image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

'ನಾನು ಕೂತಿರುವ ಈ ಜಾಗದಲ್ಲಿ ಶಕ್ತಿ ಇದೆ. ಟೈಮ್ ಬರಲಿ, ಕಾಲ ಎಲ್ಲಕ್ಕೂ ಉತ್ತರ ಕೊಡುತ್ತೆ' : ಡಿ. ಕೆ. ಶಿವಕುಮಾರ್

'ನಾನು ಕೂತಿರುವ ಈ ಜಾಗದಲ್ಲಿ ಶಕ್ತಿ ಇದೆ. ಟೈಮ್ ಬರಲಿ, ಕಾಲ ಎಲ್ಲಕ್ಕೂ ಉತ್ತರ ಕೊಡುತ್ತೆ' : ಡಿ. ಕೆ. ಶಿವಕುಮಾರ್

ಬೆಂಗಳೂರು : 'ನಾನು ಕೂತಿರುವ ಈ ಜಾಗದಲ್ಲಿ ಶಕ್ತಿ ಇದೆ. ಟೈಮ್ ಬರಲಿ, ಕಾಲ ಎಲ್ಲಕ್ಕೂ ಉತ್ತರ ಕೊಡುತ್ತೆ', ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತ ಪ್ರಶ್ನೆಗೆ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ ಅವರು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ ರೀತಿಯಿದು. ಗದಗ ಜಿಲ್ಲೆಯ ಲಕ್ಷ್ಮೇಶ್ವರದಲ್ಲಿರುವ ಪವಿತ್ರ ಮುಕ್ತಿಮಂದಿರ ಕ್ಷೇತ್ರಕ್ಕೆ ಭಾನುವಾರ ಭೇಟಿ ನೀಡಿದ ಡಿಕೆಶಿ, ಲಿಂ.ರಂಭಾಪುರಿ ವೀರಗಂಗಾಧರ ಸ್ವಾಮಿಗಳ ಕರ್ತೃ ಗದ್ದುಗೆಗೆ ಪೂಜೆ ಸಲ್ಲಿಸಿ, ಮುಕ್ತಿಮಂದಿರದಲ್ಲಿ ಕೆಲ ಹೊತ್ತು ಧ್ಯಾನ, ಜಪ ಮಾಡಿದರು. ಈ ವೇಳೆ ಮಾತನಾಡಿ, ಮುಕ್ತಿಮಂದಿರ ಧರ್ಮಕ್ಷೇತ್ರ ಲಿಂ.ವೀರಗಂಗಾಧರ ಸ್ವಾಮಿಗಳ ತಪೋಭೂಮಿಯಾಗಿದ್ದು, ಇದು ವಿಶೇಷವಾದ ಸ್ಥಳವಾಗಿರುವುದರಿಂದ ಇಲ್ಲಿಗೆ ಭೇಟಿ ನೀಡಿ ಗಂಗಾಧರ ಶ್ರೀಗಳ ಆಶೀರ್ವಾದ ಪಡೆದುಕೊಂಡಿದ್ದೇನೆ. ವೀರಗಂಗಾಧರ ಸ್ವಾಮಿಗಳಲ್ಲಿ ವಿಶೇಷ ಶಕ್ತಿ ಇರುವುದರಿಂದ ಇಲ್ಲಿಗೆ ಭೇಟಿ ನೀಡಿದ್ದೇನೆ ಎಂದರು. 'ಡಿಕೆಶಿ ಮುಂದಿನ ದಿನಗಳಲ್ಲಿ ರಾಜ್ಯದ ಮುಖ್ಯಮಂತ್ರಿಯಾಗುತ್ತಾರೆ' ಎಂಬ ನೊಣವಿನಕೆರೆ ಶ್ರೀಗಳ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಟೈಂ ಬರಲಿ, ಕಾಲವು ಎಲ್ಲದಕ್ಕೂ ಉತ್ತರ ಕೊಡುತ್ತದೆ ಎಂದು ಮಾರ್ಮಿಕವಾಗಿ ಹೇಳಿದರು.

ಈ ವೇಳೆ ಮುಕ್ತಿಮಂದಿರ ಧರ್ಮಕ್ಷೇತ್ರದ ಪಟ್ಟಾಧ್ಯಕ್ಷ ವಿಮಲರೇಣುಕ ವೀರಮುಕ್ತಿಮುನಿ ಸ್ವಾಮಿಗಳು ಡಿ.ಕೆ.ಶಿವಕುಮಾರ ಅವರನ್ನು ಸನ್ಮಾನಿಸಿದರು. ಡಿಸಿಎಂ ಡಿ.ಕೆ.ಶಿವಕುಮಾರ ಅವರು ಲಕ್ಷ್ಮೇಶ್ವರ ಪಟ್ಟಣದ ಮಹಾಕವಿ ಪಂಪ ವೃತ್ತಕ್ಕೆ ಆಗಮಿಸುತ್ತಿದ್ದಂತೆ ಅಭಿಮಾನಿಗಳತ್ತ ಕೈ ಬೀಸಿದರು. ಈ ವೇಳೆ ಡಿ.ಕೆ. ಶಿವಕುಮಾರ ಅವರಿಗೆ ಜಯವಾಗಲಿ, ಮುಂದಿನ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಎನ್ನುವ ಜಯಘೋಷ ಕೂಗಿ, ಬೃಹತ್ ಗುಲಾಬಿ ಹೂವಿನ ಮಾಲೆ ಹಾಕಿ ಅಭಿಮಾನಿಗಳು ಸಂಭ್ರಮಿಸಿದರು. ಡಿ.ಕೆ.ಶಿವಕುಮಾರ ಅವರ ಕಟ್ಟಾ ಅಭಿಮಾನಿ ಲಕ್ಷ್ಮೇಶ್ವರದ ನೀಲಪ್ಪ ಶೆರಸೂರಿ ಅವರು ಶಿವಕುಮಾರ ಅವರಿಗೆ ಕಂಬಳಿ ಹೊದೆಸಿ, ಟಗರು ಮರಿ ಕಾಣಿಕೆ ನೀಡಿದರು.

Category
ಕರಾವಳಿ ತರಂಗಿಣಿ