image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪ್ರಧಾನಿ ವಿದೇಶ ಪ್ರವಾಸ ಟೀಕಿಸಿದ ಕಾಂಗ್ರೆಸ್‌ಗೆ ಶರದ್ ಪವಾರ್ ಖಡಕ್ ಟಾಂಗ್: ರಾಷ್ಟ್ರೀಯ ಪ್ರತಿಷ್ಠೆಗೆ ಧಕ್ಕೆ ತರಬೇಡಿ ಎಂದು ಕಿವಿಮಾತು

ಪ್ರಧಾನಿ ವಿದೇಶ ಪ್ರವಾಸ ಟೀಕಿಸಿದ ಕಾಂಗ್ರೆಸ್‌ಗೆ ಶರದ್ ಪವಾರ್ ಖಡಕ್ ಟಾಂಗ್: ರಾಷ್ಟ್ರೀಯ ಪ್ರತಿಷ್ಠೆಗೆ ಧಕ್ಕೆ ತರಬೇಡಿ ಎಂದು ಕಿವಿಮಾತು

ನವದೆಹಲಿ : ​ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಿ ಪ್ರವಾಸವನ್ನು ಕಾಂಗ್ರೆಸ್ ಸೇರಿದಂತೆ ವಿರೋಧ ಪಕ್ಷಗಳು ತೀವ್ರವಾಗಿ ಟೀಕಿಸುತ್ತಿರುವುದಕ್ಕೆ ರಾಷ್ಟ್ರೀಯತಾವಾದಿ ಕಾಂಗ್ರೆಸ್ ಪಕ್ಷದ (NCP) ಹಿರಿಯ ನಾಯಕ ಶರದ್ ಪವಾರ್ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಆಂತರಿಕ ರಾಜಕೀಯ ಭಿನ್ನಾಭಿಪ್ರಾಯಗಳು ದೇಶದ ಗೌರವ ಮತ್ತು ರಾಷ್ಟ್ರೀಯ ಪ್ರತಿಷ್ಠೆಗೆ ಧಕ್ಕೆಯನ್ನುಂಟು ಮಾಡಬಾರದು ಎಂದು ಅವರು ಪ್ರತಿಪಾದಿಸಿದ್ದಾರೆ. ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪವಾರ್, ರಾಜಕೀಯವಾಗಿ ನಮ್ಮ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ, ದೇಶದ ಗೌರವವನ್ನು ಹಾಳು ಮಾಡುವ ರೇಖೆಯನ್ನು ಯಾವುದೇ ರಾಜಕೀಯ ಪಕ್ಷಗಳು ದಾಟಬಾರದು ಎಂದು ಎಚ್ಚರಿಸಿದ್ದಾರೆ. ಪ್ರಧಾನಿ ಮೋದಿಯವರು ಭಾರತದ ಹೊರಗೆ ದೇಶದ ಪ್ರತಿಷ್ಠೆಯನ್ನು ಎತ್ತಿಹಿಡಿಯುವ ಕೆಲಸ ಮಾಡುತ್ತಿದ್ದಾರೆ. ನಮಗೆ ವಿಭಿನ್ನ ರಾಜಕೀಯ ದೃಷ್ಟಿಕೋನಗಳಿರಬಹುದು, ಆದರೆ ರಾಷ್ಟ್ರದ ಗೌರವದ ವಿಷಯಕ್ಕೆ ಬಂದಾಗ ಇಂತಹ ರಾಜಕೀಯ ಭಿನ್ನಾಭಿಪ್ರಾಯಗಳನ್ನು ತರಬಾರದು ಎಂದು ಅವರು ಕಿವಿಮಾತು ಹೇಳಿದ್ದಾರೆ.

