image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕರ್ನಾಟಕ ಸಚಿವ ಸಂಪುಟ ಕಸರತ್ತು ಅಂತಿಮ ಘಟ್ಟಕ್ಕೆ: ರಾಹುಲ್ ಗಾಂಧಿ ಆಫರ್ ತಿರಸ್ಕರಿಸಿದ ಸಿದ್ದರಾಮಯ್ಯ

ಕರ್ನಾಟಕ ಸಚಿವ ಸಂಪುಟ ಕಸರತ್ತು ಅಂತಿಮ ಘಟ್ಟಕ್ಕೆ: ರಾಹುಲ್ ಗಾಂಧಿ ಆಫರ್ ತಿರಸ್ಕರಿಸಿದ ಸಿದ್ದರಾಮಯ್ಯ

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಮುಖ್ಯಮಂತ್ರಿ ಹುದ್ದೆ ಬದಲಾವಣೆಯ ಪ್ರಕ್ರಿಯೆ ಬೆನ್ನಲ್ಲೇ, ನೂತನ ಸಚಿವ ಸಂಪುಟ ರಚನೆಯ ಕಸರತ್ತು ಈಗ ಅಂತಿಮ ಘಟ್ಟ ತಲುಪಿದೆ. ಸಚಿವ ಸಂಪುಟದ ಸ್ವರೂಪ ಮತ್ತು ಇತರ ಪ್ರಮುಖ ರಾಜಕೀಯ ನಿರ್ಧಾರಗಳ ಕುರಿತು ಚರ್ಚಿಸಲು ನಿರ್ಗಮಿತ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ನಿಯೋಜಿತ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ದೆಹಲಿಗೆ ಪ್ರಯಾಣ ಬೆಳೆಸಿದ್ದಾರೆ. ಸಂಭಾವ್ಯ ಸಚಿವರ ಪಟ್ಟಿಯನ್ನು ಅಂತಿಮಗೊಳಿಸಲು ಕಾಂಗ್ರೆಸ್ ಹೈಕಮಾಂಡ್ ನಾಯಕರೊಂದಿಗೆ ಮಹತ್ವದ ಭೇಟಿ ನಿಗದಿಯಾಗಿದೆ.

ಇದೇ ವೇಳೆ, ರಾಜಕೀಯ ವಲಯದಲ್ಲಿ ಅಚ್ಚರಿ ಮೂಡಿಸುವ ವಿಷಯವೊಂದು ಹೊರಬಿದ್ದಿದೆ. ಸಿದ್ದರಾಮಯ್ಯ ಅವರು ರಾಷ್ಟ್ರ ರಾಜಕಾರಣ ಪ್ರವೇಶಿಸಲು ನಿರಾಕರಿಸಿದ ನಂತರ, ಅವರ ಪತ್ನಿ ಪಾರ್ವತಿ ಅವರಿಗೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ರಾಜ್ಯಸಭಾ ಸ್ಥಾನದ ಆಫರ್ ನೀಡಿದ್ದರು ಎನ್ನಲಾಗಿದೆ. ರಾಷ್ಟ್ರ ರಾಜಕಾರಣಕ್ಕೆ ಆಗಮಿಸುವಂತೆ ಸಿದ್ದರಾಮಯ್ಯ ಅವರ ಮೇಲೆ ರಾಹುಲ್ ಗಾಂಧಿ ತೀವ್ರ ಒತ್ತಡ ಹೇರಿದ್ದರು. ಒಂದು ವೇಳೆ ಅವರಿಗೆ ದೆಹಲಿ ರಾಜಕಾರಣಕ್ಕೆ ಬರಲು ಸಾಧ್ಯವಾಗದಿದ್ದರೆ, ಅವರ ಪತ್ನಿಯನ್ನು ರಾಜ್ಯಸಭೆಗೆ ಕಳುಹಿಸಿಕೊಡುವಂತೆ ಗೌರವಯುತ ಆಫರ್ ನೀಡಿದ್ದರು. ಆದರೆ, ಇದನ್ನು ನಯವಾಗಿಯೇ ನಿರಾಕರಿಸಿರುವ ಮಾಜಿ ಸಿಎಂ ಸಿದ್ದರಾಮಯ್ಯ, ತಾವೆಂದಿಗೂ ರಾಜ್ಯ ರಾಜಕಾರಣದಲ್ಲೇ ಮುಂದುವರಿಯುವುದಾಗಿ ಸ್ಪಷ್ಟಪಡಿಸಿದ್ದಾರೆ. ತಮ್ಮ ಪತ್ನಿ ಎಂದಿಗೂ ರಾಜಕೀಯದಲ್ಲಿ ಇಲ್ಲ ಮತ್ತು ಆಕೆ ಹೊರಜಗತ್ತಿಗೂ ಬಂದಿಲ್ಲದ ಕಾರಣ ಆಕೆ ರಾಜ್ಯಸಭೆ ಪ್ರವೇಶಿಸುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ. ಅಲ್ಲದೆ, ತಮಗೆ ನೀಡಿದ್ದ ಆ ಸ್ಥಾನವನ್ನು ಹಿಂದುಳಿದ ಸಮುದಾಯದ ಯೋಗ್ಯ ನಾಯಕರಿಗೆ ನೀಡುವಂತೆ ಕೋರಿದ್ದಾರೆ. ಇದರೊಂದಿಗೆ, ತಮ್ಮ ಪುತ್ರ ಯತೀಂದ್ರ ಅವರಿಗೆ ಡಿಸಿಎಂ ಪಟ್ಟ ನೀಡುವುದನ್ನೂ ಸಿದ್ದರಾಮಯ್ಯ ನಿರಾಕರಿಸಿದ್ದಾರೆ.

ಮತ್ತೊಂದೆಡೆ, ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆಗಳ ಸೃಷ್ಟಿಗೆ ಸಿದ್ದರಾಮಯ್ಯ ಬಣ ತೀವ್ರ ಒತ್ತಡ ಹೇರುವ ಸಾಧ್ಯತೆ ದಟ್ಟವಾಗಿದೆ. ಜಾತಿ ಸಮೀಕರಣವನ್ನು ಸರಿದೂಗಿಸಲು ಕನಿಷ್ಠ ಮೂವರಿಗೆ ಡಿಸಿಎಂ ಸ್ಥಾನ ನೀಡಬೇಕು ಎಂಬುದು ಸಿದ್ದರಾಮಯ್ಯ ನಿವಾಸದಲ್ಲಿ ನಡೆದ ಸಭೆಯ ತೀರ್ಮಾನವಾಗಿದೆ. ಪ್ರಮುಖವಾಗಿ ಹಿರಿಯ ನಾಯಕ ಡಾ. ಜಿ. ಪರಮೇಶ್ವರ್, ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಎಂ.ಬಿ. ಪಾಟೀಲ್ ಹಾಗೂ ಅಲ್ಪಸಂಖ್ಯಾತ ಸಮುದಾಯದ ಜಮೀರ್ ಅಹಮದ್ ಖಾನ್ ಅವರಿಗೆ ಡಿಸಿಎಂ ಪಟ್ಟ ನೀಡಲು ಸಿದ್ದರಾಮಯ್ಯ ಹೈಕಮಾಂಡ್ ಮಟ್ಟದಲ್ಲಿ ಬ್ಯಾಟಿಂಗ್ ನಡೆಸಲಿದ್ದಾರೆ.

