image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕಾಂಗ್ರೆಸ್‌ನಲ್ಲಿ ಶಿಸ್ತುಕ್ರಮ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತ: ಎಸ್‌ಡಿಪಿಐ ಆರೋಪ

ಕಾಂಗ್ರೆಸ್‌ನಲ್ಲಿ ಶಿಸ್ತುಕ್ರಮ ಕೇವಲ ಅಲ್ಪಸಂಖ್ಯಾತರಿಗೆ ಮಾತ್ರ ಸೀಮಿತ: ಎಸ್‌ಡಿಪಿಐ ಆರೋಪ

ಮಂಗಳೂರು: ರಾಜ್ಯ ಕಾಂಗ್ರೆಸ್‌ನಲ್ಲಿ ಶಿಸ್ತುಕ್ರಮ ಎಂಬುದು ಕೇವಲ ಅಲ್ಪಸಂಖ್ಯಾತ ನಾಯಕರನ್ನು ಗುರಿಯಾಗಿಸಿಕೊಂಡು ನಡೆಯುತ್ತಿದೆ ಎಂದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ (ಎಸ್‌ಡಿಪಿಐ) ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್ ಮಜೀದ್ ಟೀಕಿಸಿದ್ದಾರೆ. ಮಂಗಳೂರಿನಲ್ಲಿ ನಡೆದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿದ ಅವರು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ ಆರೋಪದ ಮೇಲೆ ಕೇವಲ ಅಲ್ಪಸಂಖ್ಯಾತ ಮುಖಂಡರ ವಿರುದ್ಧ ಶಿಸ್ತುಕ್ರಮಕ್ಕೆ ಮುಂದಾಗಿರುವುದು ಖಂಡನೀಯ ಎಂದರು.

​ಹಿಂದಿನ ಚುನಾವಣೆಗಳಲ್ಲಿ ರಮಾನಾಥ ರೈ ಅವರು ತಮ್ಮ ಸೋಲಿಗೆ ಪಕ್ಷದವರೇ ಕಾರಣ ಎಂದು ದೂರು ನೀಡಿದ್ದರೂ ಅಥವಾ ಪರಿಷತ್ ಚುನಾವಣೆಯಲ್ಲಿ ಕೆಲ ಕಾಂಗ್ರೆಸ್ ಶಾಸಕರು ಅಡ್ಡ ಮತದಾನ ಮಾಡಿದ್ದರೂ ಯಾರ ವಿರುದ್ಧವೂ ಕ್ರಮವಾಗಿಲ್ಲ. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ 17 ಶಾಸಕರು ಬಿಜೆಪಿ ಸೇರಿದಾಗಲೂ ಶಿಸ್ತುಕ್ರಮ ಜರುಗಿರಲಿಲ್ಲ. ಇತ್ತೀಚೆಗೆ ಶಿಕಾರಿಪುರದಲ್ಲಿ ಬಿ.ವೈ. ವಿಜಯೇಂದ್ರ ಪರ ಶ್ಯಾಮನೂರು ಶಿವಶಂಕರಪ್ಪ ಬಹಿರಂಗ ಹೇಳಿಕೆ ನೀಡಿದಾಗ ಅವರಿಗೆ ನೋಟಿಸ್ ಕೂಡ ನೀಡಿಲ್ಲ. ಆದರೆ ಈಗ ನಸೀರ್ ಅಹಮದ್ ಸೇರಿದಂತೆ ಅಲ್ಪಸಂಖ್ಯಾತ ನಾಯಕರ ತಲೆದಂಡಕ್ಕೆ ಕಾಂಗ್ರೆಸ್ ತಯಾರಿ ನಡೆಸಿದೆ. ಈ ತಾರತಮ್ಯವನ್ನು ಅಲ್ಪಸಂಖ್ಯಾತ ನಾಯಕರು ಪ್ರಶ್ನಿಸಬೇಕು ಎಂದು ಅವರು ಕರೆ ನೀಡಿದರು.

​ಸಚಿವ ಜಮೀರ್ ಅಹಮದ್ ಖಾನ್ ಅವರು ಎಸ್‌ಡಿಪಿಐ ಅಭ್ಯರ್ಥಿಗೆ ಹಣಕಾಸಿನ ನೆರವು ನೀಡಿದ್ದಾರೆ ಎಂಬ ಆರೋಪವನ್ನು ನಿರಾಕರಿಸಿದ ಮಜೀದ್, ದಾವಣಗೆರೆ ದಕ್ಷಿಣದಲ್ಲಿ ಕಾಂಗ್ರೆಸ್ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡದ ಕಾರಣ ಮತದಾರರು ಆ ಪಕ್ಷಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ಇದೇ ವೇಳೆ ಕೇಂದ್ರದ 15ನೇ ಹಣಕಾಸು ಆಯೋಗದಿಂದ ಬರಬೇಕಿದ್ದ ₹2,133 ಕೋಟಿ ಅನುದಾನ ಬಿಡುಗಡೆಯಾಗದಿರುವ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ರಾಜ್ಯದ 28 ಸಂಸದರು ಈ ಬಗ್ಗೆ ಮೌನ ವಹಿಸಿರುವುದು ದುರದೃಷ್ಟಕರ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ರಿಯಾಜ್ ಕಡಂಬು, ಅನ್ವರ್ ಸಾದತ್, ಅಥಾವುಲ್ಲ ಜೋಕಟ್ಟೆ ಮತ್ತು ಅಶ್ರಫ್ ಅಡ್ಡೂರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