image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಆಘಾತ: ಸೋಲಿನ ಬೆನ್ನಲ್ಲೇ ಬಂಡಾಯದ ಬಿಸಿ, ಮೂವರು ವಕ್ತಾರರ ಅಮಾನತು

ಬಂಗಾಳದಲ್ಲಿ ತೃಣಮೂಲ ಕಾಂಗ್ರೆಸ್‌ಗೆ ಆಘಾತ: ಸೋಲಿನ ಬೆನ್ನಲ್ಲೇ ಬಂಡಾಯದ ಬಿಸಿ, ಮೂವರು ವಕ್ತಾರರ ಅಮಾನತು

ಕೋಲ್ಕತ್ತಾ: ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಎದುರಾದ ಹೀನಾಯ ಸೋಲಿನ ಬೆನ್ನಲ್ಲೇ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಪಕ್ಷದಲ್ಲಿ ಆಂತರಿಕ ಕಲಹ ಸ್ಫೋಟಗೊಂಡಿದೆ. ಮಾಜಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಅಭಿಷೇಕ್ ಬ್ಯಾನರ್ಜಿ ನೇತೃತ್ವದ ವಿರುದ್ಧ ಪಕ್ಷದ ನಾಯಕರೇ ಈಗ ಬಹಿರಂಗವಾಗಿ ತಿರುಗಿಬಿದ್ದಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆಗಳ ಆರೋಪದ ಮೇಲೆ ಟಿಎಂಸಿ ತನ್ನ ಮೂವರು ಪ್ರಮುಖ ವಕ್ತಾರರನ್ನು ಆರು ವರ್ಷಗಳ ಕಾಲ ಅಮಾನತುಗೊಳಿಸಿದ್ದು, ರಾಜ್ಯ ರಾಜಕಾರಣದಲ್ಲಿ ತಲ್ಲಣ ಸೃಷ್ಟಿಸಿದೆ.

​ಪಕ್ಷದ ಅಧಿಕೃತ ಧ್ವನಿಯಾಗಿ ಗುರುತಿಸಿಕೊಂಡಿದ್ದ ವಕ್ತಾರ ರಿಜು ದತ್ತಾ ಅವರ ನಡೆ ಎಲ್ಲರನ್ನೂ ಬೆರಗುಗೊಳಿಸಿದೆ. ತಮ್ಮ ಎಕ್ಸ್ (ಟ್ವಿಟರ್) ಹ್ಯಾಂಡಲ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಅವರು, ಈ ಹಿಂದೆ ಮುಖ್ಯಮಂತ್ರಿ ಸುವೇಂದು ಅಧಿಕಾರಿ ಮತ್ತು ಬಿಜೆಪಿ ನಾಯಕರ ವಿರುದ್ಧ ತಾವು ನೀಡಿದ್ದ ನಿಂದನಾತ್ಮಕ ಹೇಳಿಕೆಗಳಿಗಾಗಿ ಬಹಿರಂಗವಾಗಿ ಕ್ಷಮೆಯಾಚಿಸಿದ್ದಾರೆ. "ಸುವೇಂದು ಅಧಿಕಾರಿ ಅವರು ವಿರೋಧ ಪಕ್ಷದ ನಾಯಕರಾಗಿದ್ದಾಗ ಅವರ ವಿರುದ್ಧ ಕೆಟ್ಟದಾಗಿ ಮಾತನಾಡುವಂತೆ ಪಕ್ಷದ ಒಳಗಿನಿಂದಲೇ ನನಗೆ ತೀವ್ರ ಒತ್ತಡ ಮತ್ತು ಬೆದರಿಕೆಗಳು ಬಂದಿದ್ದವು" ಎಂದು ದತ್ತಾ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ಪ್ರಸ್ತುತ ಕಷ್ಟದ ಸಮಯದಲ್ಲಿ ತಮಗೆ ರಕ್ಷಣೆ ನೀಡಿದ್ದಕ್ಕಾಗಿ ಬಿಜೆಪಿಯನ್ನು ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

