ಮಂಗಳೂರು:ಪ್ರಧಾನಿ ನರೇಂದ್ರ ಮೋದಿಯವರನ್ನು ಭಯೋತ್ಪಾದಕ ಎಂದು ಕರೆಯುವ ಮೂಲಕ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರು ತಮ್ಮ ಹಿರಿತನದ ಗೌರವವನ್ನು ಕಳೆದುಕೊಂಡಿದ್ದಾರೆ. ಈ ಕೂಡಲೇ ಅವರು ದೇಶದ ಜನರ ಕ್ಷಮೆಯಾಚಿಸಬೇಕು ಎಂದು ಮಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಆಗ್ರಹಿಸಿದ್ದಾರೆ.
ನೈಜ ಭಯೋತ್ಪಾದಕರನ್ನು 'ಬ್ರದರ್ಸ್' ಎಂದು ಸಂಬೋಧಿಸುವುದು ಮತ್ತು ದೇಶಕ್ಕಾಗಿ ಹಗಲಿರುಳು ಶ್ರಮಿಸುವವರನ್ನು ಭಯೋತ್ಪಾದಕರು ಎಂದು ಕರೆಯುವುದು ಕಾಂಗ್ರೆಸ್ ಪಕ್ಷದ ಸಂಸ್ಕೃತಿಯಾಗಿದೆ. ಕೇವಲ ಚುನಾವಣಾ ಸಂದರ್ಭದ ಓಲೈಕೆ ರಾಜಕಾರಣಕ್ಕಾಗಿ ಇಂತಹ ಕೀಳುಮಟ್ಟದ ಹೇಳಿಕೆಗಳನ್ನು ನೀಡುವುದು ಕಾಂಗ್ರೆಸ್ ನಾಯಕರ ಹುಟ್ಟುಗುಣವಾಗಿದೆ. ಇಂತಹ ವರ್ತನೆಗಳಿಗೆ ಜನತೆ ಕಾಲಕಾಲಕ್ಕೆ ತಕ್ಕ ಪಾಠ ಕಲಿಸುತ್ತಾ ಬಂದಿದ್ದರೂ ಕಾಂಗ್ರೆಸ್ಸಿಗರಿಗೆ ಇನ್ನೂ ಬುದ್ಧಿ ಬಂದಿಲ್ಲ ಎಂದು ಅವರು ಕಿಡಿಕಾರಿದರು.
ಇಂದು ನರೇಂದ್ರ ಮೋದಿಯವರು ಜಾಗತಿಕ ಮಟ್ಟದ ಅತ್ಯಂತ ಪ್ರಭಾವಶಾಲಿ ನಾಯಕರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ನಾಯಕತ್ವದಲ್ಲಿ ಭಾರತವು ವಿಶ್ವವ್ಯಾಪಿ ಮನ್ನಣೆ ಗಳಿಸಿದೆ. ವಿಶ್ವದ ಅನೇಕ ರಾಷ್ಟ್ರಗಳು ತಮ್ಮ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿಗಳನ್ನು ನೀಡಿ ಗೌರವಿಸಿವೆ. ಇದೇ ಕಾರಣಕ್ಕೆ ದೇಶದ ಜನತೆ ಹೆಮ್ಮೆಯಿಂದ ಅವರನ್ನು ಮೂರನೇ ಬಾರಿಗೆ ಪ್ರಧಾನಿಯನ್ನಾಗಿ ಆಯ್ಕೆ ಮಾಡಿದ್ದಾರೆ. ಆದರೆ ಇದನ್ನು ಸಹಿಸಿಕೊಳ್ಳಲಾಗದೆ ಕಾಂಗ್ರೆಸ್ ನಾಯಕರು ದ್ವೇಷ ಹಾಗೂ ಹತಾಶೆಯಿಂದ ಈ ರೀತಿಯ ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಕಾಮತ್ ತೀವ್ರವಾಗಿ ಖಂಡಿಸಿದರು.