಂದ ಕಾಂಗ್ರೆಸ್ ಪಕ್ಷದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ. ನಮ್ಮ ಮೈತ್ರಿಕೂಟದ ನಡುವೆ ಬಿರುಕು ಮೂಡಿಸಲು ಕಾಂಗ್ರೆಸ್ ಈ ರೀತಿಯ ರಾಜಕೀಯ ತಂತ್ರಗಳನ್ನು ಬಳಸುತ್ತಿದೆ ಎಂದು ಅವರು ವಾಗ್ದಾಳಿ ನಡೆಸಿದರು. ದೇವೇಗೌಡರು ಎಂದಿಗೂ ಅಧಿಕಾರಕ್ಕಾಗಿ ಬೇರೆಯವರ ಮನೆ ಬಾಗಿಲಿಗೆ ಹೋದವರಲ್ಲ, ಸ್ವಾಭಿಮಾನಕ್ಕೆ ಧಕ್ಕೆ ಬಂದಾಗ ದೇಶದ ಪ್ರಧಾನಿ ಸ್ಥಾನವನ್ನೇ ತ್ಯಜಿಸಿ ಬಂದ ಇತಿಹಾಸ ಹೊಂದಿದ್ದಾರೆ ಎಂದು ಹೆಚ್‌ಡಿಕೆ ನೆನಪಿಸಿದ್ದಾರೆ.

ಕಳೆದ ಬಾರಿ ದೇವೇಗೌಡರು ಅವಿರೋಧವಾಗಿ ಆಯ್ಕೆಯಾಗಲು ಕಾಂಗ್ರೆಸ್ ಬೆಂಬಲವೇ ಕಾರಣ ಎಂಬ ವಾದವನ್ನು ಕುಮಾರಸ್ವಾಮಿ ಸಂಪೂರ್ಣವಾಗಿ ನಿರಾಕರಿಸಿದ್ದಾರೆ. ದೇವೇಗೌಡರು ಯಾರದ್ದೋ ಹಂಗಿನಿಂದ ರಾಜ್ಯಸಭೆಗೆ ಹೋಗಿಲ್ಲ. ಆ ಸಮಯದಲ್ಲಿ ಅವರ ವಿರುದ್ಧ ಮತ್ತೊಬ್ಬ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಬೇರೆ ಪಕ್ಷಗಳಿಗೆ ಅವಕಾಶವಿರಲಿಲ್ಲ. ಅಂದು ಬಿ.ಎಸ್. ಯಡಿಯೂರಪ್ಪನವರೇ ಖುದ್ದಾಗಿ ತಮಗೆ ಕರೆ ಮಾಡಿ, ತಾವು ಅಭ್ಯರ್ಥಿಯನ್ನು ಹಾಕುವುದಿಲ್ಲ ಎಂದು ತಿಳಿಸಿದ್ದರು. ತದನಂತರ ತಾವೇ ಒತ್ತಾಯದ ಮೇರೆಗೆ ದೇವೇಗೌಡರನ್ನು ಅಭ್ಯರ್ಥಿಯನ್ನಾಗಿ ಮಾಡಿದ್ದಾಗಿ ಹೆಚ್‌ಡಿಕೆ ವಿವರಿಸಿದ್ದಾರೆ. ಒಕ್ಕಲಿಗ ಸಮುದಾಯಕ್ಕೆ ಬಿಜೆಪಿ ಅನ್ಯಾಯ ಮಾಡಿದೆ ಎಂಬ ಕಾಂಗ್ರೆಸ್ ಆರೋಪವನ್ನು ಪ್ರಶ್ನಿಸಿದ ಅವರು, ರಾಜ್ಯದಲ್ಲಿ ಒಕ್ಕಲಿಗ ಸಮುದಾಯದ ಮುಖ್ಯಮಂತ್ರಿಗಳೇ ಇರುವಾಗ, ಕೇವಲ ಒಂದು ರಾಜ್ಯಸಭಾ ಸ್ಥಾನವನ್ನು ಇಟ್ಟುಕೊಂಡು ಏನು ಮಾಡುತ್ತೀರಾ ಎಂದು ತಿರುಗೇಟು ನೀಡಿದರು. ಇದೇ ವೇಳೆ, ಕುಮಾರಸ್ವಾಮಿ ಅವರ ಸಲಹೆ ಪಡೆಯುವುದಾಗಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೀಡಿರುವ ಹೇಳಿಕೆಗೂ ಕುಮಾರಸ್ವಾಮಿ ಕೌಂಟರ್ ಕೊಟ್ಟಿದ್ದಾರೆ. ಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಸಲಹೆ ನೀಡಲು ತಾನೇನು ದೊಡ್ಡವನಲ್ಲ. ಕುಮಾರಸ್ವಾಮಿ ಎರಡು ಬಾರಿ ಮುಖ್ಯಮಂತ್ರಿಯಾಗಿ ಏನು ಸಾಧನೆ ಮಾಡಿದ್ದಾರೆ ಎಂದು ಅವರೇ ಸದಾ ಪ್ರಶ್ನಿಸುತ್ತಿರುತ್ತಾರೆ. ಪ್ರತಿಯೊಂದಕ್ಕೂ ಸಾಕ್ಷಿ ಕೇಳುವ ಕಾಂಗ್ರೆಸ್ಸಿಗರಿಗೆ ನಾನೇನು ಸಲಹೆ ನೀಡಲಿ ಎಂದು ವ್ಯಂಗ್ಯವಾಡಿದ್ದಾರೆ. ಡಿ.ಕೆ. ಶಿವಕುಮಾರ್ ಅವರಿಗೆ ಕೇವಲ ಫೋಟೋ ಕ್ಲಿಕ್ಕಿಸಿಕೊಳ್ಳುವ ಹಪಾಹಪಿತನವಿದ್ದು, ಅದಕ್ಕಾಗಿಯೇ ಎಲ್ಲೆಡೆ ಅಲೆಯುತ್ತಿದ್ದಾರೆ. "ಅತಿ ವಿನಯಂ ಧೂರ್ತ ಲಕ್ಷಣಂ" ಎಂಬ ಗಾದೆ ಮಾತು ಇವರಿಗೆ ಸರಿಯಾಗಿ ಒಪ್ಪುತ್ತದೆ ಎಂದು ಕೇಂದ್ರ ಸಚಿವರು ಲೇವಡಿ ಮಾಡಿದ್ದಾರೆ.

Category
ಕರಾವಳಿ ತರಂಗಿಣಿ