image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜ್ಯಸಭೆ ಚುನಾವಣೆ: ಕರ್ನಾಟಕದ 4 ಕ್ಷೇತ್ರಗಳಿಗೆ ಕಣ ಸಿದ್ಧ, ದೇವೇಗೌಡರ ಸ್ಪರ್ಧೆ ಬಗ್ಗೆ ಕುತೂಹಲ

ರಾಜ್ಯಸಭೆ ಚುನಾವಣೆ: ಕರ್ನಾಟಕದ 4 ಕ್ಷೇತ್ರಗಳಿಗೆ ಕಣ ಸಿದ್ಧ, ದೇವೇಗೌಡರ ಸ್ಪರ್ಧೆ ಬಗ್ಗೆ ಕುತೂಹಲ

ಬೆಂಗಳೂರು : ​ಮುಂದಿನ ತಿಂಗಳು ತೆರವಾಗಲಿರುವ ಕರ್ನಾಟಕದ ನಾಲ್ಕು ಸ್ಥಾನಗಳು ಸೇರಿದಂತೆ ಒಟ್ಟು 24 ರಾಜ್ಯಸಭೆ ಸ್ಥಾನಗಳಿಗೆ ಕೇಂದ್ರ ಚುನಾವಣಾ ಆಯೋಗವು ಅಧಿಕೃತವಾಗಿ ಚುನಾವಣಾ ಪ್ರಕ್ರಿಯೆಯನ್ನು ಆರಂಭಿಸಿದೆ. ವಿವಿಧ ರಾಜ್ಯಗಳ ವಿಧಾನಸಭೆಗಳಿಂದ ಚುನಾಯಿತರಾಗುವ ಈ ಸ್ಥಾನಗಳಿಗೆ ಜೂನ್ 18 ರಂದು ಮತದಾನ ನಡೆಯಲಿದ್ದು, ಅಂದೇ ಮತ ಎಣಿಕೆ ಪ್ರಕ್ರಿಯೆಯೂ ಪೂರ್ಣಗೊಂಡು ಫಲಿತಾಂಶ ಪ್ರಕಟವಾಗಲಿದೆ. ಚುನಾವಣೆಗೆ ನಾಮಪತ್ರ ಸಲ್ಲಿಸಲು ಜೂನ್ 8 ಕಡೆಯ ದಿನವಾಗಿದ್ದು, ನಾಮಪತ್ರ ವಾಪಸ್ ಪಡೆಯಲು ಜೂನ್ 11 ಕೊನೆಯ ದಿನವಾಗಿದೆ ಎಂದು ಆಯೋಗ ತಿಳಿಸಿದೆ. ಸದ್ಯ ಕರ್ನಾಟಕವನ್ನು ಪ್ರತಿನಿಧಿಸುತ್ತಿರುವ ಜೆಡಿಎಸ್ ವರಿಷ್ಠ ಹಾಗೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಬೆಳಗಾವಿ ಬಿಜೆಪಿ ಮುಖಂಡ ಈರಣ್ಣ ಕಡಾಡಿ ಮತ್ತು ದಕ್ಷಿಣ ಕನ್ನಡ ಬಿಜೆಪಿ ಮುಖಂಡ ಕೆ. ನಾರಾಯಣ ಅವರ ಪ್ರಸಕ್ತ ರಾಜ್ಯಸಭೆ ಅವಧಿಯು ಇದೇ ಜೂನ್ 25 ರಂದು ಕೊನೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ತೆರವಾಗಲಿರುವ ಸ್ಥಾನಗಳಿಗೆ ರಾಜಕೀಯ ವಲಯದಲ್ಲಿ ಭಾರಿ ಚಟುವಟಿಕೆಗಳು ಆರಂಭವಾಗಿವೆ.

​ಪ್ರಸ್ತುತ ವಿಧಾನಸಭೆಯಲ್ಲಿರುವ ಶಾಸಕರ ಸಂಖ್ಯಾ ಬಲದ ಆಧಾರದ ಮೇಲೆ ಲೆಕ್ಕಾಚಾರ ಹಾಕಿದರೆ, ಕರ್ನಾಟಕದಿಂದ ತೆರವಾಗಲಿರುವ ನಾಲ್ಕು ಸ್ಥಾನಗಳ ಪೈಕಿ 3 ಸ್ಥಾನಗಳು ಆಡಳಿತಾರೂಢ ಕಾಂಗ್ರೆಸ್‌ಗೆ ಸುಲಭವಾಗಿ ಲಭಿಸಲಿವೆ. ಇನ್ನುಳಿದ ಒಂದು ಸ್ಥಾನ ಬಿಜೆಪಿಗೆ ಸಿಗುವ ಸಾಧ್ಯತೆ ದಟ್ಟವಾಗಿದೆ. ಈ ನಡುವೆ 93ರ ಇಳಿ ವಯಸ್ಸಿನಲ್ಲೂ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಮತ್ತೊಂದು ಅವಧಿಗೆ ರಾಜ್ಯಸಭೆ ಪ್ರವೇಶಿಸಲು ತೀವ್ರ ಉತ್ಸುಕರಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ. ಆದರೆ, ಜೆಡಿಎಸ್ ಪಕ್ಷಕ್ಕೆ ಸ್ವತಂತ್ರವಾಗಿ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಲು ಅಗತ್ಯವಿರುವ ಸಂಖ್ಯಾ ಬಲ ವಿಧಾನಸಭೆಯಲ್ಲಿ ಇಲ್ಲ. ಈ ಕಾರಣದಿಂದಾಗಿ, ಮಿತ್ರಪಕ್ಷವಾದ ಬಿಜೆಪಿ ಏನಾದರೂ ಸಹಾಯಹಸ್ತ ಚಾಚಿದರೆ ಮಾತ್ರ ದೇವೇಗೌಡರು ಮತ್ತೊಮ್ಮೆ ಸಂಸತ್ತಿನ ಮೇಲ್ಮನೆ ಪ್ರವೇಶಿಸಲು ಸಾಧ್ಯ ಎಂಬ ಲೆಕ್ಕಾಚಾರಗಳು ಜೆಡಿಎಸ್ ಪಾಳಯದಲ್ಲಿ ನಡೆದಿವೆ. ದೇವೇಗೌಡರ ಮುಂದಿನ ರಾಜಕೀಯ ನಡೆ ಮತ್ತು ಬಿಜೆಪಿ ನಿಲುವು ಈಗ ತೀವ್ರ ಕುತೂಹಲ ಮೂಡಿಸಿದೆ.

Category
ಕರಾವಳಿ ತರಂಗಿಣಿ