​ಇತ್ತ ಮಾಜಿ ಕ್ರಿಕೆಟಿಗ ಮತ್ತು ಮಮತಾ ಸಂಪುಟದ ಮಾಜಿ ಸಚಿವ ಮನೋಜ್ ತಿವಾರಿ ಕೂಡ ಪಕ್ಷದ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ ಮಾಡಿದ್ದಾರೆ. "2026ರ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರತಿಯೊಬ್ಬ ಅಭ್ಯರ್ಥಿಯಿಂದ 5 ಕೋಟಿ ರೂಪಾಯಿ ಬೇಡಿಕೆ ಇಡಲಾಗಿತ್ತು. ಈ ಹಣ ನೀಡಲು ನಿರಾಕರಿಸಿದ್ದರಿಂದಲೇ ನನಗೆ ಟಿಕೆಟ್ ತಪ್ಪಿಸಲಾಯಿತು" ಎಂದು ತಿವಾರಿ ವಾಗ್ದಾಳಿ ನಡೆಸಿದ್ದಾರೆ. ಅಲ್ಲದೆ, ಹಿರಿಯ ಸಚಿವ ಅರೂಪ್ ಬಿಸ್ವಾಸ್ ಅವರ ವಿರುದ್ಧ ಕಿಡಿಕಾರಿದ ಅವರು, ಕ್ರೀಡಾ ಇಲಾಖೆಯಲ್ಲಿ ಹಿರಿಯ ಸಚಿವರ ಹಸ್ತಕ್ಷೇಪ ಮತ್ತು ಅಸಮರ್ಪಕ ನಿರ್ವಹಣೆಯಿಂದಾಗಿ ಫುಟ್ಬಾಲ್ ತಾರೆ ಲಿಯೋನೆಲ್ ಮೆಸ್ಸಿ ಕಾರ್ಯಕ್ರಮದಿಂದ ಅರ್ಧದಲ್ಲೇ ನಿರ್ಗಮಿಸುವಂತಾಯಿತು. ಇದು ಅಂತರಾಷ್ಟ್ರೀಯ ಮಟ್ಟದಲ್ಲಿ ರಾಜ್ಯಕ್ಕೆ ಮುಜುಗುರ ತಂದಿದೆ ಎಂದು ಆರೋಪಿಸಿದ್ದಾರೆ.

​ಪಕ್ಷದ ಶಿಸ್ತು ಉಲ್ಲಂಘಿಸಿದ ಕಾರಣಕ್ಕೆ ಅಮಾನತುಗೊಂಡಿರುವ ಇತರ ವಕ್ತಾರರಾದ ಕೊಹಿನೂರ್ ಮಜುಂದಾರ್ ಮತ್ತು ಕಾರ್ತಿಕ್ ಘೋಷ್ ಕೂಡ ಪಕ್ಷದ ನಾಯಕತ್ವದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. "ಅಭಿಷೇಕ್ ಬ್ಯಾನರ್ಜಿ ಅವರನ್ನು ಭೇಟಿ ಮಾಡಲು ಪಕ್ಷದ ನಿಷ್ಠಾವಂತ ನಾಯಕರು ಗಂಟೆಗಟ್ಟಲೆ ಕಾಯಬೇಕಾದ ಪರಿಸ್ಥಿತಿ ಇತ್ತು" ಎಂದು ಮಜುಂದಾರ್ ಮಾಧ್ಯಮಗಳ ಮುಂದೆ ಅಳಲು ತೋಡಿಕೊಂಡಿದ್ದಾರೆ. 15 ವರ್ಷಗಳ ಆಡಳಿತದ ನಂತರ ಅಧಿಕಾರ ಕಳೆದುಕೊಂಡಿರುವ ಟಿಎಂಸಿಗೆ ಈ ಆಂತರಿಕ ಅಸಮಾಧಾನಗಳು ದೊಡ್ಡ ತಲೆನೋವಾಗಿ ಪರಿಣಮಿಸಿವೆ. ಅಧಿಕಾರವಿಲ್ಲದ ಸಮಯದಲ್ಲಿ ಪಕ್ಷದ ಕಾರ್ಯಕರ್ತರು ಮತ್ತು ನಾಯಕರನ್ನು ಒಗ್ಗೂಡಿಸಿ ಕೊಂಡು ಹೋಗುವುದು ಮಮತಾ ಬ್ಯಾನರ್ಜಿ ಅವರಿಗೆ ಈಗ ದೊಡ್ಡ ಸವಾಲಾಗಿದೆ.

Category
ಕರಾವಳಿ ತರಂಗಿಣಿ