image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಟಿಎಂಸಿ ಪುನರ್ರಚನೆ: ಅಭಿಷೇಕ್ ಬ್ಯಾನರ್ಜಿ ಅಧಿಕಾರಕ್ಕೆ ಮಮತಾ ಬ್ರೇಕ್, ಸಾಮೂಹಿಕ ನಾಯಕತ್ವಕ್ಕೆ ಒತ್ತು

ಟಿಎಂಸಿ ಪುನರ್ರಚನೆ: ಅಭಿಷೇಕ್ ಬ್ಯಾನರ್ಜಿ ಅಧಿಕಾರಕ್ಕೆ ಮಮತಾ ಬ್ರೇಕ್, ಸಾಮೂಹಿಕ ನಾಯಕತ್ವಕ್ಕೆ ಒತ್ತು

ಪಶ್ಚಿಮ ಬಂಗಾಳ : ತೃಣಮೂಲ ಕಾಂಗ್ರೆಸ್ (ಟಿಎಂಸಿ) ಎದುರಿಸುತ್ತಿರುವ ತೀವ್ರ ಚುನಾವಣಾ ಹಿನ್ನಡೆ ಮತ್ತು ಪಕ್ಷದೊಳಗಿನ ಬಂಡಾಯದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಹಾಗೂ ಪಕ್ಷದ ಸುಪ್ರೀಂ ಮಮತಾ ಬ್ಯಾನರ್ಜಿ ಅವರು ಸಾಂಸ್ಥಿಕ ಮಟ್ಟದಲ್ಲಿ ಭಾರಿ ಬದಲಾವಣೆಗಳನ್ನು ಮಾಡಿದ್ದಾರೆ. ಇತ್ತೀಚಿನ ಸೋಲಿಗೆ ಮಮತಾ ಅವರಿಗಿಂತ ಹೆಚ್ಚಾಗಿ, ಅವರ ಸೋದರಸಳಿಯ ಹಾಗೂ ಪಕ್ಷದ ಎರಡನೇ ಅತ್ಯುನ್ನತ ನಾಯಕ ಅಭಿಷೇಕ್ ಬ್ಯಾನರ್ಜಿ ಅವರ ಏಕಪಕ್ಷೀಯ ಧೋರಣೆಯೇ ನೇರ ಕಾರಣ ಎಂದು ಪಕ್ಷದ ಹಿರಿಯ ನಾಯಕರು ಮತ್ತು ಕಾರ್ಯಕರ್ತರಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿತ್ತು. ಈ ಆಂತರಿಕ ಅಸಮಾಧಾನವನ್ನು ಶಮನಗೊಳಿಸಲು ಮತ್ತು ಅಭಿಷೇಕ್ ಅವರ ಸರ್ವಾಧಿಕಾರಿ ನಡವಳಿಕೆಗೆ ಕಡಿವಾಣ ಹಾಕಲು ಮಮತಾ ಬ್ಯಾನರ್ಜಿ ಶುಕ್ರವಾರ ಪಕ್ಷದ ಉನ್ನತ ಮಟ್ಟದ ಪುನರ್ರಚನೆ ಪ್ರಕಟಿಸಿದ್ದಾರೆ.

