ಮಂಗಳೂರು: ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ "ಭಯೋತ್ಪಾದಕ" ಎಂಬ ಹೇಳಿಕೆಯು ದೇಶದ ಪ್ರಜಾಸತ್ತಾತ್ಮಕ ವ್ಯವಸ್ಥೆ ಹಾಗೂ ಸಮಸ್ತ ಜನಕೋಟಿಗೆ ಮಾಡಿದ ಬಹುದೊಡ್ಡ ಅಪಮಾನ ಎಂದು ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ತೀವ್ರವಾಗಿ ಖಂಡಿಸಿದ್ದಾರೆ. ಈ ಕುರಿತು ಮಂಗಳೂರಿನಲ್ಲಿ ಪ್ರತಿಕ್ರಿಯಿಸಿದ ಅವರು, ಜವಾಬ್ದಾರಿಯುತ ಸ್ಥಾನದಲ್ಲಿರುವ ಹಿರಿಯ ನಾಯಕರೊಬ್ಬರು ದೇಶದ ಪ್ರಧಾನಿಯನ್ನು ಇಂತಹ ಕೀಳುಮಟ್ಟದ ಶಬ್ದಗಳಿಂದ ನಿಂದಿಸಿರುವುದು ಕಾಂಗ್ರೆಸ್ ಪಕ್ಷದ ಬೌದ್ಧಿಕ ಅಧಃಪತನ ಹಾಗೂ ಸಂಕುಚಿತ ಮನಸ್ಥಿತಿಯನ್ನು ಪ್ರತಿಬಿಂಬಿಸುತ್ತದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಪ್ರಧಾನಿ ಮೋದಿಯವರ ಜನಪರ ಆಡಳಿತ ಮತ್ತು ಅಭಿವೃದ್ಧಿ ರಾಜಕಾರಣದ ಮುಂದೆ ಸೋಲೊಪ್ಪಿಕೊಂಡಿರುವ ಕಾಂಗ್ರೆಸ್, ರಾಜಕೀಯ ಅಸ್ತಿತ್ವ ಕಳೆದುಕೊಳ್ಳುವ ಭೀತಿಯಿಂದ ಈಗ ವೈಯಕ್ತಿಕ ದಾಳಿ ಮತ್ತು ಹತಾಶೆಯ ಹೇಳಿಕೆಗಳಿಗೆ ಇಳಿದಿದೆ. ಸುಳ್ಳಿನ ಜಾಲ ಬಯಲಾದ ಕಾರಣಕ್ಕೆ ದಿಕ್ಕುತೋಚದಂತಾಗಿರುವ ಕಾಂಗ್ರೆಸ್ ನಾಯಕರು ವಿಕೃತ ಮನಸ್ಥಿತಿಯಿಂದ ಇಂತಹ ಪ್ರಚೋದನಾಕಾರಿ ಹೇಳಿಕೆ ನೀಡುತ್ತಿದ್ದು, ಇದು ದೇಶದ ಜನಾದೇಶಕ್ಕೆ ಎಸಗಿದ ದ್ರೋಹವಾಗಿದೆ ಎಂದು ಕ್ಯಾ. ಚೌಟ ಕಿಡಿಕಾರಿದ್ದಾರೆ.