image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಂಗ್ಲಾ ಸಂಸದನ ಹೇಳಿಕೆಯಿಂದ ರಾಜಕೀಯ ಸಂಚಲನ; ಟಿಎಂಸಿ ವಿರುದ್ಧ ನಿಶಿಕಾಂತ್ ದುಬೆ ವಾಗ್ದಾಳಿ

ಬಾಂಗ್ಲಾ ಸಂಸದನ ಹೇಳಿಕೆಯಿಂದ ರಾಜಕೀಯ ಸಂಚಲನ; ಟಿಎಂಸಿ ವಿರುದ್ಧ ನಿಶಿಕಾಂತ್ ದುಬೆ ವಾಗ್ದಾಳಿ

ಪಶ್ಚಿಮ ಬಂಗಾಳ : ಇಲ್ಲಿನ ವಿಧಾನಸಭಾ ಚುನಾವಣಾ ಕಣವು ದಿನದಿಂದ ದಿನಕ್ಕೆ ಕಾವು ಪಡೆಯುತ್ತಿದ್ದು, ಈಗ ಬಾಂಗ್ಲಾದೇಶದ ಸಂಸದರೊಬ್ಬರ ಹೇಳಿಕೆ ಭಾರತೀಯ ರಾಜಕೀಯದಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ ಎಂಬ ಎಕ್ಸಿಟ್ ಪೋಲ್ ಭವಿಷ್ಯವಾಣಿಗಳನ್ನು ಕೇಳಿ ಬಾಂಗ್ಲಾದೇಶದ ಸಂಸದ ಅಖ್ತರ್ ಹುಸೇನ್ ಅಲ್ಲಿನ ಸಂಸತ್ತಿನಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ. ಒಂದು ವೇಳೆ ಬಂಗಾಳದಲ್ಲಿ ಬಿಜೆಪಿ ಜಯ ಸಾಧಿಸಿದರೆ, ಅಲ್ಲಿರುವ ಅಕ್ರಮ ಬಾಂಗ್ಲಾ ವಲಸಿಗರನ್ನು ಗಡೀಪಾರು ಮಾಡಲಾಗುತ್ತದೆ, ಅಂತಹ ಸಂದರ್ಭದಲ್ಲಿ ಆ ಲಕ್ಷಾಂತರ ಜನರನ್ನು ನಿಭಾಯಿಸುವುದು ಬಾಂಗ್ಲಾದೇಶಕ್ಕೆ ಕಷ್ಟವಾಗಲಿದೆ ಎಂದು ಅವರು ಹೇಳಿರುವುದು ಈಗ ವಿವಾದಕ್ಕೆ ನಾಂದಿ ಹಾಡಿದೆ.

​ಈ ವಿಡಿಯೋವನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿರುವ ಬಿಜೆಪಿ ಸಂಸದ ನಿಶಿಕಾಂತ್ ದುಬೆ, ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆಯಾಗಿದ್ದು, ಟಿಎಂಸಿಯ ಅಸಲಿ ಹಿತೈಷಿಗಳು ಈಗ ಬಣ್ಣ ಬಯಲು ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ. ಅಕ್ರಮ ಒಳನುಸುಳುವಿಕೆಯನ್ನು ಟಿಎಂಸಿ ತನ್ನ ಮತಬ್ಯಾಂಕ್‌ಗಾಗಿ ಬಳಸಿಕೊಳ್ಳುತ್ತಿದೆ ಎಂಬ ಬಿಜೆಪಿಯ ಹಳೆಯ ಆರೋಪಕ್ಕೆ ಈ ವಿಡಿಯೋ ಹೊಸ ಪುಷ್ಟಿ ನೀಡಿದಂತಾಗಿದೆ.

​ಈ ಒಳನುಸುಳುವಿಕೆಯ ವಿಷಯವು ಪಶ್ಚಿಮ ಬಂಗಾಳದಲ್ಲಿ ದಶಕಗಳಿಂದಲೂ ಒಂದು ಪ್ರಮುಖ ಚುನಾವಣಾ ಅಸ್ತ್ರವಾಗಿದೆ. ಬಿಜೆಪಿ ಇದನ್ನು ರಾಷ್ಟ್ರೀಯ ಭದ್ರತೆಗೆ ಹೊಡೆತ ಎಂದು ಬಿಂಬಿಸುತ್ತಿದ್ದರೆ, ಗಡಿ ಭದ್ರತಾ ಪಡೆ (BSF) ಕೇಂದ್ರ ಸರ್ಕಾರದ ಅಧೀನದಲ್ಲಿರುವಾಗ ಒಳನುಸುಳುವಿಕೆ ನಡೆಯುತ್ತಿರುವುದಕ್ಕೆ ಕೇಂದ್ರವೇ ಹೊಣೆ ಎಂದು ಟಿಎಂಸಿ ಪ್ರತಿವಾದ ಮಂಡಿಸುತ್ತಿದೆ. ಸದ್ಯ ಎರಡು ಹಂತದ ಮತದಾನ ಮುಕ್ತಾಯಗೊಂಡಿದ್ದು, ಬಾಂಗ್ಲಾ ಸಂಸದನ ಈ ಹೇಳಿಕೆಯು ಮತದಾರರ ಮೇಲೆ ಯಾವ ರೀತಿಯ ಪ್ರಭಾವ ಬೀರಲಿದೆ ಎಂಬುದು ಕುತೂಹಲ ಮೂಡಿಸಿದೆ. ಮೇ 4ರಂದು ಫಲಿತಾಂಶ ಹೊರಬೀಳಲಿದ್ದು, ಈ ವಿವಾದಗಳ ನಡುವೆ ಬಂಗಾಳದ ಜನತೆ ಯಾರಿಗೆ ಜೈ ಎನ್ನಲಿದ್ದಾರೆ ಎಂಬುದು ಅಂದು ಸ್ಪಷ್ಟವಾಗಲಿದೆ.

Category
ಕರಾವಳಿ ತರಂಗಿಣಿ