image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಜಪ ಮಾಡುತ್ತಿದ್ದಾರೆ : ಹೆಚ್ ಡಿ ದೇವೇಗೌಡ

ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಮಾತ್ರ ಸಿದ್ದರಾಮಯ್ಯ ಸಾಮಾಜಿಕ ನ್ಯಾಯದ ಜಪ ಮಾಡುತ್ತಿದ್ದಾರೆ : ಹೆಚ್ ಡಿ ದೇವೇಗೌಡ

ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಕಟುವಾದ ವಾಗ್ದಾಳಿ ನಡೆಸಿದ್ದಾರೆ. ನಗರದಲ್ಲಿ ನಡೆದ 'ಗ್ರೇಟರ್ ಬೆಂಗಳೂರು ಜೆಡಿಎಸ್' ಸಮಾವೇಶದಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ ಅವರಿಗೆ ಸಾಮಾಜಿಕ ನ್ಯಾಯದ ಮೇಲೆ ನಿಜವಾದ ಬದ್ಧತೆಯಿಲ್ಲ, ಅವರು ಕೇವಲ ರಾಜಕೀಯ ಸ್ವಾರ್ಥಕ್ಕಾಗಿ ಈ ಜಪ ಮಾಡುತ್ತಿದ್ದಾರೆ ಎಂದು ನೇರ ಆರೋಪ ಮಾಡಿದರು.

​ಈ ಹಿಂದೆ ಅಹಿಂದ ನಾಯಕರು ಹೆಚ್.ಡಿ. ಕುಮಾರಸ್ವಾಮಿ ಅವರ ಸರ್ಕಾರವನ್ನು ಪತನಗೊಳಿಸಿದರು ಮತ್ತು ಜೆಡಿಎಸ್ ಪಕ್ಷವನ್ನು ನಿರ್ನಾಮ ಮಾಡಲು ಸಂಚು ರೂಪಿಸಿದರು. ಈ ಶಕ್ತಿಗಳಿಗೆ ತಕ್ಕ ಪಾಠ ಕಲಿಸಲು ಹಾಗೂ ಪಕ್ಷದ ಅಸ್ತಿತ್ವ ಉಳಿಸಿಕೊಳ್ಳಲು ನಾನೇ ಸ್ವತಃ ಕುಮಾರಸ್ವಾಮಿ ಅವರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲು ಸೂಚಿಸಿದೆ ಎಂದು ಅವರು ಮೈತ್ರಿಯ ಹಿನ್ನೆಲೆಯನ್ನು ಬಿಚ್ಚಿಟ್ಟರು. ಕೇಂದ್ರ ಸಚಿವರಾಗಿ ಕುಮಾರಸ್ವಾಮಿ ಅವರು ರಾಜ್ಯಕ್ಕಾಗಿ ಶ್ರಮಿಸುತ್ತಿದ್ದರೂ, ಕುದುರೆಮುಖ ಮತ್ತು ಹೆಚ್‌ಎಂಟಿ ವಿಷಯಗಳಲ್ಲಿ ರಾಜ್ಯ ಸರ್ಕಾರ ಅನಗತ್ಯವಾಗಿ ಅಡ್ಡಿಪಡಿಸುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

​ಕಾಂಗ್ರೆಸ್ ಪಕ್ಷದ ವಿಶ್ವಾಸದ್ರೋಹದ ಕುರಿತು ಮಾತನಾಡಿದ ಗೌಡರು, ಹಿಂದೆ ಮುಸ್ಲಿಂ ಅಭ್ಯರ್ಥಿಯ ಪರವಾಗಿ ಹಮ್ಮಿಕೊಂಡಿದ್ದ 'ದರಿದ್ರ ನಾರಾಯಣ ರ್ಯಾಲಿ'ಗೆ ಸಿದ್ದರಾಮಯ್ಯ ಅವರು ಉದ್ದೇಶಪೂರ್ವಕವಾಗಿ ತಡವಾಗಿ ಬಂದಿದ್ದನ್ನು ನೆನಪಿಸಿಕೊಂಡರು. ತಮ್ಮ 60 ವರ್ಷಗಳ ಸುದೀರ್ಘ ರಾಜಕೀಯ ಜೀವನದಲ್ಲಿ ಇಂತಹ "ಕೆಟ್ಟ ಸರ್ಕಾರ"ವನ್ನು ಕಂಡಿಲ್ಲ ಎಂದ ಅವರು, ರಾಜ್ಯದ ಜನತೆ ಈ ಆಡಳಿತದಿಂದ ರೋಸಿ ಹೋಗಿದ್ದಾರೆ ಎಂದು ಕಿಡಿಕಾರಿದರು.

​ಮಹಿಳಾ ಮೀಸಲಾತಿ ಕುರಿತು ಚರ್ಚಿಸಿದ ದೇವೇಗೌಡರು, ಸ್ಥಳೀಯ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಮೀಸಲಾತಿ ನೀಡಿದ್ದು ಜೆಡಿಎಸ್ ಸಾಧನೆ. ಪ್ರಧಾನಿಯಾಗಿದ್ದ ಕಾಲದಲ್ಲೇ ತಾವು ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ ವಿಧೇಯಕ ಮಂಡಿಸಿದ್ದನ್ನು ಸ್ಮರಿಸಿದ ಅವರು, 30 ವರ್ಷಗಳ ನಂತರ ನರೇಂದ್ರ ಮೋದಿ ಅವರು ಅದನ್ನು ಕಾರ್ಯರೂಪಕ್ಕೆ ತಂದಿರುವುದನ್ನು ಶ್ಲಾಘಿಸಿದರು. ಮುಂಬರುವ ಕ್ಷೇತ್ರ ಮರುವಿಂಗಡಣೆಯ ನಂತರ ಕರ್ನಾಟಕದಲ್ಲಿ ಲೋಕಸಭಾ ಕ್ಷೇತ್ರಗಳ ಸಂಖ್ಯೆ 42ಕ್ಕೆ ಏರಲಿದ್ದು, ರಾಜ್ಯ ರಾಜಕೀಯದ ಚಿತ್ರಣ ಸಂಪೂರ್ಣ ಬದಲಾಗಲಿದೆ ಎಂದು ಭವಿಷ್ಯ ನುಡಿದರು. ಜಿಬಿಎ (ಗ್ರೇಟರ್ ಬೆಂಗಳೂರು ಪ್ರಾಧಿಕಾರ) ಚುನಾವಣೆಗೆ ಜೆಡಿಎಸ್ ಸನ್ನದ್ಧವಾಗಿದ್ದು, ಐವರು ಉಸ್ತುವಾರಿಗಳನ್ನು ಈಗಾಗಲೇ ನೇಮಿಸಲಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು.

Category
ಕರಾವಳಿ ತರಂಗಿಣಿ