ಈ ಹೊಸ ಬದಲಾವಣೆಯಲ್ಲಿ ಅಭಿಷೇಕ್ ಬ್ಯಾನರ್ಜಿ ಅವರನ್ನು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಹುದ್ದೆಯಲ್ಲಿ ಮುಂದುವರಿಸಲಾಗಿದೆಯಾದರೂ, ಅವರ ಒಂಟಿ ನಿರ್ಧಾರಗಳಿಗೆ ಬ್ರೇಕ್ ಹಾಕಲು ಮಮತಾ ತಮ್ಮ ಅತ್ಯಂತ ನಿಕಟವರ್ತಿಗಳಿಗೆ ಪ್ರಮುಖ ಜವಾಬ್ದಾರಿ ನೀಡಿದ್ದಾರೆ. ರಾಜ್ಯಸಭಾ ಸದಸ್ಯರಾದ ಡೆರೆಕ್ ಒಬ್ರಿಯಾನ್ ಮತ್ತು ಡೋಲಾ ಸೇನ್ ಅವರನ್ನು ರಾಷ್ಟ್ರೀಯ ಜಂಟಿ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಲಾಗಿದ್ದು, ಇನ್ನು ಮುಂದೆ ಅವರು ಅಭಿಷೇಕ್ ಅವರೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ರಾಜಕೀಯ ವಿಶ್ಲೇಷಕರ ಪ್ರಕಾರ, ಈ ಇಬ್ಬರು ಹಿರಿಯ ನಾಯಕರ ನೇಮಕ ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ, ಬದಲಿಗೆ ಅಭಿಷೇಕ್ ಅವರ ಏಕಪಕ್ಷೀಯ ಅಧಿಕಾರವನ್ನು ನಿಯಂತ್ರಿಸಲು ಮಮತಾ ಹೂಡಿರುವ ಚಾಣಾಕ್ಷ ತಂತ್ರವಾಗಿದೆ. ಅದರಲ್ಲೂ ಡೋಲಾ ಸೇನ್ ಅವರು ಸಂಘಟನೆಯಲ್ಲಿ ಮಮತಾ ಅವರ ಕಣ್ಣು ಮತ್ತು ಕಿವಿಯಾಗಿ ಕೆಲಸ ಮಾಡಲಿದ್ದು, ಪಕ್ಷದಲ್ಲಿ ಅಧಿಕಾರ ಒಬ್ಬರ ಕೈಯಲ್ಲೇ ಕೇಂದ್ರೀಕೃತವಾಗದಂತೆ ಸಾಮೂಹಿಕ ನಾಯಕತ್ವಕ್ಕೆ ಆದ್ಯತೆ ನೀಡಲಾಗಿದೆ.

ಇದರೊಂದಿಗೆ, ಅಭಿಷೇಕ್ ಬ್ಯಾನರ್ಜಿ ಅವರ ಆಪ್ತ ವಲಯದ ನಾಯಕರ ರೆಕ್ಕೆಗಳನ್ನು ಕತ್ತರಿಸುವ ಪ್ರಕ್ರಿಯೆಯೂ ನಡೆದಿದೆ. ಅಭಿಷೇಕ್ ಅವರ ಆಪ್ತರಾಗಿದ್ದ ತೃಣಾಂಕುರ್ ಭಟ್ಟಾಚಾರ್ಯ ಅವರನ್ನು ತೃಣಮೂಲ ವಿದ್ಯಾರ್ಥಿ ಪರಿಷತ್ (ಟಿಎಂಸಿಪಿ) ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಲಾಗಿದ್ದು, ಅವರ ಜಾಗಕ್ಕೆ ಪ್ರಿಯಾಂಕಾ ಅಧಿಕಾರಿ ಅವರಿಗೆ ಜವಾಬ್ದಾರಿ ವಹಿಸಲಾಗಿದೆ. ಅದೇ ರೀತಿ ಅನಾರೋಗ್ಯದ ಕಾರಣದಿಂದ ಹಿನ್ನೆಲೆಗೆ ಸರಿದಿರುವ ಸುಬ್ರತಾ ಬಕ್ಷಿ ಅವರ ಸ್ಥಾನಕ್ಕೆ ಮಮತಾ ಅವರ ನಿಷ್ಠಾವಂತೆ ಚಂದ್ರಿಮಾ ಭಟ್ಟಾಚಾರ್ಯ ಅವರನ್ನು ಪಶ್ಚಿಮ ಬಂಗಾಳದ ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ನೇಮಿಸಲಾಗಿದೆ. ಪಕ್ಷದೊಳಗಿನ ಶೇ. 60 ಕ್ಕೂ ಹೆಚ್ಚು ಶಾಸಕರು ಮತ್ತು ಹಲವು ಸಂಸದರು ಬಂಡಾಯದ ಮುನ್ಸೂಚನೆ ನೀಡಿರುವ ಈ ಕಠಿಣ ಪರಿಸ್ಥಿತಿಯಲ್ಲಿ, ಹಳೆಯ ನಿಷ್ಠಾವಂತ ನಾಯಕರನ್ನು ಮುಂಚೂಣಿಗೆ ತರುವ ಮೂಲಕ ಮಮತಾ ಬ್ಯಾನರ್ಜಿ ಟಿಎಂಸಿ ಮೇಲಿನ ತಮ್ಮ ಸಂಪೂರ್ಣ ಹಿಡಿತವನ್ನು ಮರುಸ್ಥಾಪಿಸಲು ಮುಂದಾಗಿದ್ದಾರೆ.

Category
ಕರಾವಳಿ ತರಂಗಿಣಿ