ಬೆಂಗಳೂರು: ರಾಜ್ಯ ರಾಜಕಾರಣದತ್ತ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಚುನಾವಣೆಗೆ ಮುಂಚಿತವಾಗಿಯೇ ಮುಖ ಮಾಡಿರುವುದರಿಂದ ರಾಜ್ಯ ಬಿಜೆಪಿಯಲ್ಲಿ ಅಯೋಮಯ ಪರಿಸ್ಥಿತಿ ಏರ್ಪಟ್ಟಿದೆ. ಅಂಬೇಡ್ಕರ್ ದಿನಾಚರಣೆ ಪ್ರಯುಕ್ತ ಜೆಡಿಎಸ್ ಕಚೇರಿಯಲ್ಲಿ ಮೂರನೇ ಬಾರಿ ಮುಖ್ಯ ಮಂತ್ರಿ ಕನಸು ಬಿಚ್ಚಿಟ್ಟಿದ್ದಾರೆ ಕುಮಾರಸ್ವಾಮಿ. ಇದೇ ವೇಳೆ ಮುಂದಿನ ಬಾರಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ರಚನೆಯಾಗಲಿದ್ದು, ಮುಖ್ಯ ಮಂತ್ರಿಯನ್ನು ಪ್ರಧಾನಿ ಮೋದಿ ತೀರ್ಮಾನಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ ಹೇಳಿರುವುದು ಎಚ್‌ಡಿಕೆ ರಾಜ್ಯ ರಾಜಕಾರಣದ ಸಮೀಕರಣಕ್ಕೆ ಒತ್ತು ನೀಡಿದೆ. ರಾಜ್ಯ ಬಿಜೆಪಿ ನಾಯಕರು ಪಕ್ಷ ಸಂಘಟನೆ ಮಾಡಿ, ಮುಂದಾಳತ್ವ ವಹಿಸಿಕೊಂಡರೂ ರಾಜ್ಯದಲ್ಲಿನ ತೀರ್ಮಾನ ದೆಹಲಿಯ ಫರ್ಮಾನಿನಂತೆ ಇರುತ್ತದೆ. ಹೀಗಾಗಿ ಮುಂದಿನ ಬಾರಿ ಮೈತ್ರಿಯೊಂದಿಗೆ ಚುನಾವಣೆ ಎದುರಿಸಲು ಸಿದ್ಧ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದ್ದಾರೆ. ರಾಜ್ಯದಲ್ಲಿ ಕಾಂಗ್ರೆಸ್ ಸರಕಾರದ ವಿರುದ್ದ ಹೋರಾಟ ಮಾಡುವ ಉದ್ದೇಶದಿಂದಲೇ ಇನ್ನು ಮುಂದೆ ವಾರದಲ್ಲಿ ಎರಡು ದಿನ ಕರ್ನಾಟಕದ ಇರುತ್ತೇನೆ. ಪಕ್ಷವನ್ನು ಸಂಘಟನೆ ಮಾಡುತ್ತೇನೆ. ನಾನು ಸುಮ್ಮನೆ ಇರುವ ಹಾಗಿಲ್ಲ. ಜನರ ಪರವಾಗಿ ದನಿ ಎತ್ತಬೇಕಾಗಿದೆ ಎಂದು ಎಚ್.ಡಿ.ಕುಮಾರ ಸ್ವಾಮಿ ಹೇಳಿದ್ದಾರೆ.