ಸಂಪುಟ ರಚನೆಗೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಈಗಾಗಲೇ ತಮ್ಮ ಬಣದ ಸಚಿವಾಕಾಂಕ್ಷಿಗಳ ಪಟ್ಟಿಯನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ಹೈಕಮಾಂಡ್ ನಾಯಕರಿಗೆ ಹಸ್ತಾಂತರಿಸಲಿದ್ದಾರೆ. ಎ.ಎಸ್. ಪೊನ್ನಣ್ಣ, ಶಿವರಾಜ್ ತಂಗಡಗಿ, ಪುಟ್ಟರಂಗಶೆಟ್ಟಿ, ಕೆ. ವೆಂಕಟೇಶ್, ಬಸವರಾಜ್ ರಾಯರೆಡ್ಡಿ, ಬಿ.ಕೆ. ಹರಿಪ್ರಸಾದ್, ಸಂತೋಷ್ ಲಾಡ್, ಎಚ್.ಸಿ. ಮಹದೇವಪ್ಪ ಹಾಗೂ ಜಮೀರ್ ಅಹಮದ್ ಖಾನ್ ಪ್ರಮುಖ ಸಚಿವಾಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಹತ್ತಾರು ಆಕಾಂಕ್ಷಿಗಳು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಹೈಕಮಾಂಡ್ ಜಿಲ್ಲಾವಾರು ಮತ್ತು ಸಮುದಾಯವಾರು ಪ್ರಾತಿನಿಧ್ಯವನ್ನು ಗಮನದಲ್ಲಿಟ್ಟುಕೊಂಡು ಲಿಸ್ಟ್ ಫಿಲ್ಟರ್ ಮಾಡಲಿದೆ.

ದೆಹಲಿಯ ಹೈಕಮಾಂಡ್ ಅಂಗಳದಲ್ಲಿ ಪ್ರಮುಖವಾಗಿ 8 ವಿಷಯಗಳು ಚರ್ಚೆಯಾಗಲಿವೆ. ಮೊದಲ ಪಟ್ಟಿಯ ಸಚಿವರ ಆಯ್ಕೆ ಮತ್ತು ಪ್ರಮಾಣ ವಚನದ ಬಗ್ಗೆ ತೀರ್ಮಾನ ಕೈಗೊಳ್ಳುವುದು ಹಾಗೂ ಹಳೆಯ ಸಚಿವರಲ್ಲಿ ಯಾರನ್ನು ಮುಂದುವರಿಸಬೇಕು ಮತ್ತು ಯಾರನ್ನು ಕೈಬಿಡಬೇಕು ಎಂಬುದು ಮೊದಲ ಆದ್ಯತೆಯಾಗಿದೆ. ಹಾಲಿ ಸಚಿವ ಸಂಪುಟ ಬದಲಾವಣೆಯ ನಡುವೆ ಕೆಪಿಸಿಸಿ ಅಧ್ಯಕ್ಷ ಸ್ಥಾನದ ಬದಲಾವಣೆ ವಿಚಾರವೂ ಮುಂಚೂಣಿಗೆ ಬರಲಿದೆ. ರಾಜ್ಯಕ್ಕೆ ಹೆಚ್ಚುವರಿ ಡಿಸಿಎಂ ಹುದ್ದೆಗಳು ಬೇಕಾ ಅಥವಾ ಬೇಡವಾ ಹಾಗೂ ಒಂದು ವೇಳೆ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಯಾದರೆ ಯಾವ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆಯಲಿದೆ. ಸರ್ಕಾರದ ಸುಗಮ ನಡಿಗೆಗೆ ಸಮನ್ವಯ ಸಮಿತಿ ಅಥವಾ ಕೋರ್ ಕಮಿಟಿ ಮಾದರಿ ರಚನೆ ಮಾಡುವುದು, ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರ ರಾಜಕೀಯ ಸ್ಥಾನಮಾನದ ನಿರ್ಧಾರ ಹಾಗೂ ಮುಂಬರುವ ರಾಜ್ಯಸಭಾ ಚುನಾವಣೆ ಪ್ರಕ್ರಿಯೆ ಮತ್ತು ಸಂಭಾವ್ಯ ಅಭ್ಯರ್ಥಿಗಳ ಆಯ್ಕೆ ಕುರಿತು ಹೈಕಮಾಂಡ್ ಅಂತಿಮ ನಿರ್ಧಾರ ಪ್ರಕಟಿಸಲಿದೆ.

Category
ಕರಾವಳಿ ತರಂಗಿಣಿ