ಮಂಗಳೂರು: ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರ ಹಸ್ತಾಂತರದ ಗೊಂದಲದಿಂದಾಗಿ ಆಡಳಿತ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ರಾಜ್ಯದಲ್ಲಿನ ಆಡಳಿತ ವೈಫಲ್ಯಗಳು ಹಾಗೂ ಸರ್ಕಾರದ ದ್ವಂದ್ವ ನಿಲುವುಗಳನ್ನು ಜನರಿಗೆ ಮನದಟ್ಟು ಮಾಡುವ ಜವಾಬ್ದಾರಿ ಬಿಜೆಪಿ ಕಾರ್ಯಕರ್ತರ ಮೇಲಿದೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ. ನಗರದ ಸಂಘನಿಕೇತನದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ವತಿಯಿಂದ ಆಯೋಜಿಸಲಾಗಿದ್ದ 'ಪಂಡಿತ್ ದೀನ್‌ದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026'ರ ಎರಡು ದಿನಗಳ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗವನ್ನು ಉದ್ಘಾಟಿಸಿ ಅವರು ಮಾತನಾಡಿದರು. ಕಾಂಗ್ರೆಸ್ ಸರ್ಕಾರವು ದಲಿತರು ಹಾಗೂ ಹಿಂದುಳಿದ ವರ್ಗಗಳ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಆದರೆ, ರಾಜ್ಯದಲ್ಲಿ ಸುಮಾರು 1.5 ಲಕ್ಷ ದಲಿತ ಮತ್ತು ಹಿಂದುಳಿದ ವರ್ಗದ ವಿದ್ಯಾರ್ಥಿಗಳು ಹಾಸ್ಟೆಲ್ ಸೌಲಭ್ಯವಿಲ್ಲದೆ ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಎಸ್‌ಸಿ/ಎಸ್‌ಟಿ ಸಮುದಾಯದ ಆರೋಗ್ಯ ಮತ್ತು ಶಿಕ್ಷಣಕ್ಕಾಗಿ ಮೀಸಲಿಟ್ಟಿದ್ದ 60 ಸಾವಿರ ಕೋಟಿ ರೂ. ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಿದೆ ಎಂದು ಆರೋಪಿಸಿದರು. ಕೇಂದ್ರ ಸರ್ಕಾರವು ಕರಾವಳಿಯ ಮೀನುಗಾರಿಕೆ ಮತ್ತು ಅಭಿವೃದ್ಧಿ ಕಾರ್ಯಗಳಿಗಾಗಿ 22 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದರೂ, ರಾಜ್ಯ ಸರ್ಕಾರ ಅದನ್ನು ತನ್ನ ಸ್ವಂತ ಯೋಜನೆ ಎಂದು ಬಿಂಬಿಸುವ ಮೂಲಕ ಜನರಿಗೆ ತಪ್ಪು ಮಾಹಿತಿ ನೀಡುತ್ತಿದೆ. ಈ ವಿಷಯಗಳನ್ನು ಬಿಜೆಪಿ ಕಾರ್ಯಕರ್ತರು ಜನಪರ ಹೋರಾಟಗಳ ಮೂಲಕ ಮನೆ ಮನೆಗೆ ತಲುಪಿಸಬೇಕು ಎಂದು ಅವರು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು, 2014ರ ನಂತರ ದೇಶದಲ್ಲಿ ಭಾರಿ ಬದಲಾವಣೆಗಳಾಗಿವೆ. ಜನರ ಸಮಸ್ಯೆಗಳಿಗೆ ಬಿಜೆಪಿ ಪರಿಹಾರ ಒದಗಿಸುತ್ತಿದೆ. ಪಶ್ಚಿಮ ಬಂಗಾಳದಂತಹ ಕಠಿಣ ರಾಜ್ಯಗಳಲ್ಲೂ ಬಿಜೆಪಿ ಬಲವರ್ಧನೆಗೊಂಡಂತೆ, ಕರ್ನಾಟಕದಲ್ಲಿಯೂ ಕಾಂಗ್ರೆಸ್ ಸರ್ಕಾರದ ವಿರುದ್ಧ ಜನರಿರುವ ಆಕ್ರೋಶವನ್ನು ಬಳಸಿಕೊಂಡು 2028ರಲ್ಲಿ ಬಿಜೆಪಿ ಸರ್ಕಾರ ರಚನೆಗೆ ಕಾರ್ಯಕರ್ತರು ಶ್ರಮಿಸಬೇಕು ಎಂದು ತಿಳಿಸಿದರು.
ಈ ಪ್ರಶಿಕ್ಷಣ ವರ್ಗದಲ್ಲಿ ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಶಾಸಕರಾದ ರಾಜೇಶ್ ನಾಯ್ಕ್, ಡಾ. ವೈ. ಭರತ್ ಶೆಟ್ಟಿ, ಭಾಗೀರಥಿ ಮುರುಳ್ಯ, ಯಶ್‌ಪಾಲ್ ಸುವರ್ಣ, ಕಿಶೋರ್ ಕುಮಾರ್ ಪುತ್ತೂರು ಸೇರಿದಂತೆ ಪ್ರಮುಖರು ಉಪಸ್ಥಿತರಿದ್ದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯತೀಶ್ ಆರ್ವಾರ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ನಿತೀಶ್‌ಕುಮಾರ್ ಶಾಂತಿವನ ವಂದಿಸಿದರು ಮತ್ತು ಪ್ರೇಮಾನಂದ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.