image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್ ನಾಯಕರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ: ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ

ಕಾಂಗ್ರೆಸ್ ನಾಯಕರು ಮೊದಲು ಆತ್ಮವಿಮರ್ಶೆ ಮಾಡಿಕೊಳ್ಳಲಿ: ಶಾಸಕ ವೇದವ್ಯಾಸ ಕಾಮತ್ ವಾಗ್ದಾಳಿ

ಮಂಗಳೂರು: ಅಭಿವೃದ್ಧಿಯಲ್ಲಿ ರಾಜಕಾರಣ ಮಾಡಬಾರದು ಎಂದು ಹಿತವಚನ ನೀಡುವ ಕಾಂಗ್ರೆಸ್ ನಾಯಕರು ಮೊದಲು ತಮ್ಮ ನಡೆಯನ್ನು ಆತ್ಮವಿಮರ್ಶೆ ಮಾಡಿಕೊಳ್ಳಲಿ. ಬಿಜೆಪಿ ಸರ್ಕಾರದ ಅವಧಿಯಲ್ಲಿ ನಾನು ತಂದ ಅನುದಾನಗಳು ಎಷ್ಟು ಮತ್ತು ಕಳೆದ ಮೂರು ವರ್ಷಗಳಲ್ಲಿ ಕಾಂಗ್ರೆಸ್ ಸರ್ಕಾರ ನೀಡಿದ ಅನುದಾನ ಎಷ್ಟು ಎಂಬುದರ ಬಗ್ಗೆ ಶ್ವೇತಪತ್ರ ಹೊರಡಿಸಲಿ. ಆಗ ಯಾರು ರಾಜಕಾರಣ ಮಾಡುತ್ತಿದ್ದಾರೆ ಎಂಬುದು ಜನರಿಗೇ ತಿಳಿಯಲಿದೆ, ಎಂದು ಶಾಸಕ ವೇದವ್ಯಾಸ್ ಕಾಮತ್ ಸವಾಲು ಹಾಕಿದರು. ನಗರದ ಅಟಲ್ ಕೇಂದ್ರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, 

​ಮಹಾತ್ಮಗಾಂಧಿ ನಗರ ವಿಕಾಸ ಯೋಜನೆಯ ಬಗ್ಗೆ ಸ್ಪಷ್ಟನೆ ನೀಡಿದ ಶಾಸಕರು, "ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ 165 ಕೋಟಿ ರೂ. ಮೊತ್ತದ ಯೋಜನೆಯನ್ನು ಘೋಷಿಸಲಾಗಿತ್ತು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬಂದ ಕೂಡಲೇ ಈ ಅನುದಾನಕ್ಕೆ ತಡೆ ನೀಡಿತು. ಈಗ ಅದೇ ಯೋಜನೆಗೆ 'ಹಂತ-2' ಎಂದು ಹೆಸರಿಟ್ಟು ಹೊಸದಾಗಿ ಅನುದಾನ ನೀಡುತ್ತಿದ್ದೇವೆ ಎಂದು ಬ್ಯಾನರ್ ಹಾಕುತ್ತಿರುವುದು ಜನರ ದಾರಿ ತಪ್ಪಿಸುವ ಕೆಲಸ. ಇದು ಹೆಸರಷ್ಟೇ ಬದಲಾದ ಹಳೆಯ ಯೋಜನೆ," ಎಂದು ಕಿಡಿಕಾರಿದರು.

ಬಜೆಟ್‌ನಲ್ಲಿ ಘೋಷಣೆಯಾದ ಯೋಜನೆಗಳಿಗೆ ಹಣಕಾಸು ಇಲಾಖೆಯ ಅನುಮೋದನೆ ಇಲ್ಲ ಎನ್ನುವ ಕಾಂಗ್ರೆಸ್ಸಿಗರ ಆರೋಪಕ್ಕೆ ಉತ್ತರಿಸಿದ ಅವರು, "ಬಜೆಟ್‌ನಲ್ಲಿ ಯೋಜನೆ ಪ್ರಕಟವಾಗಬೇಕಾದರೆ ಹಣಕಾಸು ಇಲಾಖೆಯ ಒಪ್ಪಿಗೆ ಕಡ್ಡಾಯ ಎಂಬ ಕನಿಷ್ಠ ಜ್ಞಾನವೂ ವಿರೋಧಿಗಳಿಗಿಲ್ಲವೇ?" ಎಂದು ಪ್ರಶ್ನಿಸಿದರು. ಅಲ್ಲದೆ, ಬಿಜೆಪಿ ಅವಧಿಯಲ್ಲಿ ಮಂಜೂರಾದ ಕಾಮಗಾರಿಗಳಿಗೆ ತಡೆ ನೀಡಿ, ಈಗ ಅವುಗಳು ಮರುಚಾಲನೆ ಪಡೆಯುವಾಗ ಅದು ತಮ್ಮ ಸಾಧನೆ ಎಂದು ಬಿಂಬಿಸಿಕೊಳ್ಳುವುದು ಹಾಸ್ಯಾಸ್ಪದ ಎಂದರು.

ಕೇಂದ್ರ ಸರ್ಕಾರದ 'ಅಮೃತ್' ಮತ್ತು 'ಜಲಸಿರಿ' ಯೋಜನೆಗಳನ್ನು ರಾಜ್ಯದ ಸಾಧನೆ ಎಂದು ಬಿಂಬಿಸುತ್ತಿರುವುದನ್ನು ಖಂಡಿಸಿದ ಅವರು, ಸ್ಮಾರ್ಟ್ ಸಿಟಿ ಮತ್ತು ಮೂಲಸೌಕರ್ಯ ಯೋಜನೆಗಳಿಗೆ ಕೇಂದ್ರದ ಕೊಡುಗೆ ಅಪಾರವಾಗಿದೆ ಎಂದು ನೆನಪಿಸಿದರು. ಪಾಲಿಕೆ ವತಿಯಿಂದ ನಡೆಯುವ ಹೂಳೆತ್ತುವ ಕಾಮಗಾರಿ ಮತ್ತು ಮಳೆ ಹಾನಿ ಪರಿಹಾರವನ್ನೂ ತಮ್ಮ ಸಾಧನೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ನಾಯಕರ ನಡೆ ರಾಜಕೀಯ ಗಿಮಿಕ್ ಎಂದು ಅವರು ಟೀಕಿಸಿದರು.
​ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ಮಂಡಲದ ಅಧ್ಯಕ್ಷ ರಮೇಶ್ ಕಂಡೆಟ್ಟು, ಪ್ರಧಾನ ಕಾರ್ಯದರ್ಶಿಗಳಾದ ರಮೇಶ್ ಹೆಗ್ಡೆ ಹಾಗೂ ಲಲ್ಲೇಶ್ ಕುಮಾರ್ ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