image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಜಯ: ಟಿಎಂಸಿ ದುರಾಡಳಿತದ ಅಂತ್ಯ ಎಂದ ಶಾಸಕ ವೇದವ್ಯಾಸ ಕಾಮತ್

ಪಶ್ಚಿಮ ಬಂಗಾಳದಲ್ಲಿ ಬಿಜೆಪಿಯ ಐತಿಹಾಸಿಕ ಜಯ: ಟಿಎಂಸಿ ದುರಾಡಳಿತದ ಅಂತ್ಯ ಎಂದ ಶಾಸಕ ವೇದವ್ಯಾಸ ಕಾಮತ್

ಮಂಗಳೂರು: ಅಸ್ಸಾಂ, ಪುದುಚೇರಿ ಹಾಗೂ ವಿಶೇಷವಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಸಾಧಿಸಿರುವ ಅಭೂತಪೂರ್ವ ಗೆಲುವು ಭಾರತದ ರಾಜಕೀಯ ಚರಿತ್ರೆಯಲ್ಲಿ ಸುವರ್ಣಾಕ್ಷರಗಳಲ್ಲಿ ದಾಖಲಾಗುವಂತಹದ್ದು ಎಂದು ಮಂಗಳೂರು ದಕ್ಷಿಣ ಕ್ಷೇತ್ರದ ಶಾಸಕ ಡಿ. ವೇದವ್ಯಾಸ ಕಾಮತ್ ಹರ್ಷ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಭೇರಿ ಬಾರಿಸುವ ಮೂಲಕ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಸರ್ಕಾರದ ದಶಕಗಳ ದುರಾಡಳಿತಕ್ಕೆ ಜನತೆ ಪೂರ್ಣವಿರಾಮ ಇಟ್ಟಿದ್ದಾರೆ ಎಂದು ಅವರು ಹೇಳಿದ್ದಾರೆ.

​ಈ ಕುರಿತು ಪ್ರತಿಕ್ರಿಯಿಸಿರುವ ಅವರು, ಟಿಎಂಸಿ ಹಾಗೂ ಕಮ್ಯುನಿಸ್ಟ್ ಪಕ್ಷಗಳು ಬಂಗಾಳದಲ್ಲಿ ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಮಾರಣಹೋಮ, ಮಿತಿಮೀರಿದ ಓಲೈಕೆಯ ರಾಜಕಾರಣ ಹಾಗೂ ದೇಶದ ಭದ್ರತೆಗೆ ಸವಾಲಾಗಿದ್ದ ಅರಾಜಕತೆಗೆ ಈ ಫಲಿತಾಂಶದಿಂದ ಅಂತ್ಯ ಹಾಡಲಾಗಿದೆ. ಭಾರತೀಯ ಜನಸಂಘದ ಸಂಸ್ಥಾಪಕರಾದ ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜನ್ಮಭೂಮಿಯಲ್ಲಿ ಇಂದು ಕಮಲ ಅರಳಿರುವುದು ದೇಶಾದ್ಯಂತ ಇರುವ ಕೋಟ್ಯಂತರ ಬಿಜೆಪಿ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ಮತ್ತು ಸಂಚಲನ ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈ ಮಹಾನ್ ವಿಜಯಕ್ಕೆ ಶ್ರಮಿಸಿದ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನಬಿನ್, ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಹಾಗೂ ಬಂಗಾಳದ ಜನನಾಯಕ ಸುವೆಂದು ಅಧಿಕಾರಿ ಸೇರಿದಂತೆ ಎಲ್ಲಾ ಮುಖಂಡರು ಹಾಗೂ ಕಾರ್ಯಕರ್ತರನ್ನು ಕಾಮತ್ ಅಭಿನಂದಿಸಿದ್ದಾರೆ. ಇದೇ ವೇಳೆ, ಬಂಗಾಳದ ಜನತೆ ಯಾವುದೇ ಭಯವಿಲ್ಲದೆ ಪ್ರಜಾಪ್ರಭುತ್ವದ ಹಬ್ಬದಲ್ಲಿ ಪಾಲ್ಗೊಳ್ಳಲು ಹಗಲಿರುಳು ಶ್ರಮಿಸಿದ ಭದ್ರತಾ ಪಡೆಗಳಿಗೆ ಅವರು ವಿಶೇಷ ಕೃತಜ್ಞತೆಗಳನ್ನು ಸಲ್ಲಿಸಿದ್ದಾರೆ.

Category
ಕರಾವಳಿ ತರಂಗಿಣಿ