ಪಶ್ಚಿಮ ಬಂಗಾಳ : ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಬೆನ್ನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ತೀವ್ರ ರಾಜಕೀಯ ಬಿಕ್ಕಟ್ಟು ಸೃಷ್ಟಿಯಾಗಿದೆ. ದೀದಿ ನಾಯಕತ್ವದ ವಿರುದ್ಧ ಅಸಮಾಧಾನಗೊಂಡಿರುವ ಪಕ್ಷದ ಪ್ರಮುಖ ನಾಯಕರು ಮತ್ತು ಶಾಸಕರು ಈಗ ಬಿಜೆಪಿಯತ್ತ ಮುಖಮಾಡುತ್ತಿದ್ದಾರೆ. ಇದರ ಭಾಗವಾಗಿ, ಪಕ್ಷದ ಒಟ್ಟು 28 ಲೋಕಸಭಾ ಸದಸ್ಯರ ಪೈಕಿ 20 ಸಂಸದರು ಎನ್‌ಡಿಎ ಒಕ್ಕೂಟವನ್ನು ಬೆಂಬಲಿಸಲು ನಿರ್ಧರಿಸಿರುವುದು ತೃಣಮೂಲ ಕಾಂಗ್ರೆಸ್‌ಗೆ ಭಾರಿ ಆಘಾತ ನೀಡಿದೆ.
ದೆಹಲಿಯಲ್ಲಿ ಮಮತಾ ಬ್ಯಾನರ್ಜಿ ಅವರು ವಿರೋಧ ಪಕ್ಷಗಳ 'ಇಂಡಿಯಾ' (INDIA) ಒಕ್ಕೂಟದ ನಾಯಕರೊಂದಿಗೆ ಸಭೆ ನಡೆಸುತ್ತಿರುವ ಬೆನ್ನಲ್ಲೇ ಇತ್ತ ಈ ಮಹತ್ವದ ಬೆಳವಣಿಗೆ ನಡೆದಿದೆ. ಬಂಡಾಯ ಸಂಸದರ ಗುಂಪು ಬಿಜೆಪಿಯ ಹಿರಿಯ ನಾಯಕ ಹಾಗೂ ಪಶ್ಚಿಮ ಬಂಗಾಳದ ಚುನಾವಣಾ ಉಸ್ತುವಾರಿ ಭೂಪೇಂದ್ರ ಯಾದವ್ ಅವರನ್ನು ಭೇಟಿಯಾಗಿ ಚರ್ಚಿಸಿದೆ. ಈ ಮಾತುಕತೆಯ ನಂತರ, ಬಂಡಾಯ ಸಂಸದರು ತಾವು ಎನ್‌ಡಿಎ ಮೈತ್ರಿಕೂಟಕ್ಕೆ ಬೆಂಬಲ ನೀಡುತ್ತಿರುವುದಾಗಿ ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಅಧಿಕೃತವಾಗಿ ಪತ್ರ ಬರೆದಿದ್ದಾರೆ. ಪಕ್ಷಾಂತರ ನಿರೋಧಕ ಕಾಯ್ದೆಯಡಿ ಅನರ್ಹತೆಯಿಂದ ಬಾರಿಯಾಗಲು ಒಟ್ಟು ಸಂಸದರಲ್ಲಿ ಮೂರನೇ ಎರಡರಷ್ಟು (2/3) ಸಂಖ್ಯೆಯ ಅಗತ್ಯವಿದ್ದು, 20 ಸಂಸದರು ಒಟ್ಟಿಗೆ ಸೇರಿರುವುದರಿಂದ ಈ ಬಂಡಾಯ ಕಾನೂನುಬದ್ಧವಾಗಿ ಬಲ ಪಡೆದುಕೊಳ್ಳುವ ಸಾಧ್ಯತೆ ಇದೆ.
ಸ್ಪೀಕರ್ ಓಂ ಬಿರ್ಲಾ ಅವರಿಗೆ ಸಲ್ಲಿಕೆಯಾಗಿರುವ ಪತ್ರದಲ್ಲಿ ಜಗದೀಶ್ ಚಂದ್ರ ಬಸುನಿಯಾ, ಅರೂಪ್ ಚಕ್ರವರ್ತಿ, ಪ್ರಸುನ್ ಬ್ಯಾನರ್ಜಿ, ಶರ್ಮಿಳಾ ಸರ್ಕಾರ್ ಮತ್ತು ಖಲೀಲುರ್ ರೆಹಮಾನ್ ಅವರಂತಹ ಪ್ರಭಾವಿ ನಾಯಕರ ಹೆಸರುಗಳು ಪ್ರಮುಖವಾಗಿ ಉಲ್ಲೇಖಗೊಂಡಿವೆ. ಇದರೊಂದಿಗೆ ಟಿಎಂಸಿಯ ಹಿರಿಯ ನಾಯಕಿ ಕಾಕೋಲಿ ಘೋಷ್ ದಸ್ತಿದಾರ್, ಪಾರ್ಥ ಭೌಮಿಕ್, ನಟ ಹಾಗೂ ರಾಜಕಾರಣಿ ದೇವ್ ಮತ್ತು ಮಾಜಿ ಸಂಸದೆ ಮಹುವಾ ಮೊಯಿತ್ರಾ ಅವರಂತಹ ಪ್ರಮುಖ ಮುಖಗಳು ಕೂಡ ತೀವ್ರ ಅಸಮಾಧಾನಗೊಂಡಿದ್ದು, ಬಂಡಾಯಗಾರರ ಸಾಲಿನಲ್ಲಿದ್ದಾರೆ ಎನ್ನಲಾಗಿದೆ.
ಲೋಕಸಭೆ ಮಾತ್ರವಲ್ಲದೆ ಇತ್ತ ಪಶ್ಚಿಮ ಬಂಗಾಳದ ವಿಧಾನಸಭೆಯಲ್ಲೂ ಟಿಎಂಸಿಗೆ ದೊಡ್ಡ ಹಿನ್ನಡೆಯಾಗಿದೆ. ಪಕ್ಷದ ಒಟ್ಟು 80 ಶಾಸಕರ ಪೈಕಿ 59 ಶಾಸಕರು ಮಮತಾ ಬ್ಯಾನರ್ಜಿ ಅವರನ್ನು ಬದಿಗಿಟ್ಟು, ವಿಧಾನಸಭೆಯಲ್ಲಿ ತಮ್ಮದೇ ಆದ ಹೊಸ ವಿರೋಧ ಪಕ್ಷದ ನಾಯಕನನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಪಶ್ಚಿಮ ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್ ಶಾಸಕಾಂಗ ಮತ್ತು ಸಂಸದೀಯ ಮಂಡಳಿ ಎರಡರಲ್ಲೂ ಏಕಕಾಲಕ್ಕೆ ಭಾರಿ ಸೀಳು ಉಂಟಾಗಿದ್ದು, ಮಮತಾ ಬ್ಯಾನರ್ಜಿ ಅವರ ರಾಜಕೀಯ ಭವಿಷ್ಯ ಮತ್ತು ಪಕ್ಷದ ಅಸ್ತಿತ್ವಕ್ಕೆ ಅತ್ಯಂತ ಕಠಿಣ ಸವಾಲು ಎದುರಾಗಿದೆ.