image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

"ಬಂಗಾಳದಲ್ಲಿ ಪ್ರಜಾಪ್ರಭುತ್ವ ಸತ್ತಿದೆ, ಅಲ್ಲಿ ಈಗ ಕೇವಲ ಟಿಎಂಸಿಯ ಭಯೋತ್ಪಾದನಾ ಆಡಳಿತ ನಡೆಯುತ್ತಿದೆ" : ರಾಹುಲ್ ಗಾಂಧಿ

"ಬಂಗಾಳದಲ್ಲಿ ಪ್ರಜಾಪ್ರಭುತ್ವ ಸತ್ತಿದೆ, ಅಲ್ಲಿ ಈಗ ಕೇವಲ ಟಿಎಂಸಿಯ ಭಯೋತ್ಪಾದನಾ ಆಡಳಿತ ನಡೆಯುತ್ತಿದೆ" : ರಾಹುಲ್ ಗಾಂಧಿ

ನವದೆಹಲಿ : ಪಶ್ಚಿಮ ಬಂಗಾಳದಲ್ಲಿ ಚುನಾವಣೆ ನಂತರದ ಹಿಂಸಾಚಾರ ಮುಂದುವರಿದಿದ್ದು, ಅಸನ್ಸೋಲ್‌ನಲ್ಲಿ ಕಾಂಗ್ರೆಸ್ ಕಾರ್ಯಕರ್ತ ದೇಬ್ದೀಪ್ ಚಟರ್ಜಿ ಅವರ ಹತ್ಯೆಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತೀವ್ರವಾಗಿ ಖಂಡಿಸಿದ್ದಾರೆ. "ಬಂಗಾಳದಲ್ಲಿ ಪ್ರಜಾಪ್ರಭುತ್ವ ಸತ್ತಿದೆ, ಅಲ್ಲಿ ಈಗ ಕೇವಲ ಟಿಎಂಸಿಯ ಭಯೋತ್ಪಾದನಾ ಆಡಳಿತ ನಡೆಯುತ್ತಿದೆ" ಎಂದು ಅವರು ಗುಡುಗಿದ್ದಾರೆ. ಚುನಾವಣೆ ಮುಗಿದ ಬೆನ್ನಲ್ಲೇ ಅಸನ್ಸೋಲ್‌ನಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸೆಂಜಿತ್ ಪುಯಿಟಂಡಿ ಅವರ ಆಪ್ತರಾಗಿದ್ದ ದೇಬ್ದೀಪ್ ಚಟರ್ಜಿ ಅವರನ್ನು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಗೂಂಡಾಗಳು ಮನಬಂದಂತೆ ಥಳಿಸಿ ಹತ್ಯೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಈ ಘಟನೆಯು ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿರುವುದಕ್ಕೆ ಸಾಕ್ಷಿಯಾಗಿದೆ ಎಂದು ಪಕ್ಷ ಆಕ್ರೋಶ ವ್ಯಕ್ತಪಡಿಸಿದೆ.

ಈ ಕುರಿತು ಸಾಮಾಜಿಕ ಜಾಲತಾಣ 'ಎಕ್ಸ್ ' ನಲ್ಲಿ ಪೋಸ್ಟ್ ಮಾಡಿರುವ ರಾಹುಲ್ ಗಾಂಧಿ, "ಮತದಾನ ಮುಗಿದ ನಂತರ ವಿರೋಧ ಧ್ವನಿಗಳನ್ನು ಬೆದರಿಸುವುದು, ಅವರ ಮೇಲೆ ದಾಳಿ ಮಾಡುವುದು ಮತ್ತು ಕೊಲೆ ಮಾಡುವುದು ಟಿಎಂಸಿಯ ಚಾಳಿಯಾಗಿದೆ. ಭಾರತದ ಅಹಿಂಸಾ ಪರಂಪರೆಗೆ ಮಸಿ ಬಳಿಯುವ ಇಂತಹ ರಾಜಕೀಯಕ್ಕೆ ನಾವು ಮಣಿಯುವುದಿಲ್ಲ," ಎಂದು ಹೇಳಿದ್ದಾರೆ. ದೇಬ್ದೀಪ್ ಅವರ ಕುಟುಂಬಕ್ಕೆ ತಕ್ಷಣವೇ ಪರಿಹಾರ ಮತ್ತು ರಕ್ಷಣೆ ನೀಡಬೇಕು ಹಾಗೂ ಆರೋಪಿಗಳನ್ನು ಕಠಿಣ ಶಿಕ್ಷೆಗೆ ಗುರಿಪಡಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ. ಬಂಗಾಳದ ಕಾಂಗ್ರೆಸ್ ಘಟಕವು ಸರ್ಕಾರದ ವಿರುದ್ಧ ಕಿಡಿಕಾರಿದ್ದು, ಇಷ್ಟು ದೊಡ್ಡ ಅನಾಹುತ ನಡೆದರೂ ಇನ್ನೂ ಎಫ್‌ಐಆರ್ ದಾಖಲಿಸದಿರುವುದು ಆಡಳಿತದ ಅನಾಸ್ಥೆಯನ್ನು ತೋರಿಸುತ್ತದೆ ಎಂದು ದೂರಿದೆ. "ಪ್ರಜಾಪ್ರಭುತ್ವವು ಭಯ ಮತ್ತು ಹಿಂಸೆಯ ವಾತಾವರಣದಲ್ಲಿ ಉಳಿಯಲು ಸಾಧ್ಯವಿಲ್ಲ. ನಮ್ಮ ಕಾರ್ಯಕರ್ತರನ್ನು ಕಳೆದುಕೊಂಡರೂ ನಾವು ಸಂವಿಧಾನ ಮತ್ತು ಅಹಿಂಸೆಯ ಹಾದಿಯನ್ನು ಬಿಡುವುದಿಲ್ಲ," ಎಂದು ಕಾಂಗ್ರೆಸ್ ತನ್ನ ಸಂಕಲ್ಪವನ್ನು ಪುನರುಚ್ಚರಿಸಿದೆ. ಪಶ್ಚಿಮ ಬಂಗಾಳದಲ್ಲಿ ವಿರೋಧ ಪಕ್ಷದ ಕಾರ್ಯಕರ್ತರ ಸುರಕ್ಷತೆಯ ಬಗ್ಗೆ ಈಗ ದೊಡ್ಡ ಮಟ್ಟದ ಪ್ರಶ್ನೆಗಳು ಏದ್ದಿದ್ದು, ಈ ಹತ್ಯೆ ಪ್ರಕರಣವು ರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

Category
ಕರಾವಳಿ ತರಂಗಿಣಿ