image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶಾಸಕ ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ; ವಿವಿಧ ಇಲಾಖೆಗಳಿಗೆ ಮಹತ್ವದ ಸೂಚನೆ

ಶಾಸಕ ಭರತ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಪ್ರಗತಿ ಪರಿಶೀಲನಾ ಸಭೆ; ವಿವಿಧ ಇಲಾಖೆಗಳಿಗೆ ಮಹತ್ವದ ಸೂಚನೆ

ಮಂಗಳೂರು: ಮಂಗಳೂರು ತಾಲೂಕು ಪಂಚಾಯತ್ ಕಚೇರಿಯಲ್ಲಿ ಶಾಸಕ ಡಾ. ವೈ. ಭರತ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ವಿವಿಧ ಇಲಾಖಾ ಅಧಿಕಾರಿಗಳ ಮಹತ್ವದ ಪ್ರಗತಿ ಪರಿಶೀಲನಾ ಸಭೆ ನಡೆಯಿತು. ಸಾರ್ವಜನಿಕರ ಆರೋಗ್ಯ, ಕೃಷಿ, ಶಿಕ್ಷಣ ಮತ್ತು ಮಳೆಗಾಲದ ಮುನ್ನೆಚ್ಚರಿಕಾ ಕ್ರಮಗಳ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಸಲಾಯಿತು.

​ಆರೋಗ್ಯ ಇಲಾಖೆಯ ವತಿಯಿಂದ ಮಲೇರಿಯಾ ಹಾಗೂ ಡೆಂಗ್ಯೂ ರೋಗಗಳ ಪರಿಣಾಮಕಾರಿ ನಿಯಂತ್ರಣ ಕ್ರಮಗಳನ್ನು ಕೈಗೊಳ್ಳುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಆಯುಷ್ ಇಲಾಖೆಯ ಹೊಸ ಯೋಜನೆಗಳು ಹಾಗೂ ಯೋಗ ಶಿಬಿರಗಳ ಆಯೋಜನೆ ಬಗ್ಗೆ ಮಾಹಿತಿ ಪಡೆಯಲಾಯಿತು. ತೋಟಗಾರಿಕೆ ಇಲಾಖೆಯು ಸಾವಯವ ಕೃಷಿ ಬಗ್ಗೆ ರೈತರಿಗೆ ಹೆಚ್ಚಿನ ಅರಿವು ಮೂಡಿಸುವ ಅಗತ್ಯವನ್ನು ಒತ್ತಿ ಹೇಳಿದರೆ, ಕೃಷಿ ಇಲಾಖೆಯು ಅತಿವೃಷ್ಟಿ ಮತ್ತು ಅನಾವೃಷ್ಟಿ ಸಂದರ್ಭಗಳಲ್ಲಿ ರೈತರಿಗೆ ವಿಮಾ ಪರಿಹಾರವನ್ನು ತ್ವರಿತವಾಗಿ ಪಾವತಿಸುವಂತೆ ಶಾಸಕರು ಸೂಚಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯು ವಿದ್ಯಾರ್ಥಿಗಳಿಗೆ ಹಾಸ್ಟೆಲ್ ಸೌಲಭ್ಯಗಳ ಕೊರತೆಯನ್ನು ನೀಗಿಸಲು ಹೊಸ ಹಾಸ್ಟೆಲ್ ಆರಂಭಿಸುವ ಪ್ರಸ್ತಾವನೆಗಳನ್ನು ವಿವರಿಸಿತು. ಪಶುಸಂಗೋಪನಾ ಇಲಾಖೆಯು ರೇಬಿಸ್ ತಡೆಗಟ್ಟಲು ಲಸಿಕೆ ಹಾಗೂ ಬೀದಿ ನಾಯಿಗಳ ಸಂತಾನಹರಣ ಶಸ್ತ್ರಚಿಕಿತ್ಸೆಗಳ ಕುರಿತು ಮಾಹಿತಿ ನೀಡಿತು. ಅರಣ್ಯ ಇಲಾಖೆಯು ಗ್ರಾಮ ಪ್ರದೇಶಗಳಲ್ಲಿ ಚಿರತೆಗಳ ಹಾವಳಿ ತಡೆಗಟ್ಟಿ, ಅವುಗಳನ್ನು ಸುರಕ್ಷಿತವಾಗಿ ಸೆರೆಹಿಡಿಯುವ ಕ್ರಮಗಳ ಬಗ್ಗೆ ಚರ್ಚಿಸಿತು. ಶಿಶು ಅಭಿವೃದ್ದಿ ಇಲಾಖೆಯು ಅಂಗನವಾಡಿಗಳಿಗೆ ಸ್ವಂತ ಕಟ್ಟಡ ಒದಗಿಸಲು ಕೈಗೊಂಡಿರುವ ಕ್ರಮಗಳನ್ನು ಸಭೆಯ ಗಮನಕ್ಕೆ ತಂದಿತು.

ಶಿಕ್ಷಣ ಕ್ಷೇತ್ರದಲ್ಲಿ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ 10ನೇ ತರಗತಿ ವಿದ್ಯಾರ್ಥಿಗಳು ಸಾಧಿಸಿದ ಗಮನಾರ್ಹ ಫಲಿತಾಂಶವನ್ನು ಶಾಸಕರು ಶ್ಲಾಘಿಸಿ, ಶಿಕ್ಷಕರ ಪರಿಶ್ರಮವನ್ನು ಪ್ರಶಂಸಿಸಿದರು. ಮುಂಬರುವ ಮಳೆಗಾಲದ ಹಿನ್ನೆಲೆಯಲ್ಲಿ ಮೆಸ್ಕಂ ಇಲಾಖೆಯು ಅಪಾಯಕಾರಿ ಮರದ ಕೊಂಬೆಗಳನ್ನು ಮುಂಚಿತವಾಗಿ ಕತ್ತರಿಸಬೇಕು ಮತ್ತು ನೀರಿನ ಪಂಪ್ ಸ್ಟೇಷನ್‌ಗಳಿಗೆ ನಿರಂತರ ವಿದ್ಯುತ್ ಪೂರೈಕೆ ಒದಗಿಸಬೇಕು ಎಂದು ಶಾಸಕರು ಕಟ್ಟುನಿಟ್ಟಿನ ನಿರ್ದೇಶನ ನೀಡಿದರು. ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಗೆ ಬೇಸಿಗೆಯಲ್ಲಿ ನೀರಿನ ಪೂರೈಕೆಯಲ್ಲಿ ಯಾವುದೇ ವ್ಯತ್ಯಯವಾಗದಂತೆ ಕ್ರಮ ಕೈಗೊಳ್ಳಲು ಸೂಚಿಸಲಾಯಿತು. ಸಭೆಯಲ್ಲಿ ಎಲ್ಲಾ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದು, ಅಭಿವೃದ್ಧಿ ಕಾರ್ಯಗಳ ಕುರಿತು ಚರ್ಚಿಸಿದರು.

Category
ಕರಾವಳಿ ತರಂಗಿಣಿ