ಬೆಂಗಳೂರು : ಯುವ ಕಾಂಗ್ರೆಸ್ ಬೆಂಗಳೂರು ಉತ್ತರದ ಜಿಲ್ಲಾ ಉಪಾಧ್ಯಕ್ಷರ ಸ್ಥಾನದಿಂದ ಉಚ್ಛಾಟಿಸಲಾಗಿದೆ ಎಂಬ ಆದೇಶ ಕಾಂಗ್ರೆಸ್ ಪಕ್ಷದ ಮೂರ್ಖತನದ ಪರಮಾವಧಿ ಎಂದು ಆಫ್ರೀನ್ ಖಾನ್ ಕಿಡಿಕಾರಿದ್ದಾರೆ. ದಾವಣೆಗೆರೆ ಉಪಚುನಾವಣೆ ಪಕ್ಷ ವಿರೋಧ ಚಟುವಟಿಕೆ ಕಾಂಗ್ರೆಸ್ ನಲ್ಲಿ ಬಂಡಾಯಕ್ಕೆ ಕಾರಣವಾಗಿದ್ದು, ಈಗಾಗಲೇ ಸಾಕಷ್ಟು ಮುಸ್ಲಿಂ ನಾಯಕರನ್ನು ಅವರ ಸ್ಥಾನಗಳಿಂದ ವಜಾಗೊಳಿಸಲಾಗಿದೆ. ಮತ್ತೆ ಕೆಲವು ನಾಯಕರ ಅಮಾನತು ಮಾಡಲಾಗಿದ್ದು, ಹಲವರನ್ನು ಉಚ್ಛಾಟನೆ ಮಾಡಲಾಗಿದೆ. ಅಲ್ಲದೆ ಸಚಿವ ಜಮೀರ್ ಅಹ್ಮದ್ ಸ್ಥಾನಕ್ಕೂ ಕುತ್ತು ಬರುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಈ ಬೆಳವಣಿಗೆ ನಡುವೆಯೇ ಯುವ ಕಾಂಗ್ರೆಸ್ ಬೆಂಗಳೂರು ಉತ್ತರದ ಜಿಲ್ಲಾ ಉಪಾಧ್ಯಕ್ಷೆಯಾಗಿದ್ದ ಅಫ್ರೀನ್ ಖಾನ್ ಕೂಡ ಕಾಂಗ್ರೆಸ್ ಪಕ್ಷದ ವಿರುದ್ದ ತಿರುಗಿಬಿದ್ದಿದ್ದು, ನಾನಾಗಿಯೇ ರಾಜಿನಾಮೆ ನೀಡಿರುವಾಗ ಉಚ್ಛಾಟನೆ ಎಲ್ಲಿಂದ ಬಂತು ಎಂದು ಪ್ರಶ್ನಿಸಿದ್ದಾರೆ. ಈ ಕುರಿತು ಫೇಸ್ ಬುಕ್ ನಲ್ಲಿ ಲೈವ್ ವಿಡಿಯೋ ಹೇಳಿಕೆ ಬಿಡುಗಡೆ ಮಾಡಿರುವ ಆಫ್ರೀನ್ ಖಾನ್ ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ದಾವಣಗೆರೆ ಉಪ ಚುನಾವಣೆಗೆ ಸಂಬಂಧಿಸಿದಂತೆ ಬೆಂಗಳೂರಿನ ಶಿವಾಜಿನಗರದ ಶಾಸಕ ರಿಜ್ವಾನ್ ಅರ್ಷದ್ ವಿರುದ್ಧ ಆಫ್ರೀನ್ ಖಾನ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಪ್ರಕಟಿಸಿದ್ದರು. ಇಂದು ಯೂತ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ಅವರು ಅಫ್ರೀನ್ ಖಾನ್ ಅವರನ್ನು ಉಚ್ಚಾಟನೆ ಮಾಡಿ ಆದೇಶ ಪ್ರಕಟಿಸಿದ್ದಾರೆ. ಉಚ್ಚಾಟನೆ ಆದೇಶಕ್ಕೆ ಪ್ರತಿಕ್ರಿಯಿಸಿದ ಆಫ್ರೀನ್ ಖಾನ್, ನಾನು ಏಪ್ರಿಲ್ 4 ರಂದೇ ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿದ್ದೇನೆ. ಆದರೆ ಇಂದು ನನ್ನನ್ನು ಹೊರಹಾಕಲಾಗಿದೆ ಎಂದು ಪೋಸ್ಟ್ ಮಾಡಿದ್ದಾರೆ. ಇದೆಂಥಾ ಮೂರ್ಖತನದ ನಿರ್ಧಾರ ಎಂದು ಅಫ್ರೀನ್ ಖಾನ್ ಪ್ರಶ್ನಿಸಿದ್ದಾರೆ. ಅಲ್ಲದೆ, ಮುಸ್ಲಿಮ್ ನಾಯಕರನ್ನು ಯಾಕೆ ಟಾರ್ಗೆಟ್ ಮಾಡಲಾಗುತ್ತಿದೆ ಎನ್ನುವುದು ಗೊತ್ತಿಲ್ಲ. ಇದಕ್ಕೆಲ್ಲ 2028 ರ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸುತ್ತಾರೆ ಎಂದು ತಮ್ಮ ಸಿಟ್ಟು ಹೊರಹಾಕಿದ್ದಾರೆ.