ಬೆಂಗಳೂರು: ರಾಜ್ಯ ಬಜೆಟ್‌ನಲ್ಲಿ ಘೋಷಿಸಿದಂತೆ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿ ಪ್ರಕ್ರಿಯೆಯನ್ನು ತಕ್ಷಣವೇ ಆರಂಭಿಸಬೇಕು ಮತ್ತು ಮಂಗಳೂರಿನಲ್ಲಿ ಕರ್ನಾಟಕ ಲೋಕಸೇವಾ ಆಯೋಗದ (KPSC) ಪ್ರಾದೇಶಿಕ ಕಚೇರಿಯನ್ನು ಸ್ಥಾಪಿಸಬೇಕೆಂದು ಒತ್ತಾಯಿಸಿ ಕರ್ನಾಟಕ ವಿಧಾನ ಪರಿಷತ್ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರಿಗೆ ಮನವಿ ಸಲ್ಲಿಸಿದರು.
2026-27ನೇ ಸಾಲಿನ ಬಜೆಟ್‌ನಲ್ಲಿ ರಾಜ್ಯ ಸರ್ಕಾರವು ಸುಮಾರು 56,432 ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದಾಗಿ ಘೋಷಿಸಿತ್ತು. ಆದರೆ, ಈವರೆಗೆ ಯಾವುದೇ ನೇಮಕಾತಿ ಪ್ರಕ್ರಿಯೆ ಆರಂಭವಾಗದ ಹಿನ್ನೆಲೆಯಲ್ಲಿ ಶಾಸಕರು ಮುಖ್ಯ ಕಾರ್ಯದರ್ಶಿಗಳನ್ನು ಭೇಟಿ ಮಾಡಿ ಚರ್ಚಿಸಿದರು. ಹುದ್ದೆಗಳ ಭರ್ತಿಯನ್ನು ಪಾರದರ್ಶಕವಾಗಿ ಮತ್ತು ಕಾಲಮಿತಿಯೊಳಗೆ ಪೂರ್ಣಗೊಳಿಸುವುದರಿಂದ ನಿರುದ್ಯೋಗ ಸಮಸ್ಯೆಗೆ ಪರಿಹಾರ ಸಿಗುವುದಲ್ಲದೆ, ಸರ್ಕಾರದ ಕಾರ್ಯಕ್ಷಮತೆಯೂ ಹೆಚ್ಚಾಗುತ್ತದೆ ಎಂದು ಅವರು ಮನವಿಯಲ್ಲಿ ಉಲ್ಲೇಖಿಸಿದ್ದಾರೆ.
ಇದೇ ವೇಳೆ, ಕರಾವಳಿ ಭಾಗದ ಅಭ್ಯರ್ಥಿಗಳ ಅನುಕೂಲಕ್ಕಾಗಿ ಮಂಗಳೂರಿನಲ್ಲಿ ಕೆಪಿಎಸ್‌ಸಿ ಪ್ರಾದೇಶಿಕ ಕಚೇರಿ ಸ್ಥಾಪಿಸುವಂತೆ ಅವರು ಪ್ರಬಲವಾಗಿ ಆಗ್ರಹಿಸಿದರು. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಾವಿರಾರು ಯುವಜನರು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ನಡೆಸುತ್ತಿದ್ದಾರೆ. ಆದರೆ, ಆಯೋಗದ ಎಲ್ಲಾ ಪ್ರಮುಖ ಕಾರ್ಯಗಳು ಬೆಂಗಳೂರು ಕೇಂದ್ರಿತವಾಗಿರುವುದರಿಂದ ಕರಾವಳಿ ಭಾಗದ ಅಭ್ಯರ್ಥಿಗಳಿಗೆ ಪ್ರಯಾಣ ಹಾಗೂ ಇತರ ತಾಂತ್ರಿಕ ಕೆಲಸಗಳಿಗೆ ತೀವ್ರ ತೊಂದರೆಯಾಗುತ್ತಿದೆ. ಮಂಗಳೂರಿನಲ್ಲಿ ಕಚೇರಿ ಸ್ಥಾಪನೆಯಾದರೆ ಈ ಭಾಗದ ಯುವಜನರಿಗೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಅವರು ವಿವರಿಸಿದರು.
ಕಳೆದ ಡಿಸೆಂಬರ್ 2025ರ ಚಳಿಗಾಲದ ಅಧಿವೇಶನದಲ್ಲಿ ಶಾಸಕರು ಕೇಳಿದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ್ದ ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು, ರಾಜ್ಯದ 43 ಇಲಾಖೆಗಳಲ್ಲಿ ಒಟ್ಟು 2,84,881 ಹುದ್ದೆಗಳು ಖಾಲಿ ಇರುವುದಾಗಿ ಮಾಹಿತಿ ನೀಡಿತ್ತು. ಈ ಬೃಹತ್ ಪ್ರಮಾಣದ ಖಾಲಿ ಹುದ್ದೆಗಳ ಪೈಕಿ ಬಜೆಟ್‌ನಲ್ಲಿ ಘೋಷಿಸಿದಂತೆ ಮೊದಲ ಹಂತದ ನೇಮಕಾತಿಯನ್ನು ತ್ವರಿತವಾಗಿ ಕೈಗೊಳ್ಳುವಂತೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.