image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವಿರೋಧಕ್ಕೆ ಮಣಿದ ಸಿಎಂ ವಿಜಯ್‌: ಆಪ್ತ ಜ್ಯೋತಿಷಿ ರಿಕ್ಕಿ ರಾಧನ್‌ ಪಂಡಿತ್‌ OSD ಹುದ್ದೆಯಿಂದ ವಜಾ

ವಿರೋಧಕ್ಕೆ ಮಣಿದ ಸಿಎಂ ವಿಜಯ್‌: ಆಪ್ತ ಜ್ಯೋತಿಷಿ ರಿಕ್ಕಿ ರಾಧನ್‌ ಪಂಡಿತ್‌ OSD ಹುದ್ದೆಯಿಂದ ವಜಾ

ಚೆನ್ನೈ: ತಮಿಳುನಾಡು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದು ಅಧಿಕೃತವಾಗಿ ಆಡಳಿತದ ಚುಕ್ಕಾಣಿ ಹಿಡಿದಿರುವ ಮುಖ್ಯಮಂತ್ರಿ ವಿಜಯ್‌, ಅಧಿಕಾರ ವಹಿಸಿಕೊಂಡ ಬೆನ್ನಲ್ಲೇ ಸಂಚಲನ ಮೂಡಿಸುವಂತಹ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ತಮ್ಮ ಆಪ್ತ ವಲಯದವರೇ ಆದ ಖ್ಯಾತ ಜ್ಯೋತಿಷಿ ರಿಕ್ಕಿ ರಾಧನ್‌ ಪಂಡಿತ್‌ ಅವರಿಗೆ ನೀಡಲಾಗಿದ್ದ ಮುಖ್ಯಮಂತ್ರಿಯವರ ವಿಶೇಷ ಕರ್ತವ್ಯ ಅಧಿಕಾರಿ (OSD) ಹುದ್ದೆಯನ್ನು ಹಿಂಪಡೆಯುವ ಮೂಲಕ ವಿಜಯ್ ಅಚ್ಚರಿ ಮೂಡಿಸಿದ್ದಾರೆ.

​ಇತ್ತೀಚೆಗೆ ನಡೆದ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ವಿಜಯ್ ಅವರ 'ತಮಿಳಿಗ ವೆಟ್ರಿ ಕಳಗಂ' (ಟಿವಿಕೆ) ಪಕ್ಷವು ಭರ್ಜರಿ ಜಯ ದಾಖಲಿಸಲಿದೆ ಎಂದು ರಿಕ್ಕಿ ರಾಧನ್‌ ಪಂಡಿತ್‌ ಭವಿಷ್ಯ ನುಡಿದಿದ್ದರು. ಅಷ್ಟೇ ಅಲ್ಲದೆ, ವಿಜಯ್‌ ಅವರಿಗೆ ಪ್ರಮಾಣವಚನ ಸ್ವೀಕರಿಸಲು ಶುಭ ಮುಹೂರ್ತವನ್ನು ನಿಗದಿಪಡಿಸುವಲ್ಲಿಯೂ ಇವರು ಪ್ರಮುಖ ಪಾತ್ರ ವಹಿಸಿದ್ದರು ಎನ್ನಲಾಗಿದೆ. ರಾಧನ್ ಪಂಡಿತ್ ಅವರು ಈಗಾಗಲೇ ಟಿವಿಕೆ ಪಕ್ಷದ ಅಧಿಕೃತ ವಕ್ತಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಆದರೆ, ಸರ್ಕಾರ ರಚನೆಯಾದ ಕೂಡಲೇ ಅವರಿಗೆ ಗೌರವಾನ್ವಿತ OSD ಹುದ್ದೆ ನೀಡಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿತ್ತು.

​ಜ್ಯೋತಿಷಿಯೊಬ್ಬರನ್ನು ಸರ್ಕಾರದ ಉನ್ನತ ಹುದ್ದೆಗೆ ನೇಮಕ ಮಾಡಿದ್ದಕ್ಕೆ ಟಿವಿಕೆ ಪಕ್ಷದೊಳಗೇ ಅಸಮಾಧಾನ ಸ್ಫೋಟಗೊಂಡಿತ್ತು. ಇದರೊಂದಿಗೆ ಸರ್ಕಾರದ ಪ್ರಮುಖ ಮಿತ್ರಪಕ್ಷವಾದ ವಿಡುತಲೈ ಚಿರುತೈಗಲ್ ಕಚ್ಚಿ (ವಿಸಿಕೆ) ಮತ್ತು ಎಡಪಕ್ಷಗಳು ವಿಜಯ್‌ ಅವರ ಈ ನಿರ್ಧಾರವನ್ನು ಬಹಿರಂಗವಾಗಿಯೇ ಟೀಕಿಸಿದ್ದವು. ಜಾತ್ಯತೀತ ಮತ್ತು ವೈಜ್ಞಾನಿಕ ಮನೋಭಾವದ ಆಡಳಿತ ನೀಡುವುದಾಗಿ ಭರವಸೆ ನೀಡಿದ್ದ ವಿಜಯ್‌, ಜ್ಯೋತಿಷಿಗೆ ಸ್ಥಾನ ನೀಡಿದ್ದು ಸರಿಯಲ್ಲ ಎಂಬ ಒತ್ತಡ ಎಲ್ಲೆಡೆಯಿಂದ ಕೇಳಿಬಂದಿತ್ತು.

​ಈ ಕುರಿತು ಸಮರ್ಥನೆ ನೀಡಿದ್ದ ಟಿವಿಕೆ ನಾಯಕ ಸಿಟಿ ನಿರ್ಮಲ್ ಕುಮಾರ್, "ರಾಧನ್ ಪಂಡಿತ್ ಅವರಿಗೆ ಹುದ್ದೆ ನೀಡಿರುವುದು ಅವರ ಜ್ಯೋತಿಷ್ಯದ ಕಾರಣಕ್ಕಾಗಿ ಅಲ್ಲ, ಬದಲಾಗಿ ಪಕ್ಷಕ್ಕಾಗಿ ಅವರು ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಜವಾಬ್ದಾರಿ ನೀಡಲಾಗಿತ್ತು" ಎಂದು ಸ್ಪಷ್ಟಪಡಿಸಿದ್ದರು. ಆದರೂ, ಮಿತ್ರಪಕ್ಷಗಳ ವಿರೋಧ ಮತ್ತು ಸಾರ್ವಜನಿಕ ವಲಯದಲ್ಲಿ ವ್ಯಕ್ತವಾದ ಟೀಕೆಗಳಿಗೆ ಮಣಿದಿರುವ ಮುಖ್ಯಮಂತ್ರಿ ವಿಜಯ್‌, ಅಂತಿಮವಾಗಿ ಜ್ಯೋತಿಷಿ ರಿಕ್ಕಿ ರಾಧನ್ ಪಂಡಿತ್ ಅವರನ್ನು OSD ಹುದ್ದೆಯಿಂದ ಕೈಬಿಡಲು ತೀರ್ಮಾನಿಸಿದ್ದಾರೆ. ಈ ನಿರ್ಧಾರವು ತಮಿಳುನಾಡು ರಾಜಕೀಯದಲ್ಲಿ ಹೊಸ ಚರ್ಚೆಗೆ ನಾಂದಿ ಹಾಡಿದೆ.

Category
ಕರಾವಳಿ ತರಂಗಿಣಿ