ಬೆಂಗಳೂರು : ಬಿಟ್ ಕಾಯಿನ್ ಹಗರಣದಲ್ಲಿ ಜಾರಿ ನಿರ್ದೇಶನಾಲಯ (ಇ.ಡಿ) ಹಲವರ ಮೇಲೆ ದಾಳಿ ನಡೆಸಿದೆ. ಆದರೆ, ಬಿಜೆಪಿ ನಾಯಕರ ವಿರುದ್ಧ ಯಾಕೆ ದಾಳಿ ಮಾಡಿಲ್ಲ? ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತಲ್ಲವೇ? ಎಂದು ಐಟಿಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿ, ಇದೀಗ ಇ.ಡಿ. ದಾಳಿ ನಡೆಸಿದ್ದು ಬಿಟ್ ಕಾಯಿನ್ ವಿಚಾರವಾಗಿಯೋ ಅಥವಾ ಬೇರೆ ವಿಚಾರವಾಗಿಯೋ ಎಂಬುವುದು ಗೊತ್ತಿಲ್ಲ. ಈ ಬಗ್ಗೆ ಇ.ಡಿ.ಯವರು ಸ್ಪಷ್ಟವಾಗಿ ಹೇಳಬೇಕು. ಬಿಟ್ ಕಾಯಿನ್ ಸಂಬಂಧಿಸಿ ಟಾರ್ಗೆಟ್ ಮಾಡಿ ಇವರು ದಾಳಿ ಮಾಡುತ್ತಿದ್ದಾರೆ. ಇಂದು ಇ.ಡಿ. ದಾಳಿ ಆಗುವುದಾದರೆ ಬಿಜೆಪಿಯ ದೊಡ್ಡವರ ಮನೆಗೂ ಆಗಬೇಕಾಗಿತ್ತು ಎಂದರು.
ದೊಡ್ಡವರು ಯಾರು ಎಂಬ ಸುದ್ದಿಗಾರರ ಪ್ರಶ್ನೆಗೆ, 'ದೊಡ್ಡವರು ಯಾರು ಎಂಬುದಕ್ಕೆ ಚಾರ್ಜ್ ಶೀಟ್‌ನಲ್ಲೇ ಕೆಲವರ ಹೆಸರುಗಳಿವೆ. ಆಗ ಯಾರು ಗೃಹ ಸಚಿವರಾಗಿದ್ದರು? ಯಾರು ಆಡಳಿತದಲ್ಲಿದ್ದರು? ಏನೇನು ಆಯಿತು ಎಲ್ಲಾ ಗೊತ್ತಿದೆ ಅಲ್ಲವೇ? ಏನೂ ನಡೆದೇ ಇಲ್ಲ ಎಂದು ಆಗಿನ ಸರ್ಕಾರದವರು ಹೇಳಿದ್ದರಲ್ಲ. ಬಳಿಕ ಏನಾಯಿತು ಎಂಬುದೂ ಎಲ್ಲರ ಮುಂದಿದೆ' ಎಂದು ಪ್ರಿಯಾಂಕ್ ಹೇಳಿದರು. ನಲಪಾಡ್ ಹಾಗೂ ಶ್ರೀಕಿ ನಡುವಿನ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಲಪಾಡ್ ಹಾಗೂ ಬಿಟ್ ಕಾಯಿನ್ ಪ್ರಕರಣಕ್ಕೆ ಯಾವುದೇ ರೀತಿಯಲ್ಲಿ ಸಂಬಂಧ ಇಲ್ಲ ಎಂದು ಅವರೇ ಹೇಳಿದ್ದಾರೆ. ಇ.ಡಿ. ಚಾರ್ಜ್‌ಶೀಟ್ ಹಾಕಲಿ ನೋಡೋಣ ಏನಾಗುತ್ತೆ ಅಂತ. ಐಟಿ, ಇ.ಡಿ. ಸಿಬಿಐ ಇವರೆಲ್ಲರೂ ಕೇಂದ್ರ ಸರ್ಕಾರದ ಕೈಗೊಂಬೆ. ಇಂಥ ದಾಳಿಗಳು ಮೊದಲನೇ ಬಾರಿ ಆಗುತ್ತಿಲ್ಲ ಎಂದರು.