ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ಪ್ರವಾಸೋದ್ಯಮ ಹಾಗೂ ಸಾಹಸಮಯ ಜಲಕ್ರೀಡೆಗಳಿಗೆ ಹೊಸ ಆಯಾಮ ನೀಡುವ ನಿಟ್ಟಿನಲ್ಲಿ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ ಅವರೊಂದಿಗೆ ಮಂಗಳೂರಿನಲ್ಲಿ ಮಹತ್ವದ ಸಮಾಲೋಚನೆ ನಡೆಸಿದರು.
ಸೋಮವಾರ ಮಂಗಳೂರಿಗೆ ಭೇಟಿ ನೀಡಿದ್ದ ಹಿಲರಿ ಮೆಕ್‌ಗೀಚಿ ಅವರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಸಂಸದರು, ಜಿಲ್ಲೆಯ ಕರಾವಳಿ ತೀರದ ಸದ್ಬಳಕೆ ಮತ್ತು ಅಭಿವೃದ್ಧಿಯ ಬಗ್ಗೆ ಬೆಳಕು ಚೆಲ್ಲಿದರು. ಆಸ್ಟ್ರೇಲಿಯಾ ಮತ್ತು ದಕ್ಷಿಣ ಕನ್ನಡ ಎರಡೂ ಪ್ರದೇಶಗಳು ವಿಸ್ತಾರವಾದ ಸಮುದ್ರ ತೀರವನ್ನು ಹೊಂದಿರುವುದರಿಂದ, ಅಲ್ಲಿನ ತಾಂತ್ರಿಕ ನೈಪುಣ್ಯತೆಯನ್ನು ಬಳಸಿಕೊಂಡು ಇಲ್ಲಿ ಅಡ್ವೆಂಚರ್ ವಾಟರ್ ಸ್ಪೋರ್ಟ್ಸ್ ಹಾಗೂ ಪ್ರವಾಸೋದ್ಯಮವನ್ನು ಹೇಗೆ ಉತ್ತೇಜಿಸಬಹುದು ಎಂಬ ಬಗ್ಗೆ ಚರ್ಚೆ ನಡೆಯಿತು.
ವಿಶೇಷವಾಗಿ ಯುವಜನತೆಗೆ ಕ್ರೀಡಾ ಕ್ಷೇತ್ರದಲ್ಲಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುವ ಉದ್ದೇಶದಿಂದ, ಆಸ್ಟ್ರೇಲಿಯಾದ ಪ್ರಸಿದ್ಧ ವಿಶ್ವವಿದ್ಯಾಲಯಗಳ ಸಹಯೋಗದೊಂದಿಗೆ ವಿಶೇಷ ಕ್ರೀಡಾ ಪಠ್ಯಕ್ರಮಗಳನ್ನು ರೂಪಿಸುವ ಕುರಿತು ಸಹಭಾಗಿತ್ವದ ಆಲೋಚನೆಗಳನ್ನು ಹಂಚಿಕೊಳ್ಳಲಾಯಿತು.
ಈ ಸೌಹಾರ್ದಯುತ ಭೇಟಿಯ ನೆನಪಿಗಾಗಿ ಕಾನ್ಸುಲ್ ಜನರಲ್ ಅವರು ಸಂಸದರಿಗೆ ಕ್ರಿಕೆಟ್ ಲೆದರ್ ಬಾಲ್ ಅನ್ನು ಉಡುಗೊರೆಯಾಗಿ ನೀಡಿದರು. ಭೇಟಿಯ ನಂತರ ಮಾತನಾಡಿದ ಕ್ಯಾ. ಚೌಟ ಅವರು, "ಈ ರೀತಿಯ ಅಂತರಾಷ್ಟ್ರೀಯ ಸಹಭಾಗಿತ್ವಗಳು ಎರಡು ರಾಷ್ಟ್ರಗಳ ಸಂಬಂಧವನ್ನು ವೃದ್ಧಿಸುವುದಲ್ಲದೆ, ನಮ್ಮ ಜಿಲ್ಲೆಯ ಯುವಜನತೆಗೆ ಜಾಗತಿಕ ಮಟ್ಟದ ಕೌಶಲ್ಯ ಮತ್ತು ಅವಕಾಶಗಳನ್ನು ಒದಗಿಸಲಿವೆ. ಇದು 'ವಿಕಸಿತ ಭಾರತ'ದ ಕನಸಿಗೆ ಜಿಲ್ಲೆಯ ಕಡೆಯಿಂದ ದೊಡ್ಡ ಕೊಡುಗೆಯಾಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು.