image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆ: ಇತಿಹಾಸ ನೆನಪಿಸಿ ಸಿಎಂಗೆ ದೇವೇಗೌಡರ ಖಾರವಾದ ಪ್ರತಿಕ್ರಿಯೆ

ಮೋದಿ ವಿರುದ್ಧ ಸಿದ್ದರಾಮಯ್ಯ ಟೀಕೆ: ಇತಿಹಾಸ ನೆನಪಿಸಿ ಸಿಎಂಗೆ ದೇವೇಗೌಡರ ಖಾರವಾದ ಪ್ರತಿಕ್ರಿಯೆ

ಹಾಸನ : ​ಮೂರು ರಾಷ್ಟ್ರಗಳ ನಡುವಿನ ಯುದ್ಧದ ಪರಿಣಾಮವಾಗಿ ಭಾರತಕ್ಕೆ ಬರಬೇಕಿದ್ದ ಹಡಗು ಮುಳುಗಡೆಯಾಗಿರುವ ಘಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜವಾಬ್ದಾರರಲ್ಲ ಎಂದು ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸ್ಪಷ್ಟಪಡಿಸಿದ್ದಾರೆ. ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ದೇಶದ ವಿದೇಶಾಂಗ ನೀತಿಯಿಂದಾಗಿ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ ಬೆಲೆ ಏರಿಕೆಯಾಗಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಟೀಕೆಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

​ಬಾಂಗ್ಲಾ ವಿಭಜನೆಯ ಇತಿಹಾಸವನ್ನು ಮೆಲುಕು ಹಾಕಿದ ದೇವೇಗೌಡರು, "ಅಂದು ಕೇವಲ ಒಂದು ರಾಷ್ಟ್ರದ ಮೇಲೆ ಯುದ್ಧ ನಡೆದಾಗ ಇಂದಿರಾ ಗಾಂಧಿಯವರೇ ಪೆಟ್ರೋಲ್ ಮತ್ತು ಸೀಮೆಎಣ್ಣೆ ಬೆಲೆ ಏರಿಸಿದ್ದರು. ಅಷ್ಟೇ ಅಲ್ಲದೆ, ಅಂದು ಜನರಿಗೆ ದಿನಕ್ಕೆ ಎರಡು ಬಾರಿ ಕಾಫಿ ಕುಡಿಯುವ ಬದಲು ಒಂದು ಬಾರಿ ಕುಡಿಯಿರಿ ಎಂದು ಕರೆ ನೀಡಿದ್ದರು. ಅಂದಿನ ಪರಿಸ್ಥಿತಿಯೇ ಹಾಗಿತ್ತು. ಈಗ ಮೂರು ದೇಶಗಳ ನಡುವೆ ಯುದ್ಧ ನಡೆಯುತ್ತಿರುವಾಗ ಪ್ರಧಾನಿಯವರ ಮೇಲೆ ಲಘುವಾಗಿ ಮಾತನಾಡುವುದು ಎಷ್ಟು ಸರಿ?" ಎಂದು ಪ್ರಶ್ನಿಸಿದರು. 18 ಬಾರಿ ಬಜೆಟ್ ಮಂಡಿಸಿರುವ ಸಿದ್ದರಾಮಯ್ಯನವರು ಇತಿಹಾಸ ತಿಳಿದು ಮಾತನಾಡಬೇಕು ಎಂದು ಅವರು ಕಿವಿಮಾತು ಹೇಳಿದರು.

​ಇದೇ ಸಂದರ್ಭದಲ್ಲಿ ತಮಿಳುನಾಡು ರಾಜಕೀಯದ ಕುರಿತು ಮಾತನಾಡಿದ ದೇವೇಗೌಡರು, ನಟ ವಿಜಯ್ ಅವರ ರಾಜಕೀಯ ಪ್ರವೇಶ ಮತ್ತು ಯಶಸ್ಸನ್ನು ಶ್ಲಾಘಿಸಿದರು. ಎಂಜಿಆರ್, ಕರುಣಾನಿಧಿ, ಜಯಲಲಿತಾ ಅವರಂತಹ ದಿಗ್ಗಜರ ಪಕ್ಷಗಳನ್ನು ಹಿಂದಿಕ್ಕಿ ಒಬ್ಬ ಸಾಮಾನ್ಯ ನಿರ್ದೇಶಕನ ಮಗ ಮುಖ್ಯಮಂತ್ರಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಅಭಿನಂದಿಸಿದರು. ಕರ್ನಾಟಕ ಮತ್ತು ತಮಿಳುನಾಡು ನಡುವಿನ ಕಾವೇರಿ ನದಿ ನೀರಿನ ವಿವಾದದ ಕುರಿತು ಪ್ರಸ್ತಾಪಿಸಿದ ಅವರು, ಮುಂದಿನ ದಿನಗಳಲ್ಲಿ ವಿಜಯ್ ಅವರೊಂದಿಗೆ ಕುಳಿತು ಮಾತನಾಡುವ ಮೂಲಕ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಪರೋಕ್ಷವಾಗಿ ತಿಳಿಸಿದರು.

Category
ಕರಾವಳಿ ತರಂಗಿಣಿ