image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಬೆಲೆ ಏರಿಕೆ ವಿರೋಧಿಸಿ ಬಿ.ಸಿ.ರೋಡ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ

ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಮತ್ತು ಬೆಲೆ ಏರಿಕೆ ವಿರೋಧಿಸಿ ಬಿ.ಸಿ.ರೋಡ್‌ನಲ್ಲಿ ಕಾಂಗ್ರೆಸ್ ಪ್ರತಿಭಟನೆ

ಬಂಟ್ವಾಳ : ಬಂಟ್ವಾಳ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಬಂಟ್ವಾಳ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್, ಎನ್‌ಎಸ್‌ಯುಐ ಮತ್ತು ಮಹಿಳಾ ಕಾಂಗ್ರೆಸ್ ವತಿಯಿಂದ ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ವಿರುದ್ಧ ಬಿ.ಸಿ.ರೋಡಿನ ಫ್ಲೈ ಓವರ್ ಕೆಳಭಾಗದಲ್ಲಿ ಪ್ರತಿಭಟನೆ ನಡೆಯಿತು.

ಮಾಜಿ ಸಚಿವ ಹಾಗೂ ಕ್ಷೇತ್ರದ ಮಾಜಿ ಶಾಸಕ ಬಿ. ರಮಾನಾಥ ರೈ ಅವರ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡಿದರು. ಯುಪಿಎ ಸರ್ಕಾರದ ಅವಧಿಯಲ್ಲಿ ಕಚ್ಚಾ ತೈಲದ ಬೆಲೆ ಹೆಚ್ಚಳವಾಗಿದ್ದರೂ ಕೂಡ ಜನರಿಗೆ ಹೊರೆಯಾಗದಂತೆ ಸುಲಭವಾಗಿ ಸಿಗುವಂತೆ ಮಾಡಲಾಗಿತ್ತು. ಆದರೆ ಇವತ್ತು ಬಿಜೆಪಿ ಸರ್ಕಾರವು ನಿರಂತರವಾಗಿ ದುರುದ್ದೇಶದಿಂದ ಬೆಲೆ ಏರಿಕೆ ಮಾಡುತ್ತಿದೆ. ದೇಶದಲ್ಲಿ ಕೇವಲ ದರ ಕುಸಿಯುವುದು ಮಾತ್ರವಲ್ಲ, ದೇಶದ ಸ್ವಾಭಿಮಾನಕ್ಕೂ ಧಕ್ಕೆಯಾಗುತ್ತಿದೆ. ಬಡವರ ಕಿಸೆಯಿಂದ ಹಣ ತೆಗೆದು ಶ್ರೀಮಂತರ ಕಿಸೆಗೆ ಹಾಕುವುದು ಬಿಜೆಪಿಯ ಇತಿಹಾಸವಾದರೆ, ಶ್ರೀಮಂತರ ಕಿಸೆಯಿಂದ ಬಡವರ ಕಿಸೆಗೆ ಹಾಕುವುದು ಕಾಂಗ್ರೆಸ್ ಸಂಸ್ಕೃತಿಯಾಗಿದೆ. ಮೋದಿ ಏನು ಮಾಡಿದರೂ ಸರಿ ಎನ್ನುವ ಭಕ್ತರು ಹಾಗೂ ಮೂರ್ಖರು ಇಲ್ಲಿದ್ದಾರೆ ಎಂದು ಅವರು ಲೇವಡಿ ಮಾಡಿದರು. ಇದೇ ವೇಳೆ, ರಾಹುಲ್ ಗಾಂಧಿ ಅವರಿಗೆ ಒಮ್ಮೆ ಅವಕಾಶ ಮಾಡಿಕೊಡಿ, ಅವರು ಯಾವ ರೀತಿ ಆಡಳಿತ ಮಾಡುತ್ತಾರೆ ಎಂಬುದನ್ನು ನೋಡಿ ಎಂದು ವಿನಂತಿಸಿದ ಅವರು, ಅವಿದ್ಯಾವಂತ ಹೆಬ್ಬೆಟ್ಟು ಒತ್ತುವವರು ಬಿಜೆಪಿಯಲ್ಲಿ ಮಂತ್ರಿಗಳಾಗುತ್ತಿರುವುದರಿಂದ ದೇಶಕ್ಕೆ ಕೇಡು ಉಂಟಾಗಿದೆ. ಹೀಗಾಗಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಕೂಡಲೇ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದರು.

