image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಕಾಟ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ

ದೆಹಲಿಯ ಜಂತರ್ ಮಂತರ್‌ನಲ್ಲಿ ಜಿರಳೆ ಕಾಟ: ಕಾಕ್ರೋಚ್ ಜನತಾ ಪಾರ್ಟಿ ಪ್ರತಿಭಟನೆ

ನವದೆಹಲಿ : ನೀಟ್ (NEET) ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿ ಶಿಕ್ಷಣ ಕ್ಷೇತ್ರದಲ್ಲಿ ನಡೆಯುತ್ತಿರುವ ಹಗರಣಗಳನ್ನ ತಡೆಯುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ. ಈ ಹೊಣೆ ಹೊತ್ತು ಕೇಂದ್ರ ಶಿಕ್ಷಣ ಮಂತ್ರಿ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಸೋಷಿಯಲ್‌ ಮೀಡಿಯಾದಲ್ಲಿ ಅಭೂತ ಪೂರ್ವ ಟ್ರೆಂಡ್ ಸೃಷ್ಟಿ ಮಾಡಿರುವ ಕಾಕ್ರೋಜ್‌ ಜನತಾ ಪಾರ್ಟಿ ಸದಸ್ಯರು ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಇಂದು ಬೆಳಗ್ಗೆ ಜಂತರ್‌ ಮಂತರ್‌ನಲ್ಲಿ ಕಾಕ್ರೋಚ್‌ ಜನತಾ ಪಕ್ಷದ ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಇತರ ಸದಸ್ಯರು ಸೇರಿದ್ದರು. ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ರಾಜೀನಾಮೆ ನೀಡಲೇಬೇಕು ಎಂದು ಆಗ್ರಹಿಸಿದರು. ಕಾಕ್ರೋಚ್‌ ಜನತಾ ಪಾರ್ಟಿಯಲ್ಲಿ ಯುವಜನರೇ ತುಂಬಿಹೋಗಿದ್ದಾರೆ. ಇಂದು ಜಂತರ್‌ ಮಂತರ್‌ನಲ್ಲಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ಪಕ್ಷದ ಸಂಸ್ಥಾಪಕ ಅಭಿಜಿತ್‌ ದೀಪ್ಕೆ ಕೇಂದ್ರ ಸರ್ಕಾರವನ್ನ ತೀವ್ರವಾಗಿ ಟೀಕಿಸಿದರು. ಪರೀಕ್ಷೆಗಳು, ನೇಮಕಾತಿ ಪರೀಕ್ಷೆಗಳಲ್ಲಿ ಅಕ್ರಮಗಳು ನಡೆಯುತ್ತಿವೆ. ಕೇಂದ್ರ ಸರ್ಕಾರವು ಇದನ್ನೆಲ್ಲ ಸರಿಪಡಿಸುವ ಬದಲು, ನಮ್ಮ ಸೋಷಿಯಲ್‌ ಮೀಡಿಯಾ ಚಟುವಟಿಕೆಗಳ ಮೇಲೆ ಗಮನ ಇಟ್ಟಿದೆ ಎಂದು ಟೀಕಿಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ಅಭಿಜಿತ್‌, ನನ್ನ ಸ್ನೇಹಿತರೇ, ಇದು ದೀರ್ಘ ಹೋರಾಟ. ನಾವು ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಒತ್ತಾಯಿಸಲು ಪ್ರಾರಂಭಿಸಿ ಒಂದು ತಿಂಗಳಾಗಿದೆ, ಆದರೆ ಈ ವ್ಯಕ್ತಿಗಳು ಎಷ್ಟು ನಾಚಿಕೆಯಿಲ್ಲದವರೆಂದರೆ, ಕ್ರಮ ತೆಗೆದುಕೊಳ್ಳುವ ಬದಲು, ಅವರು ನಮ್ಮ ಖಾತೆಗಳನ್ನು ಹ್ಯಾಕ್ ಮಾಡುವುದು ಮತ್ತು ನಮ್ಮ ಪೋಸ್ಟ್‌ಗಳನ್ನು ಅಳಿಸುವಂತಹ ಕೆಲಸಗಳನ್ನ ಮಾಡುತ್ತಿದ್ದಾರೆ. ನೀವು ನಮ್ಮ ಪೋಸ್ಟ್‌ಗಳನ್ನು ಅಳಿಸಲು ಸಾಧ್ಯವಾಗಬಹುದು, ಆದರೆ ನೀವು ಈ ಸ್ಥಳದಿಂದ ನಮ್ಮನ್ನು ಅಳಿಸಲು ಸಾಧ್ಯವಿಲ್ಲ ಎಂದು ಹೇಳಿದರು. ಜಂತರ್ ಮಂತರ್‌ನ ಹೊರಗಿನ ಪ್ರತಿಭಟನಾ ಸ್ಥಳದಲ್ಲಿ ಕಾಕ್ರೋಚ್ ಜನತಾ ಪಾರ್ಟಿ (ಸಿಜೆಪಿ) ಸಂಸ್ಥಾಪಕ ಅಭಿಜೀತ್ ದೀಪ್ಕೆ ಮತ್ತು ಅವರ ಸಹಚರರು ಸಮಾಜ ಸುಧಾರಕ ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರದೊಂದಿಗೆ ಕಾಣಿಸಿಕೊಂಡಿದ್ದಾರೆ. ಇನ್ನು ಇಂದಷ್ಟೇ ಅಭಿಜೀತ್‌ ಅವರು ಭಾರತಕ್ಕೆ ಆಗಮಿಸಿದ್ದಾರೆ. ಕಾಕ್ರೋಚ್‌ ಜನತಾ ಪಾರ್ಟಿ ಒಂದು ಸಾಮಾಜಿಕ ಮಾಧ್ಯಮ ಪಕ್ಷ. ಇದು ಆನ್‌ಲೈನ್‌ ಚಳುವಳಿಯಂತೆ ರೂಪುಗೊಳ್ಳುತ್ತಿದೆ.

