ನವದೆಹಲಿ : ಪ್ರಧಾನಿ ಮೋದಿ ಹಾಗೂ ನನಗೆ ಇಬ್ಬರಿಗೂ ಹೆಂಡತಿ ಸಮಸ್ಯೆ ಇಲ್ಲ ಎಂದು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ. ಮಹಿಳೆಯರು ನಮ್ಮ ರಾಷ್ಟ್ರೀಯ ಕಲ್ಪನೆಯಲ್ಲಿ ಕೇಂದ್ರ ಶಕ್ತಿ, ಪ್ರೇರಕ ಶಕ್ತಿ. ನಾವೆಲ್ಲರೂ ಮಹಿಳೆಯರಿಂದ ಪ್ರಭಾವಿತರಾಗುತ್ತೇವೆ. ಜೀವನದಲ್ಲಿ ಬಹಳಷ್ಟು ಕಲಿತಿದ್ದೇವೆ. ಪ್ರಧಾನಿ ಮೋದಿ ಹಾಗೂ ನನಗೆ ಆ ಹೆಂಡತಿ ಸಮಸ್ಯೆ ಇಲ್ಲ, ಆದರೆ ತಾಯಿ, ಸಹೋದರಿಯರು ಇದ್ದಾರೆ ಎಂದರು. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಗಂಭೀರವಾದ ಮಹಿಳಾ ಮೀಸಲಾತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ (Delimitation) ಕುರಿತ ಚರ್ಚೆ ನಡೆಯುತ್ತಿದ್ದಾಗ, ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿಯ ಒಂದು ಹೇಳಿಕೆ ಇಡೀ ಸದನದ ಗಮನವನ್ನು ಬೇರೆಡೆಗೆ ಸೆಳೆಯಿತು. ನನಗೆ ಹಾಗೂ ಪ್ರಧಾನಿ ಮೋದಿ ಇಬ್ಬರಿಗೂ ಹೆಂಡತಿ ಕಾಟ ಇಲ್ಲ ಎಂದು ಹೇಳಿದ್ದಾರೆ. ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಇಂದು ಮಹಿಳಾ ಮೀಸಲಾತಿ ಮಸೂದೆಯ ಕುರಿತು ಸುದೀರ್ಘ ಚರ್ಚೆ ನಡೆಯುತ್ತಿತ್ತು. ರಾಜಕೀಯ ಆರೋಪ-ಪ್ರತ್ಯಾರೋಪಗಳ ನಡುವೆ ಮೈಕ್ ಹಿಡಿದ ರಾಹುಲ್ ಗಾಂಧಿ, ಸರ್ಕಾರದ ಮೇಲೆ ವಾಗ್ದಾಳಿ ನಡೆಸುತ್ತಾ ವೈಯಕ್ತಿಕ ಜೀವನದ ಕುರಿತು ಲಘು ಟೀಕೆ ಮಾಡಿದರು. ತಮ್ಮ ಹೇಳಿಕೆಯನ್ನು ಮುಂದುವರಿಸಿದ ರಾಹುಲ್, ನಮಗೆ ಅಂತಹ ವೈಯಕ್ತಿಕ ಸಮಸ್ಯೆಗಳಿಲ್ಲದಿದ್ದರೂ, ನಾವು ಮಹಿಳೆಯರನ್ನು ಈ ದೇಶದ ಪ್ರೇರಕ ಶಕ್ತಿ ಎಂದು ಗೌರವಿಸುತ್ತೇವೆ. ಆದರೆ ಬಿಜೆಪಿ ಸರ್ಕಾರವು ಮಹಿಳೆಯರ ಅಭಿವೃದ್ಧಿಯ ಹೆಸರಿನಲ್ಲಿ ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದೆ ಎಂದು ಟೀಕಿಸಿದರು. ಬಿಜೆಪಿ ಸರ್ಕಾರವು ಮಹಿಳೆಯರ ಬೆನ್ನ ಹಿಂದೆ ಅಡಗಿ ಭಾರತದ ಚುನಾವಣಾ ನಕ್ಷೆಯನ್ನು ತನಗೆ ಬೇಕಾದಂತೆ ಬದಲಿಸಲು ಹೊರಟಿದೆ. ಕ್ಷೇತ್ರ ಪುನರ್ವಿಂಗಡಣೆಯ ಮೂಲಕ ದಕ್ಷಿಣ ಭಾರತದ ರಾಜ್ಯಗಳ ಶಕ್ತಿಯನ್ನು ಕುಂದಿಸುವುದು ಮತ್ತು ಒಬಿಸಿ ಸಮುದಾಯದ ಮಹಿಳೆಯರನ್ನು ಕಡೆಗಣಿಸುವುದು ಇವರ ಅಸಲಿ ಉದ್ದೇಶ ಎಂದು ಆರೋಪಿಸಿದರು.