image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ದಂಗೆ: ತೃಣಮೂಲ ಕಾಂಗ್ರೆಸ್ ಬಂಡಾಯ ಶಾಸಕರ ನಾಯಕನಾಗಿ ರಿತಬ್ರತಾ ಬ್ಯಾನರ್ಜಿ ಆಯ್ಕೆ

ಪಶ್ಚಿಮ ಬಂಗಾಳ ರಾಜಕೀಯದಲ್ಲಿ ಭಾರಿ ದಂಗೆ: ತೃಣಮೂಲ ಕಾಂಗ್ರೆಸ್ ಬಂಡಾಯ ಶಾಸಕರ ನಾಯಕನಾಗಿ ರಿತಬ್ರತಾ ಬ್ಯಾನರ್ಜಿ ಆಯ್ಕೆ

ಪಶ್ಚಿಮ ಬಂಗಾಳ : ರಾಜಕೀಯದಲ್ಲಿ ಭಾರಿ ಮಹತ್ವದ ಬೆಳವಣಿಗೆಯೊಂದು ನಡೆದಿದ್ದು, ಆಡಳಿತಾರೂಢ ತೃಣಮೂಲ ಕಾಂಗ್ರೆಸ್‌ನಲ್ಲಿ (ಟಿಎಂಸಿ) ಭಾರಿ ಬಂಡಾಯ ಸೃಷ್ಟಿಯಾಗಿದೆ. ತೃಣಮೂಲ ಕಾಂಗ್ರೆಸ್‌ನ ಬಂಡಾಯ ಶಾಸಕರು ಸಭೆ ನಡೆಸಿ, ತಮ್ಮ ಶಾಸಕಾಂಗ ಪಕ್ಷದ ನಾಯಕನಾಗಿ ರಿತಬ್ರತಾ ಬ್ಯಾನರ್ಜಿ ಅವರನ್ನು ಅಧಿಕೃತವಾಗಿ ಆಯ್ಕೆ ಮಾಡಿದ್ದಾರೆ. ಇತ್ತೀಚಿನ ಚುನಾವಣೆಯಲ್ಲಿ ಒಟ್ಟು 80 ಸ್ಥಾನಗಳನ್ನು ಗೆದ್ದಿದ್ದ ತೃಣಮೂಲ ಕಾಂಗ್ರೆಸ್‌ನಲ್ಲಿ ಈಗ ಉದ್ಭವಿಸಿರುವ ಈ ಆಂತರಿಕ ಕಚ್ಚಾಟ ಮತ್ತು ಬಂಡಾಯವು ಪಕ್ಷಕ್ಕೆ ತೀವ್ರ ಹಿನ್ನಡೆ ತಂದೊಡ್ಡಿದೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕನ ಸ್ಥಾನವನ್ನು ಪಡೆದುಕೊಳ್ಳಲು ಯಾವುದೇ ಬಣಕ್ಕೆ ಕನಿಷ್ಠ 30 ಶಾಸಕರ ಬೆಂಬಲದ ಅಗತ್ಯವಿರುತ್ತದೆ. ಬಂಡಾಯ ಎದ್ದಿರುವ ರಿತಬ್ರತಾ ಬ್ಯಾನರ್ಜಿ ಅವರು ಸದ್ಯ 58ಕ್ಕೂ ಹೆಚ್ಚು ತೃಣಮೂಲ ಶಾಸಕರ ಬೆಂಬಲವನ್ನು ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ, ವಿಧಾನಸಭಾ ಸ್ಪೀಕರ್ ರತೀಂದ್ರ ಬಸು ಅವರಿಗೆ ರಿತಬ್ರತಾ ಪತ್ರವೊಂದನ್ನು ಸಲ್ಲಿಸಿದ್ದು, ತಮ್ಮ ಬಣಕ್ಕೆ ಬಹುಮತವಿರುವುದರಿಂದ ತಮ್ಮನ್ನು ಅಧಿಕೃತವಾಗಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಘೋಷಿಸಬೇಕೆಂದು ಕೋರಿದ್ದಾರೆ. ಇಂದು ವಿಧಾನಸಭೆಯಲ್ಲಿ ನಡೆದ ಮಹತ್ವದ ಸಭೆಯಲ್ಲಿ 59 ಶಾಸಕರ ಸಹಿ ಇರುವ ಪತ್ರವನ್ನು ಈಗಾಗಲೇ ಸ್ಪೀಕರ್​ಗೆ ಹಸ್ತಾಂತರಿಸಲಾಗಿದ್ದು, ಇನ್ನು ಆರು ಹೆಚ್ಚುವರಿ ಶಾಸಕರು ಶೀಘ್ರದಲ್ಲೇ ಸಹಿ ಹಾಕಲಿದ್ದಾರೆ ಎಂದು ಬಂಡಾಯ ಬಣ ತಿಳಿಸಿದೆ. ಇದರೊಂದಿಗೆ ಜಾವೇದ್ ಖಾನ್, ಸಂದೀಪನ್ ಸಹಾ ಮತ್ತು ಶಿಯುಲಿ ಸಹಾ ಅವರನ್ನು ಉಪ ನಾಯಕರನ್ನಾಗಿ ಹಾಗೂ ಅಖ್ರುಝಮಾನ್ ಅವರನ್ನು ವಿರೋಧ ಪಕ್ಷದ ಮುಖ್ಯ ಸಚೇತಕರಾಗಿ (ಚೀಫ್ ವಿಪ್) ಆಯ್ಕೆ ಮಾಡಲಾಗಿದೆ.

ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ನಂತರ, ತೃಣಮೂಲ ಕಾಂಗ್ರೆಸ್ ಆರಂಭದಲ್ಲಿ ಬಲ್ಲಿಗಂಗೆಯ ಶಾಸಕ ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ಶಾಸಕಾಂಗ ಪಕ್ಷದ ನಾಯಕನಾಗಿ ಆಯ್ಕೆ ಮಾಡಿತ್ತು. ಈ ಕುರಿತು ಪಕ್ಷದ ಅಖಿಲ ಭಾರತ ಪ್ರಧಾನ ಕಾರ್ಯದರ್ಶಿಯವರು ವಿಧಾನಸಭೆಗೆ ಔಪಚಾರಿಕ ಪತ್ರ ಕಳುಹಿಸಿ, ಶೋಭಂದೇಬ್ ಚಟ್ಟೋಪಾಧ್ಯಾಯ ಅವರನ್ನು ವಿರೋಧ ಪಕ್ಷದ ನಾಯಕನಾಗಿ ಗುರುತಿಸಬೇಕೆಂದು ವಿನಂತಿಸಿದ್ದರು. ಆದರೆ, ಆ ಪತ್ರದಲ್ಲಿದ್ದ ಶಾಸಕರ ಸಹಿಗಳು ನಕಲಿ ಎಂಬ ಗಂಭೀರ ಆರೋಪಗಳು ಕೇಳಿಬಂದ ಹಿನ್ನೆಲೆಯಲ್ಲಿ ಸಿಐಡಿ ತನಿಖೆ ಆರಂಭವಾಯಿತು. ತನಿಖಾಧಿಕಾರಿಗಳು ಹಲವಾರು ಶಾಸಕರ ನಿವಾಸಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಲ್ಲದೆ, ಟಿಎಂಸಿ ಪ್ರಮುಖ ನಾಯಕ ಅಭಿಷೇಕ್ ಬ್ಯಾನರ್ಜಿ ಅವರಿಗೂ ನೋಟಿಸ್ ನೀಡಿದ್ದರು. ಈ ಬೆಳವಣಿಗೆಗಳ ನಡುವೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸುವೇಂದು ಅಧಿಕಾರಿ, ತೃಣಮೂಲ ಶಾಸಕರಾದ ರಿತಬ್ರತಾ ಬ್ಯಾನರ್ಜಿ ಮತ್ತು ಸಂದೀಪನ್ ಸಹಾ ಅವರೇ ಈ ನಕಲಿ ಸಹಿ ಹಗರಣವನ್ನು ಜಗತ್ತಿಗೆ ಬೆಳಕಿಗೆ ತಂದವರು ಎಂದು ಬಹಿರಂಗಪಡಿಸಿದ್ದರು. ಇದರಿಂದ ಕೆರಳಿದ ತೃಣಮೂಲ ಕಾಂಗ್ರೆಸ್ ನಾಯಕತ್ವ ತಕ್ಷಣವೇ ಆ ಇಬ್ಬರು ಶಾಸಕರನ್ನು ಪಕ್ಷದಿಂದ ಉಚ್ಛಾಟಿಸಿತು.

ಈ ಉಚ್ಛಾಟನೆ ಕೃತ್ಯವು ಪಕ್ಷದೊಳಗೆ ದಂಗೆ ಏಳಲು ಕಿಡಿ ಹೊತ್ತಿಸಿತು. ಕನಿಷ್ಠ 50 ಶಾಸಕರು ರಿತಬ್ರತಾ ಜೊತೆ ಕೈಜೋಡಿಸಲಿದ್ದಾರೆ ಎಂಬ ವದಂತಿಗಳು ನಿಜವಾಗಿವೆ. ಕಠಿಣವಾದ ಪಕ್ಷಾಂತರ ವಿರೋಧಿ ಕಾನೂನಿನ ನಿಬಂಧನೆಗಳಿಂದ ಮತ್ತು ಶಾಸಕ ಸ್ಥಾನದಿಂದ ಅನರ್ಹಗೊಳ್ಳುವುದರಿಂದ ಪಾರಾಗಲು ರಿತಬ್ರತಾ ಮತ್ತು ಅವರ ಬಣಕ್ಕೆ ಒಟ್ಟು 80 ಶಾಸಕರಲ್ಲಿ ಕನಿಷ್ಠ ಮೂರನೇ ಎರಡರಷ್ಟು ಅಂದರೆ 53 ಶಾಸಕರ ಬೆಂಬಲದ ಅಗತ್ಯವಿತ್ತು. ಆದರೆ ಬುಧವಾರ ಬೆಳಗ್ಗೆಯ ವೇಳೆಗೆ ನಿರೀಕ್ಷೆಗೂ ಮೀರಿ 58ಕ್ಕೂ ಹೆಚ್ಚು ಶಾಸಕರು ರಿತಬ್ರತಾಗೆ ಬಹಿರಂಗ ಬೆಂಬಲ ಘೋಷಿಸುವ ಮೂಲಕ ಟಿಎಂಸಿ ಅಧಿಕೃತ ಬಣಕ್ಕೆ ಆಘಾತ ನೀಡಿದ್ದಾರೆ. ಇದೀಗ ವಿಧಾನಸಭಾ ಸ್ಪೀಕರ್ ರತೀಂದ್ರ ಬಸು ಅವರು ಬಂಡಾಯ ಶಾಸಕರು ನೀಡಿರುವ ಅಧಿಕೃತ ಪತ್ರವನ್ನು ಸ್ವೀಕರಿಸಿ, ಈ ಹೊಸ ಗುಂಪಿಗೆ ಮಾನ್ಯತೆ ನೀಡಿದರೆ, ರಿತಬ್ರತಾ ಬ್ಯಾನರ್ಜಿ ಅವರು ಅಧಿಕೃತವಾಗಿ ವಿಧಾನಸಭೆಯಲ್ಲಿ ತೃಣಮೂಲ ಕಾಂಗ್ರೆಸ್‌ನ ಶಾಸಕಾಂಗ ಪಕ್ಷದ ನಾಯಕ ಹಾಗೂ ಪಶ್ಚಿಮ ಬಂಗಾಳದ ನೂತನ ವಿರೋಧ ಪಕ್ಷದ ನಾಯಕರಾಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

Category
ಕರಾವಳಿ ತರಂಗಿಣಿ