image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಬೆಂಗಳೂರು ಪ್ರವಾಸ : ಕೇಸರಿ ಪಾಳಯದಲ್ಲಿ ಹೊಸ ಸಂಚಲನ

ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬೀನ್ ಬೆಂಗಳೂರು ಪ್ರವಾಸ : ಕೇಸರಿ ಪಾಳಯದಲ್ಲಿ ಹೊಸ ಸಂಚಲನ

ಬೆಂಗಳೂರು : ಭಾರತೀಯ ಜನತಾ ಪಕ್ಷದ (ಬಿಜೆಪಿ) ಅತ್ಯಂತ ಕಿರಿಯ ಹಾಗೂ ಚಲನಶೀಲ ರಾಷ್ಟ್ರೀಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ನಿತಿನ್ ನಬೀನ್ ಅವರು ಮೊದಲ ಬಾರಿಗೆ ಕರ್ನಾಟಕಕ್ಕೆ ಭೇಟಿ ನೀಡುತ್ತಿದ್ದು, ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಚುನಾವಣೆಯಲ್ಲಿ ಪಕ್ಷ ಸಾಧಿಸಿದ ಐತಿಹಾಸಿಕ ಜಯದ ಬೆನ್ನಲ್ಲೇ, ದಕ್ಷಿಣ ಭಾರತದ ಹೆಬ್ಬಾಗಿಲಾದ ಕರ್ನಾಟಕದಲ್ಲಿ ಪಕ್ಷವನ್ನು ಮರುಸಂಘಟಿಸಲು ಹೈಕಮಾಂಡ್ ಸಂಪೂರ್ಣ ಗಮನ ಹರಿಸಿದೆ. ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ಇದು ಅವರ ಮೊದಲ ರಾಜ್ಯ ಪ್ರವಾಸವಾಗಿದ್ದು, ಕೇಸರಿ ಪಾಳಯದ ಕಾರ್ಯಕರ್ತರಲ್ಲಿ ರಣೋತ್ಸಾಹ ಮೂಡಿಸಿದೆ.

ಎರಡು ದಿನಗಳ ಈ ಮಹತ್ವದ ಭೇಟಿಯಲ್ಲಿ ನಿತಿನ್ ನಬೀನ್ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸೇರಿದಂತೆ ಪ್ರಮುಖ ನಾಯಕರು, ಆರ್‌.ಎಸ್.ಎಸ್ ಪ್ರಮುಖರು ಮತ್ತಿತರರನ್ನು ಭೇಟಿಯಾಗಿ ಪಕ್ಷ ಸಂಘಟನೆಯ ಕುರಿತು ಮಹತ್ವದ ಸಲಹೆಗಳನ್ನು ಪಡೆಯಲಿದ್ದಾರೆ. ನಿಗದಿತ ವೇಳಾಪಟ್ಟಿಯಂತೆ, ನಾಳೆ ಬೆಳಿಗ್ಗೆ 9 ಗಂಟೆಗೆ ಅವರು ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ಸಂಸದೀಯ ಮಂಡಳಿ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ಅವರ ಧವಳಗಿರಿ ನಿವಾಸಕ್ಕೆ ಭೇಟಿ ನೀಡಲಿದ್ದಾರೆ. ಯಡಿಯೂರಪ್ಪ ಅವರೊಂದಿಗೆ ಉಪಾಹಾರ ಸೇವಿಸುತ್ತಾ ರಾಜ್ಯ ರಾಜಕೀಯ ಸ್ಥಿತಿಗತಿ ಹಾಗೂ ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಕುರಿತು ಮಹತ್ವದ ಚರ್ಚೆ ನಡೆಸಲಿದ್ದಾರೆ. ತದನಂತರ ಬೆಳಿಗ್ಗೆ 10.45ಕ್ಕೆ ಮಲ್ಲೇಶ್ವರಂನ ಐತಿಹಾಸಿಕ ಶ್ರೀ ಕಾಡು ಮಲ್ಲೇಶ್ವರ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಲಿದ್ದು, ಈ ವೇಳೆ ರಾಜ್ಯ ಬಿಜೆಪಿ ಅಧ್ಯಕ್ಷರಾದ ಬಿ.ವೈ.ವಿಜಯೇಂದ್ರ ಅವರು ಸಾಥ್ ನೀಡಲಿದ್ದಾರೆ.

ಬೆಳಿಗ್ಗೆ 11.10ಕ್ಕೆ ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿ 'ಜಗನ್ನಾಥ ಭವನ'ಕ್ಕೆ ಆಗಮಿಸಲಿರುವ ರಾಷ್ಟ್ರೀಯ ಅಧ್ಯಕ್ಷರಿಗೆ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಅದ್ಧೂರಿ ಮತ್ತು ಸಾಂಪ್ರದಾಯಿಕ ಸ್ವಾಗತ ಕೋರಲಿದ್ದಾರೆ. ಬಳಿಕ ಪಕ್ಷದ ಕಚೇರಿಯಲ್ಲಿ ಅತ್ಯಂತ ಪ್ರಮುಖ ಸಾಂಘಟಿಕ ಸಭೆ ನಡೆಯಲಿದ್ದು, ಇದರಲ್ಲಿ ಪಕ್ಷದ ಎಲ್ಲಾ ಶಾಸಕರು, ಸಂಸದರು, ವಿಧಾನ ಪರಿಷತ್ ಸದಸ್ಯರು, ರಾಜ್ಯ ಪದಾಧಿಕಾರಿಗಳು, ವಿವಿಧ ಮೋರ್ಚಾಗಳ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿಗಳು, ವಿಭಾಗೀಯ ಉಸ್ತುವಾರಿಗಳು, ಜಿಲ್ಲಾ ಅಧ್ಯಕ್ಷರು ಹಾಗೂ ಐಟಿ-ಸೋಷಿಯಲ್ ಮೀಡಿಯಾ ವಿಭಾಗದ ಮುಖ್ಯಸ್ಥರು ಭಾಗವಹಿಸಲಿದ್ದಾರೆ. ಈ ಸಭೆಯಲ್ಲಿ ತಳಮಟ್ಟದ ಬಲವರ್ಧನೆ, ಇತ್ತೀಚಿನ ಉಪಚುನಾವಣೆಗಳ ಸೋಲಿನ ಪರಾಮರ್ಶೆ ಹಾಗೂ ಮುಂಬರುವ ಚುನಾವಣೆಗಳ ಕಾರ್ಯತಂತ್ರದ ಕುರಿತು ಸುದೀರ್ಘ ಚರ್ಚೆಗಳು ನಡೆಯಲಿವೆ.

ಮಧ್ಯಾಹ್ನ 2 ಗಂಟೆಗೆ ನಿತಿನ್ ನಬೀನ್ ಅವರ ಅಧ್ಯಕ್ಷತೆಯಲ್ಲಿ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ ಜರುಗಲಿದೆ. ಮೂಲಗಳ ಪ್ರಕಾರ, ಕರ್ನಾಟಕ ಬಿಜೆಪಿ ಕೋರ್ ಕಮಿಟಿಯನ್ನು ಪುನಾರಚಿಸುವ ಸಾಧ್ಯತೆಗಳಿದ್ದು, ಯುವ ಮತ್ತು ಸಕ್ರಿಯ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡುವ ಕುರಿತು ಚರ್ಚೆಯಾಗಲಿದೆ. ಇದರೊಂದಿಗೆ, ಪ್ರಸ್ತುತ ರಾಜ್ಯ ಅಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ಅವರನ್ನು ಪೂರ್ಣಾವಧಿ ಅಧ್ಯಕ್ಷರನ್ನಾಗಿ ಮುಂದುವರಿಸುವ ಕುರಿತು ಅನೌಪಚಾರಿಕ ಸಮಾಲೋಚನೆ ನಡೆಯಲಿದ್ದು, ಈ ಭೇಟಿಯು ಪಕ್ಷದೊಳಗಿನ ಭಿನ್ನಮತ ಶಮನಕ್ಕೆ ಪ್ರಮುಖ ವೇದಿಕೆಯಾಗಲಿದೆ ಎನ್ನಲಾಗಿದೆ.

ಸಭೆಗಳ ನಂತರ ಮಧ್ಯಾಹ್ನ 3.45ಕ್ಕೆ ಯಲಹಂಕದ ಸಿಂಗನಾಯಕನಹಳ್ಳಿಯಲ್ಲಿರುವ ರಮಡಾ ರೆಸಾರ್ಟ್‌ನಲ್ಲಿ ಆಯೋಜಿಸಲಾಗಿರುವ ಬೆಂಗಳೂರು ಉತ್ತರ ಜಿಲ್ಲಾ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಕಾರ್ಯಕರ್ತರನ್ನುದ್ದೇಶಿಸಿ ಅವರು ಮಾತನಾಡಲಿದ್ದಾರೆ. ತದನಂತರ ಸಂಜೆ 4.30ಕ್ಕೆ ರಾಜ್ಯದ ವಿಶೇಷ ತಂಡದೊಂದಿಗೆ ಮಾತುಕತೆ ನಡೆಸಿ ದೆಹಲಿಗೆ ವಾಪಸಾಗಲಿದ್ದಾರೆ. ಬಿಹಾರದಲ್ಲಿ ಬಿಜೆಪಿಗೆ ಗೆಲುವಿನ ತಂತ್ರ ರೂಪಿಸಿಕೊಟ್ಟ ಚಾಣಕ್ಯ ಎಂದೇ ಹೆಸರಾಗಿರುವ ನಿತಿನ್ ನಬೀನ್ ಅವರ ಈ ಬೆಂಗಳೂರು ಭೇಟಿಯು, ಕರ್ನಾಟಕ ಬಿಜೆಪಿಯಲ್ಲಿ ಹೊಸ ಸಂಚಲನ ಹಾಗೂ ಹೊಸ ಶಕ್ತಿ ಮೂಡಿಸುವುದರಲ್ಲಿ ಅನುಮಾನವಿಲ್ಲ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ.

Category
ಕರಾವಳಿ ತರಂಗಿಣಿ