image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಜೇಶ್ವರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ: ಎಣ್ಮಕಜೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು ಮನೆ ಮನೆ ಮತಯಾಚನೆ

ಮಂಜೇಶ್ವರದಲ್ಲಿ ಕಮಲ ಅರಳಿಸಲು ಬಿಜೆಪಿ ತಂತ್ರ: ಎಣ್ಮಕಜೆಯಲ್ಲಿ ಕಿಶೋರ್ ಕುಮಾರ್ ಪುತ್ತೂರು ಮನೆ ಮನೆ ಮತಯಾಚನೆ

ಮಂಗಳೂರು : ಕೇರಳದ ಮಂಜೇಶ್ವರ ವಿಧಾನಸಭಾ ಕ್ಷೇತ್ರವು ಪ್ರತಿ ಚುನಾವಣೆಯಲ್ಲೂ ಅತ್ಯಂತ ಕುತೂಹಲ ಕೆರಳಿಸುವ 'ಹಾಟ್ ಸೀಟ್' ಆಗಿ ಮಾರ್ಪಟ್ಟಿದೆ. ಪ್ರತಿ ಬಾರಿಯೂ ಅತೀ ಕಡಿಮೆ ಮತಗಳ ಅಂತರದಿಂದ ಗೆಲುವು ಕೈತಪ್ಪುತ್ತಿರುವ ಹಿನ್ನೆಲೆಯಲ್ಲಿ, ಈ ಬಾರಿ ಹೇಗಾದರೂ ಮಾಡಿ ಕ್ಷೇತ್ರದಲ್ಲಿ ