ದಾವಣಗೆರೆ : ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯ ಸಂದರ್ಭದಲ್ಲಿ ನಡೆದಿದೆ ಎನ್ನಲಾದ ಆಡಿಯೋ ಸಂಭಾಷಣೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿದ್ದು, ರಾಜ್ಯ ರಾಜಕೀಯ ವಲಯದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಆಡಿಯೋದಲ್ಲಿ ಮಾಜಿ ಸಚಿವ ಜಮೀರ್ ಅಹ್ಮದ್ ಖಾನ್ ಹಾಗೂ ಕರ್ನಾಟಕ ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮದ (ಕೆಎಂಡಿಸಿ) ಮಾಜಿ ನಿರ್ದೇಶಕ ಮೊಹಮ್ಮದ್ ಸಿರಾಜ್ ಪರಸ್ಪರ ಮಾತನಾಡಿದ್ದಾರೆ ಎಂದು ಹೇಳಲಾಗುತ್ತಿದ್ದು, ಇದು ಈಗ ಕಾಂಗ್ರೆಸ್ ಆಂತರಿಕ ವಲಯದಲ್ಲಿ ಭಿನ್ನಮತವನ್ನು ಸ್ಫೋಟಿಸಿದೆ. ಆಡಿಯೋ ವೈರಲ್ ಆಗಿರುವ ಕುರಿತು ಸ್ಪಷ್ಟನೆ ನೀಡಿರುವ ಕೆಎಂಡಿಸಿ ಮಾಜಿ ನಿರ್ದೇಶಕ ಮೊಹಮ್ಮದ್ ಸಿರಾಜ್, ಈ ಆರೋಪಗಳನ್ನು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ. ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾದ ಬಳಿಕವೇ ಈ ವಿಷಯ ತಮಗೆ ತಿಳಿಯಿತು ಎಂದಿರುವ ಅವರು, ಈ ಆಡಿಯೋ ಸತ್ಯಕ್ಕೆ ತೀರಾ ದೂರವಾಗಿದೆ ಎಂದು ಹೇಳಿದ್ದಾರೆ. ಜಮೀರ್ ಸಾಹೇಬ್ರು ಹಾಗೂ ಅವರ ನಡುವೆ ಈ ರೀತಿಯ ಯಾವುದೇ ಸಂಭಾಷಣೆ ನಡೆದಿಲ್ಲ ಮತ್ತು ಕೇವಲ ದಾವಣಗೆರೆ ದಕ್ಷಿಣ ಕ್ಷೇತ್ರದ ಟಿಕೆಟ್ ಹಂಚಿಕೆ ವಿಚಾರವಾಗಿ ಉಂಟಾಗಿದ್ದ ಭಿನ್ನಮತವನ್ನು ಬಗೆಹರಿಸುವ ಬಗ್ಗೆ ಮಾತ್ರ ತಾವು ಮಾತನಾಡಿದ್ದೆವು ಎಂದು ಸ್ಪಷ್ಟಪಡಿಸಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಈ ಘಟನೆಯ ಹಿಂದೆ ದೊಡ್ಡ ರಾಜಕೀಯ ಪಿತೂರಿ ಅಡಗಿದೆ ಎಂದು ಶಂಕೆ ವ್ಯಕ್ತಪಡಿಸಿದರು. ಉಪಚುನಾವಣೆಯ ನಂತರ ತಮ್ಮನ್ನು ಗುರಿಯಾಗಿಸಿಕೊಂಡು ನಿರಂತರವಾಗಿ ಷಡ್ಯಂತ್ರಗಳನ್ನು ಹೆಣೆಯಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಈ ಹಿಂದೆಯೂ ಜಬ್ಬಾರ್ ಹಾಗೂ ನಸೀರ್ ಸಾಹೇಬ್ರನ್ನು ಪಕ್ಷದಿಂದ ಹೊರಹಾಕುವಂತೆ ಮಾಡಲಾಗಿತ್ತು ಎಂದರು. ಜಮೀರ್ ಅಹ್ಮದ್ ಖಾನ್ ಅವರಿಗೆ ಉಪಮುಖ್ಯಮಂತ್ರಿ (ಡಿಸಿಎಂ) ಸ್ಥಾನ ತಪ್ಪಿಸಬೇಕು ಎನ್ನುವ ಒಂದೇ ಕಾರಣಕ್ಕೆ ಈ ನಕಲಿ ಆಡಿಯೋವನ್ನು ಸೃಷ್ಟಿಸಿ ವೈರಲ್ ಮಾಡಲಾಗಿದೆ ಮತ್ತು ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಶೀಘ್ರದಲ್ಲೇ ಬಹಿರಂಗವಾಗಬೇಕು ಎಂದು ಅವರು ಒತ್ತಾಯಿಸಿದರು. ಬಿಜೆಪಿ ಅಭ್ಯರ್ಥಿ ಶ್ರೀನಿವಾಸ್ ದಾಸಕರಿಯಪ್ಪ ಅವರೊಂದಿಗಿನ ಒಡನಾಟದ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿರಾಜ್, ಅವರು ತಮಗೆ ಅತ್ಯಾಪ್ತರು ಎಂಬುದು ನಿಜ ಎಂದರು. ಸ್ವತಃ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಅವರೇ ಶ್ರೀನಿವಾಸ್ ನಮ್ಮ ಆಪ್ತರೆಂದು ಹೇಳಿದ್ದಾರೆ ಎಂದು ತಿಳಿಸಿದ ಅವರು, ತಾವು ಯಾರೊಂದಿಗೂ ಫೋನ್‌ನಲ್ಲಿ ಇಂತಹ ಮಾತುಕತೆ ನಡೆಸಿಲ್ಲ ಎಂದು ಸ್ಪಷ್ಟಪಡಿಸಿದರು. ಮತದಾನದ ದಿನ ತಾವು ಯಾರ ಫೋನ್ ಕರೆಗಳನ್ನೂ ಸ್ವೀಕರಿಸಿಲ್ಲ ಎಂದ ಅವರು, ಹೀಗಿರುವಾಗ ಆಡಿಯೋ ಎಲ್ಲಿಂದ ಬರಲು ಸಾಧ್ಯ ಮತ್ತು ಇದನ್ನು ಯಾರು ಮಾಡಿದ್ದಾರೆ ಎಂದು ತಿಳಿದರೆ ಹೆಸರು ಸಮೇತ ಬಹಿರಂಗಪಡಿಸುವುದಾಗಿ ಸವಾಲು ಹಾಕಿದರು.
ಈ ವಿವಾದದ ಕುರಿತು ಪ್ರತಿಕ್ರಿಯಿಸಿರುವ ದಾವಣಗೆರೆ ದಕ್ಷಿಣ ಕ್ಷೇತ್ರದ ನೂತನ ಶಾಸಕ ಸಮರ್ಥ್ ಶಾಮನೂರು, ಇಡೀ ಪ್ರಕರಣದ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣೆಯ ಅವಧಿಯಲ್ಲಿಯೇ ಇದೆಲ್ಲವೂ ಒಂದು ಬಹಿರಂಗ ರಹಸ್ಯವಾಗಿತ್ತು ಎಂದು ಮಾರ್ಮಿಕವಾಗಿ ನುಡಿದಿರುವ ಅವರು, ಆಡಿಯೋದಲ್ಲಿ ಬಿಜೆಪಿ ಹಾಗೂ ಎಸ್‌ಡಿಪಿಐ ಅಭ್ಯರ್ಥಿಗಳ ಕುರಿತು ಪ್ರಸ್ತಾಪವಾಗಿರುವುದು ಸ್ಪಷ್ಟವಾಗಿ ಕೇಳಿಸುತ್ತಿದೆ ಎಂದಿದ್ದಾರೆ. ನಮ್ಮನ್ನು ಸೋಲಿಸಲು ಬಿಜೆಪಿ, ಎಸ್‌ಡಿಪಿಐ ಮತ್ತು ಪಕ್ಷೇತರ ಅಭ್ಯರ್ಥಿಗಳು ಒಂದಾಗಿ ಷಡ್ಯಂತ್ರ ನಡೆಸಿದ್ದರು ಆದರೆ ಇಲ್ಲಿನ ದೇವತೆ ತಾಯಿ ದುಗ್ಗಮ್ಮ ದೇವಿ ಇಂತಹ ಕುತಂತ್ರಗಳಿಗೆ ಆಸ್ಪದ ನೀಡುವುದಿಲ್ಲ ಎಂದು ಹೇಳಿದರು. ಪಕ್ಷದ ಆಂತರಿಕ ಶಿಸ್ತಿನ ಬಗ್ಗೆ ಮಾತನಾಡಿದ ಅವರು, ಪಕ್ಷ ಎಂದ ಮೇಲೆ ಇಂತಹ ಏರುಪೇರುಗಳು ಸಹಜ ಎಂದರು. ಆದರೆ, ನಮ್ಮದೇ ಪಕ್ಷದ ಕೆಲ ನಾಯಕರು ಆಂತರಿಕವಾಗಿ ಬಿಜೆಪಿ ಅಭ್ಯರ್ಥಿಗೆ ಬೆಂಬಲ ನೀಡಿದ್ದು ತಪ್ಪು ಎಂದು ಬೇಸರ ವ್ಯಕ್ತಪಡಿಸಿದ ಅವರು, ಈ ಆಡಿಯೋವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ಕಳುಹಿಸಿ ಸೂಕ್ತ ಪರಿಶೀಲನೆ ನಡೆಸಬೇಕು ಎಂದು ಆಗ್ರಹಿಸಿದರು. ಕೆಪಿಸಿಸಿ ಹಾಗೂ ಕಾಂಗ್ರೆಸ್ ಹೈಕಮಾಂಡ್ ಈ ಇಡೀ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಶಿಸ್ತುಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದರು.