image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ತಮಿಳುನಾಡು ರಾಜಕೀಯದಲ್ಲಿ ಸಂಚಲನ: ವಿಜಯ್ ಅಬ್ಬರಕ್ಕೆ ಬೆದರಿ ಒಂದಾಗುತ್ತವೆಯೇ ಡಿಎಂಕೆ-ಎಐಎಡಿಎಂಕೆ?

ತಮಿಳುನಾಡು ರಾಜಕೀಯದಲ್ಲಿ ಸಂಚಲನ: ವಿಜಯ್ ಅಬ್ಬರಕ್ಕೆ ಬೆದರಿ ಒಂದಾಗುತ್ತವೆಯೇ ಡಿಎಂಕೆ-ಎಐಎಡಿಎಂಕೆ?

ಚೆನ್ನೈ : ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ನಟ ವಿಜಯ್ ನೇತೃತ್ವದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಅನಿರೀಕ್ಷಿತ ಹಾಗೂ ಗಮನಾರ್ಹ ಜನಬೆಂಬಲ ಗಳಿಸುತ್ತಿದ್ದಂತೆಯೇ ರಾಜ್ಯದ ರಾಜಕೀಯ ಚಿತ್ರಣ ಸಂಪೂರ್ಣ ಬದಲಾದಂತೆ ಭಾಸವಾಗುತ್ತಿದೆ. ದಶಕಗಳಿಂದ ತಮಿಳುನಾಡು ರಾಜಕಾರಣವನ್ನು ಆಳುತ್ತಿರುವ ದ್ರಾವಿಡ ಪಕ್ಷಗಳಾದ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಈ ಬಾರಿ ಟಿವಿಕೆ ಸರ್ಕಾರ ರಚನೆಯನ್ನು ತಡೆಯಲು ಚುನಾವಣೋತ್ತರ ಹೊಂದಾಣಿಕೆಯಾಗಬಹುದು ಎಂಬ ಊಹಾಪೋಹಗಳು ದಟ್ಟವಾಗಿವೆ. ಈ ಕುರಿತು ರಾಜಕೀಯ ವಿಶ್ಲೇಷಕ ಸುಜಿತ್ ನಾಯರ್ ಅವರು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಶ್ಲೇಷಣೆಯು ಈಗ ರಾಜ್ಯಾದ್ಯಂತ ತೀವ್ರ ಚರ್ಚೆಗೆ ಗ್ರಾಸವಾಗಿದೆ. ತಮಿಳುನಾಡಿನ ಮತದಾರರು ಈ ಬಾರಿ ಅತ್ಯಂತ ನಿರ್ಣಾಯಕ ಹಾಗೂ ಐತಿಹಾಸಿಕ ತೀರ್ಪನ್ನು ನೀಡಿದ್ದು, ಇದು ರಾಜ್ಯದಲ್ಲಿ ದೊಡ್ಡ ರಾಜಕೀಯ ಬದಲಾವಣೆಯ ದಿಕ್ಸೂಚಿಯಾಗಿದೆ ಎಂಬುದು ವಿಶ್ಲೇಷಕರ ಅಭಿಪ್ರಾಯವಾಗಿದೆ.

​ಯಾವುದೇ ಬೆಲೆ ತೆತ್ತಾದರೂ ವಿಜಯ್ ಅವರ ಪಕ್ಷ ಅಧಿಕಾರ ಹಿಡಿಯುವುದನ್ನು ತಪ್ಪಿಸಲು ಈ ಎರಡು ಪರಂಪರಾಗತ ಎದುರಾಳಿ ಪಕ್ಷಗಳು ತೆರೆಯ ಮರೆಯ ಮಾತುಕತೆಯಲ್ಲಿ ತೊಡಗಿವೆ ಎಂಬ ವದಂತಿಗಳು ಹಬ್ಬಿವೆಯಾದರೂ, ಎರಡೂ ಪಕ್ಷಗಳ ನಾಯಕತ್ವದಿಂದ ಈವರೆಗೆ ಯಾವುದೇ ಅಧಿಕಾರಿಕ ಸ್ಪಷ್ಟನೆ ಬಂದಿಲ್ಲ. ಪ್ರಜಾಪ್ರಭುತ್ವದ ಆಶಯದಂತೆ ಜನರ ತೀರ್ಪು ಅಂತಿಮವಾಗಿದ್ದರೂ, ಕೇವಲ ಅಧಿಕಾರ ಹಿಡಿಯುವ ಅಥವಾ ಉಳಿಸಿಕೊಳ್ಳುವ ಉದ್ದೇಶದಿಂದ ನಡೆಯುವ ಇಂತಹ ಸಮೀಕರಣಗಳು ರಾಜಕೀಯ ಅವಕಾಶವಾದಿತನ ಎನಿಸಿಕೊಳ್ಳುತ್ತವೆ ಎಂಬ ಆತಂಕ ಸಾರ್ವಜನಿಕ ವಲಯದಲ್ಲಿದೆ. ವಿಶೇಷವಾಗಿ ಸಾಮಾಜಿಕ ನ್ಯಾಯ ಮತ್ತು ಸೈದ್ಧಾಂತಿಕ ಬದ್ಧತೆಯ ಮೇಲೆ ನಂಬಿಕೆಯಿಟ್ಟಿರುವ ಡಿಎಂಕೆ, ತನ್ನ ಕಡುವೈರಿ ಎಐಎಡಿಎಂಕೆಯೊಂದಿಗೆ ಕೈಜೋಡಿಸಿದರೆ ಅದು ಪಕ್ಷದ ವಿಶ್ವಾಸಾರ್ಹತೆಗೆ ದೊಡ್ಡ ಹೊಡೆತ ನೀಡಬಹುದು ಎಂದು ಹೇಳಲಾಗುತ್ತಿದೆ. ಸೈದ್ಧಾಂತಿಕವಾಗಿ ಟಿವಿಕೆ ಪಕ್ಷವು ಎಐಎಡಿಎಂಕೆಗಿಂತ ಡಿಎಂಕೆಗೆ ಹೆಚ್ಚು ಹತ್ತಿರವಾಗಿದೆ ಎಂಬ ಅಭಿಪ್ರಾಯಗಳ ನಡುವೆ ಇಂತಹ ಸಮೀಕರಣಗಳು ಕುತೂಹಲ ಮೂಡಿಸಿವೆ.

​ಮತ್ತೊಂದೆಡೆ, ಡಿಎಂಕೆ ವಿರೋಧವನ್ನೇ ತನ್ನ ಅಸ್ತಿತ್ವದ ಮೂಲವಾಗಿಸಿಕೊಂಡಿರುವ ಎಐಎಡಿಎಂಕೆಗೆ ಇಂತಹ ಮೈತ್ರಿ ಆತ್ಮಾಹುತಿ ನಿರ್ಧಾರವಾಗುವ ಸಾಧ್ಯತೆಯಿದೆ. ತನ್ನ ಕಾರ್ಯಕರ್ತರ ಮತ್ತು ಬೆಂಬಲಿಗರ ಆಕ್ರೋಶಕ್ಕೆ ತುತ್ತಾಗುವ ಭೀತಿಯೂ ಪಕ್ಷದ ಮುಂದಿದೆ. ಈ ಹಿಂದೆ ಮಹಾರಾಷ್ಟ್ರದಲ್ಲಿ ಶಿವಸೇನೆ, ಕಾಂಗ್ರೆಸ್ ಮತ್ತು ಎನ್‌ಸಿಪಿ ಒಂದಾಗಿ ಸರ್ಕಾರ ರಚಿಸಿದ ಉದಾಹರಣೆಯನ್ನು ವಿಶ್ಲೇಷಕರು ಇಲ್ಲಿ ಸ್ಮರಿಸುತ್ತಿದ್ದಾರೆ. ಅಂತಿಮವಾಗಿ ಅಧಿಕಾರಕ್ಕಾಗಿ ಸಿದ್ಧಾಂತಗಳನ್ನು ಬದಿಗಿಟ್ಟು ವಿರೋಧಿಗಳು ಒಂದಾಗುವುದು ಮತದಾರರಲ್ಲಿ ರಾಜಕೀಯದ ಬಗ್ಗೆ ಜಿಗುಪ್ಸೆ ಮೂಡಿಸುವಂತೆ ಮಾಡುತ್ತದೆ. ಒಟ್ಟಿನಲ್ಲಿ, ವಿಜಯ್ ಅವರ ಎಂಟ್ರಿಯಿಂದ ತಮಿಳುನಾಡು ರಾಜಕೀಯದಲ್ಲಿ ಹೊಸ ಆಯಾಮ ಸೃಷ್ಟಿಯಾಗಿದ್ದು, ಮುಂದಿನ ದಿನಗಳಲ್ಲಿ ಯಾವ ತಿರುವು ಪಡೆದುಕೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.

Category
ಕರಾವಳಿ ತರಂಗಿಣಿ