ಕೆಪಿಸಿಸಿ ವಕ್ತಾರ ಎಂ.ಜಿ.ಹೆಗಡೆ ಮಾತನಾಡಿ, ಮೋದಿ ಸರ್ಕಾರವು ಸರ್ವಾಧಿಕಾರಿ ಧೋರಣೆ ತಳೆದಿದ್ದು, ಪ್ರಶ್ನೆ ಕೇಳುವವರನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದೆ. ಒಡೆದು ಆಳುವ ನೀತಿ ಬಿಜೆಪಿಯದ್ದಾಗಿದ್ದು, ಆ ಪಕ್ಷವು ಹೆಣ ಹಾಕಿ ಮತ ಪಡೆಯುವಂತಹ ನೀಚ ರಾಜಕಾರಣ ಮಾಡುತ್ತಿದೆ ಎಂದು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಜಿ.ಪಂ. ಮಾಜಿ ಸದಸ್ಯ ಚಂದ್ರಪ್ರಕಾಶ್ ಶೆಟ್ಟಿ ಮಾತನಾಡಿ, ದೇಶದ ಜನಸಾಮಾನ್ಯರು ಬೆಲೆ ಏರಿಕೆಯಿಂದ ತತ್ತರಿಸಿ ಹೋಗಿದ್ದರೆ, ಪ್ರಧಾನಿಯವರು ವಿದೇಶ ಪ್ರವಾಸದಲ್ಲಿ ಮೋಜು ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರದ ಜನವಿರೋಧಿ ಆಡಳಿತವು ದೇಶವನ್ನು ಆರ್ಥಿಕವಾಗಿ ಹಿನ್ನಡೆಗೆ ತಳ್ಳುತ್ತಿದೆ ಎಂದು ಆರೋಪಿಸಿದರು.

ಈ ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ಬಾಲಕೃಷ್ಣ ಅಂಚನ್, ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಇಬ್ರಾಹಿಂ ನವಾಝ್, ಎನ್‌ಎಸ್‌ಯುಐ ಅಧ್ಯಕ್ಷ ಸಫ್ವಾನ್ ಹಾಗೂ ಪಕ್ಷದ ಪ್ರಮುಖರಾದ ಪಿಯೂಸ್ ಎಲ್. ರೋಡ್ರಿಗಸ್, ಬೇಬಿ ಕುಂದರ್, ಪದ್ಮಶೇಖರ್ ಜೈನ್, ಅಬ್ಬಾಸ್ ಅಲಿ, ಸುಭಾಶ್ಚಂದ್ರ ಶೆಟ್ಟಿ ಕೊಳ್ನಾಡು, ಸುಹೈಲ್ ಖಂದಕ್ ಮಂಗಳೂರು, ಪದ್ಮನಾಭ ರೈ, ಸುದೀಪ್‌ಕುಮಾರ್ ಶೆಟ್ಟಿ, ಸದಾಶಿವ ಬಂಗೇರ, ಸುಧಾಕರ ಶೆಣೈ ಖಂಡಿಗ, ಫೌಝಿಯಾ ಸಜಿಪ ಮೂಡ, ಶಬಾನಾ ಕಾವಳಕಟ್ಟೆ, ಸಚಿನ್ ಬೆಳ್ಳಾರೆ, ಮಧುಸೂದನ್, ಶೈಲಜಾ ರಾಜೇಶ್, ಮಹಮ್ಮದ್ ನಂದಾವರ, ಮೋಹನ್ ಶೆಟ್ಟಿ, ಸಿದ್ದೀಕ್ ಸರವು, ಸಿರಾಜ್ ಮದಕ, ಯೂಸುಫ್ ಕರಂದಾಡಿ, ಸಮದ್ ಕೈಕಂಬ, ಜೋಸ್ಮಿನ್ ಡಿಸೋಜಾ, ಜೆಸಿಂತಾ ಡಿಸೋಜಾ, ಮಹಮ್ಮದ್ ಶರೀಫ್ ಶಾಂತಿ ಅಂಗಡಿ, ಸಿದ್ದೀಕ್ ಗುಡ್ಡೆಅಂಗಡಿ, ಕುಶಲ ಎಂ. ಪೆರಾಜೆ, ವೆಂಕಪ್ಪ ಪೂಜಾರಿ, ನಿರಂಜನ್ ರೈ, ಸತೀಶ್ ಪೂಜಾರಿ ಕೊಪ್ಪರಿಗೆ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