image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ರಾಜಭವನ ಬಿಜೆಪಿ ಕಚೇರಿಯಾಗಿದೆ ಹಾಗೂ ಐಪಿಎಲ್ ಸ್ಥಳಾಂತರದ ಹಿಂದೆ ಗುಜರಾತ್ ಲಾಬಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ರಾಜಭವನ ಬಿಜೆಪಿ ಕಚೇರಿಯಾಗಿದೆ ಹಾಗೂ ಐಪಿಎಲ್ ಸ್ಥಳಾಂತರದ ಹಿಂದೆ ಗುಜರಾತ್ ಲಾಬಿ ಇದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿ

ಕಲಬುರಗಿ : ​ಕಳೆದ ಒಂದು ದಶಕದಿಂದ ರಾಜ್ಯಪಾಲರ ಕಚೇರಿಯು ಬಿಜೆಪಿ ಮತ್ತು ಆರ್‌ಎಸ್‌ಎಸ್ ಕಚೇರಿಯಂತೆ ಕಾರ್ಯನಿರ್ವಹಿಸುತ್ತಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಗಂಭೀರವಾಗಿ ಆರೋಪಿಸಿದ್ದಾರೆ. ಬೆಂಗಳೂರಿನ ತಮ್ಮ ನಿವಾಸದ ಬಳಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ತಮಿಳುನಾಡು ಸರ್ಕಾರ ರಚನೆಯ ವಿಚಾರದಲ್ಲಿ ರಾಜ್ಯಪಾಲರ ನಡೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು. ತಮಿಳುನಾಡಿನಲ್ಲಿ ಬಹುಮತವಿದ್ದರೂ ರಾಜ್ಯಪಾಲರು ಅಡ್ಡಿಪಡಿಸುತ್ತಿದ್ದಾರೆ, ಬಹುಮತವನ್ನು ಸದನದ ಒಳಗಡೆ ಸಾಬೀತುಪಡಿಸಬೇಕೇ ಹೊರತು ಮೊದಲೇ ಸಹಿ ತನ್ನಿ ಎಂದು ಕೇಳುವುದು ಸಂವಿಧಾನ ವಿರೋಧಿ ಎಂದು ಅವರು ವಾಗ್ದಾಳಿ ನಡೆಸಿದರು. ಪಶ್ಚಿಮ ಬಂಗಾಳ ಮತ್ತು ಮಹಾರಾಷ್ಟ್ರದ ಉದಾಹರಣೆಗಳನ್ನು ನೀಡಿದ ಅವರು, ಬೆಳಗಿನ ಜಾವ 5 ಗಂಟೆಗೆ ಪ್ರಮಾಣವಚನ ಬೋಧಿಸಿದಾಗ ಎಷ್ಟು ಸಹಿಗಳನ್ನು ಪಡೆಯಲಾಗಿತ್ತು ಎಂದು ಪ್ರಶ್ನಿಸಿದರು. ರಾಜ್ಯಪಾಲರು ಸಂವಿಧಾನದ ಮುಖ್ಯಸ್ಥರೇ ಹೊರತು ಸಂವಿಧಾನಕ್ಕಿಂತ ದೊಡ್ಡವರಲ್ಲ, ರಾಜಕೀಯ ಲಾಭಕ್ಕಾಗಿ ಆ ಹುದ್ದೆಗೆ ಅಗೌರವ ತೋರಬಾರದು ಎಂದು ಅವರು ಎಚ್ಚರಿಸಿದರು.

​ಇದೇ ವೇಳೆ ಐಪಿಎಲ್ ಪಂದ್ಯಗಳ ಸ್ಥಳಾಂತರದ ಕುರಿತು ಪ್ರತಿಕ್ರಿಯಿಸಿದ ಸಚಿವರು, ಕೇವಲ ಟಿಕೆಟ್‌ಗಳ ಕಾರಣಕ್ಕಾಗಿ ಪಂದ್ಯಗಳನ್ನು ಸ್ಥಳಾಂತರಿಸಲಾಗಿಲ್ಲ ಎಂದು ಸ್ಪಷ್ಟಪಡಿಸಿದರು. ಅಮಿತ್ ಶಾ ಅವರು ಹಣ ನೀಡಿ ಮ್ಯಾಚ್ ನೋಡುತ್ತಾರೆಯೇ ಎಂದು ಪ್ರಶ್ನಿಸಿದ ಖರ್ಗೆ, ಶಾಸಕರು ಮತ್ತು ಸಂಸದರು ಟಿಕೆಟ್ ಕೇಳುವುದು ಸಹಜ, ಆದರೆ ಭದ್ರತೆಯ ನೆಪವೊಡ್ಡಿ ಪಂದ್ಯಗಳನ್ನು ಗುಜರಾತ್‌ಗೆ ಕೊಂಡೊಯ್ದಿರುವುದು ಕೇವಲ ಲಾಭಕ್ಕಾಗಿ ಮಾತ್ರ ಎಂದರು. ಪಂದ್ಯಗಳನ್ನು ಸ್ಥಳಾಂತರಿಸಬೇಕಿದ್ದರೆ ಮುಂಬೈಗೆ ಮಾಡಬಹುದಿತ್ತು, ಆದರೆ ಎಲ್ಲವನ್ನೂ ಗುಜರಾತ್‌ಗೆ ಕೊಂಡೊಯ್ಯುವ ಮೂಲಕ ರಾಜ್ಯಕ್ಕೆ ಅನ್ಯಾಯ ಮಾಡಲಾಗುತ್ತಿದೆ. ಇದನ್ನು ಮುಖ್ಯಮಂತ್ರಿಗಳು ಹಾಗೂ ಉಪಮುಖ್ಯಮಂತ್ರಿಗಳು ಈಗಾಗಲೇ ಖಂಡಿಸಿದ್ದಾರೆ ಎಂದು ತಿಳಿಸಿದರು.

​ಗ್ರಾಮೀಣಾಭಿವೃದ್ಧಿ ಯೋಜನೆಗಳ ಕುರಿತು ಮಾತನಾಡಿದ ಪ್ರಿಯಾಂಕ್ ಖರ್ಗೆ, ಕೇಂದ್ರ ಸರ್ಕಾರವು ಜಿ ರಾಂ ಜಿ ಯೋಜನೆ ಜಾರಿಗೆ ತರುವ ಮುನ್ನ ರಾಜ್ಯಗಳ ಜೊತೆ ಯಾವುದೇ ಚರ್ಚೆ ನಡೆಸಿಲ್ಲ ಎಂದು ಆರೋಪಿಸಿದರು. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಗಳ ಗಮನಕ್ಕೆ ತರದೆ ನಿರ್ಧಾರ ತೆಗೆದುಕೊಳ್ಳುವುದು ಸಂವಿಧಾನ ಬಾಹಿರ. ಆರ್ಥಿಕ ವರ್ಷ ಆರಂಭವಾಗಿ ಎರಡು ತಿಂಗಳಾದರೂ ಯೋಜನೆಯ ಕುರಿತು ಯಾವುದೇ ಸ್ಪಷ್ಟ ಚಿತ್ರಣವಿಲ್ಲ. ಎಷ್ಟು ಪಂಚಾಯಿತಿಗಳಿಗೆ ಎಷ್ಟು ಅನುದಾನ ಸಿಗುತ್ತದೆ ಎಂಬ ಬಗ್ಗೆ ಕೇಂದ್ರ ಸಚಿವರಿಗೇ ಮಾಹಿತಿ ಇಲ್ಲ ಎಂದು ಟೀಕಿಸಿದರು. ಕೇಂದ್ರದ ಮೈತ್ರಿ ಪಕ್ಷದ ನಾಯಕರಾದ ಚಂದ್ರಬಾಬು ನಾಯ್ಡು ಅವರೇ ಅನುದಾನ ಹೆಚ್ಚಳಕ್ಕೆ ಪತ್ರ ಬರೆದಿರುವಾಗ ಬಿಜೆಪಿ ನಾಯಕರು ಉತ್ತರಿಸಬೇಕು. ಕೇಂದ್ರದ ಇಂತಹ ಧೋರಣೆಗಳಿಂದ ಗ್ರಾಮೀಣ ಜನರ ಬದುಕು ಕಸಿದುಕೊಳ್ಳಲಾಗುತ್ತಿದೆ ಎಂದು ಸಚಿವರು ತೀವ್ರವಾಗಿ ಕಿಡಿಕಾರಿದರು.

Category
ಕರಾವಳಿ ತರಂಗಿಣಿ