​ಇದಕ್ಕೂ ಮುನ್ನ ಪ್ರಧಾನಿ ಮೋದಿಯವರ ಪ್ರವಾಸವನ್ನು ತೀವ್ರವಾಗಿ ಪ್ರಶ್ನಿಸಿದ್ದ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ, ದೇಶ ಈಗ ಬಿಕ್ಕಟ್ಟಿನ ಸಮಯದಲ್ಲಿದೆ ಎಂದು ಕಳವಳ ವ್ಯಕ್ತಪಡಿಸಿದ್ದರು. ದೇಶದ ಜನರಿಗೆ ಎಲ್ಲಿಗೂ ಸಹ ಪ್ರಯಾಣಿಸಬೇಡಿ ಎಂದು ಹೇಳಿ, ಪ್ರಧಾನಿಗಳು ಮಾತ್ರ ಐದು ದೇಶಗಳ ಪ್ರವಾಸಕ್ಕೆ ಹೊರಟಿದ್ದಾರೆ ಎಂದು ಅವರು ವಿರೋಧ ವ್ಯಕ್ತಪಡಿಸಿದ್ದರು. ಅಷ್ಟೇ ಅಲ್ಲದೆ, ಮುಂದಿನ ದಿನಗಳಲ್ಲಿ ದೇಶ ಎದುರಿಸಲಿರುವ ಆರ್ಥಿಕ ಆಘಾತವನ್ನು ದೇಶದ ದೊಡ್ಡ ಉದ್ಯಮಿಗಳಾದ ಅಂಬಾನಿ ಅಥವಾ ಅದಾನಿ ಅನುಭವಿಸುವುದಿಲ್ಲ, ಬದಲಿಗೆ ಭಾರತದ ಸಾಮಾನ್ಯ ಪ್ರಜೆ ಅನುಭವಿಸಲಿದ್ದಾನೆ ಎಂದು ರಾಹುಲ್ ಗಾಂಧಿ ಆಕ್ರೋಶ ಹೊರಹಾಕಿದ್ದರು.

​ಮತ್ತೊಂದೆಡೆ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ ಬಣ) ಸಂಸದ ಸಂಜಯ್ ರಾವತ್ ಕೂಡ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದು, ದೇಶ ಕಠಿಣ ಪರಿಸ್ಥಿತಿಯನ್ನು ಎದುರಿಸಲು ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ದೇಶ ಸುತ್ತುವುದು ಬೇಕಿತ್ತೇ ಎಂದು ಪ್ರಶ್ನಿಸಿದ್ದಾರೆ. ಪ್ರಧಾನಿಯಾದವರು ದೇಶದ ಜನರ ಜೊತೆ ನಿಲ್ಲಬೇಕಾದದ್ದು ಇಂದಿನ ಅಗತ್ಯವಾಗಿದೆ. ಆದರೆ ನಮ್ಮ ಮೋದಿ ಸಾಹೇಬರು ವಿದೇಶ ಪ್ರವಾಸದಲ್ಲಿ ಮಗ್ನರಾಗಿದ್ದಾರೆ. ಅವರಿಗೆ ತಾವು ತೆರಳುವ ದೇಶದ ಅತ್ಯುನ್ನತ ಪ್ರಶಸ್ತಿಗಳನ್ನು ಪಡೆಯುವ ಹಪಹಪಿಯೇ ಅಧಿಕವಾಗಿದೆ ಎಂದು ಸಂಜಯ್ ರಾವತ್ ತೀಕ್ಷ್ಣವಾಗಿ ಟೀಕಿಸಿದ್ದಾರೆ. ಒಟ್ಟಾರೆಯಾಗಿ ಪ್ರಧಾನಿ ವಿದೇಶ ಪ್ರವಾಸದ ವಿಚಾರವಾಗಿ ವಿರೋಧ ಪಕ್ಷಗಳ ಒಕ್ಕೂಟದಲ್ಲೇ ಈಗ ಭಿನ್ನಸ್ವರ ಕೇಳಿಬಂದಂತಾಗಿದೆ.

Category
ಕರಾವಳಿ ತರಂಗಿಣಿ