ಇಂದು ದೆಹಲಿಯಲ್ಲಿ ಪ್ರತಿಭಟನೆ ನಡೆಸಲು ಪೊಲೀಸರಿಂದ ಅನುಮತಿ ಸಿಕ್ಕ ಬೆನ್ನಲ್ಲೇ, ಪಕ್ಷದ ಬೆಂಬಲಿಗರೆಲ್ಲ ಜಂತರ್‌ಮಂತರ್‌ನಲ್ಲಿ ಸೇರಿ ಎಂದು ಅಭಿಜೀತ್‌ ಕರೆಕೊಟ್ಟಿದ್ದರು. ಬಳಿಕ ತಾವೂ ಆಗಮಿಸಿ, ಮಾತನಾಡಿದ್ದಾರೆ. ಕಾಕ್ರೋಚ್‌ ಜನತಾ ಪಕ್ಷದ ಪ್ರತಿಭಟನೆ ನಿಮಿತ್ತ ದೆಹಲಿಯಲ್ಲಿ ಹೆಚ್ಚುವರಿ ಭದ್ರತೆ ಕಲ್ಪಿಸಲಾಗಿತ್ತು. ಇಂದಿರಾ ಗಾಂಧಿ ಅಂತರಾಷ್ಟ್ರಿಯ (ಐಜಿಐ) ವಿಮಾನ ನಿಲ್ದಾಣ, ಗಡಿ ಪ್ರವೇಶ ದ್ವಾರಗಳು ಮತ್ತು ಇತರ ಸೂಕ್ಷ್ಮ ಸ್ಥಳಗಳಲ್ಲಿ ಪೊಲೀಸರು ಹೆಚ್ಚುವರಿ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಜೂನ್ 23ರಂದು ಇನ್ನೊಂದು ಪ್ರತಿಭಟನೆ ನಡೆಸಲು ಕಾಕ್ರೋಚ್‌ ಜನತಾ ಪಕ್ಷದ ಸದಸ್ಯರು ನಿರ್ಧಾರ ಮಾಡಿದ್ದಾರೆ. ಭಾರತದ ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಅವರ "ಪರಾವಲಂಬಿಗಳು" ಮತ್ತು "ಜಿರಳೆಗಳು" ಎಂಬ ಹೇಳಿಕೆಯ ವಿವಾದದ ನಂತರ, ಮೇ 16 ರಂದು ಅಭಿಜೀತ್ ದೀಪ್ಕೆ ಅವರು ಕಾಕ್ರೋಚ್ ಜನತಾ ಪಕ್ಷ ಎಂಬ ಡಿಜಿಟಲ್ ಸಂಘಟನೆಯನ್ನು ಪ್ರಾರಂಭಿಸಿದರು. ಅಂದರೆ ನ್ಯಾಯಮೂರ್ತಿ ಸೂರ್ಯಕಾಂತ್‌ ಅವರು ಕೇಸ್‌ವೊಂದರ ವಿಚಾರಣೆಯಲ್ಲಿ ನಿರುದ್ಯೋಗಿ ಯುವಕರನ್ನ ಪರಾವಲಂಬಿಗಳು ಮತ್ತು ಜಿರಳೆಗಳು ಎಂದು ಕರೆದಿದ್ದರು. ಕಾಕ್ರೋಚ್‌ ಜನತಾ ಪಕ್ಷವು ಕೆಲವೇ ಗಂಟೆಗಳಲ್ಲಿ, ಸಿಜೆಪಿ ಇಂಟರ್ನೆಟ್‌ನಲ್ಲಿ ಬಿರುಗಾಳಿ ಎಬ್ಬಿಸಿ ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಲಕ್ಷಾಂತರ ಅನುಯಾಯಿಗಳನ್ನು ಗಳಿಸಿತು.

Category
ಕರಾವಳಿ ತರಂಗಿಣಿ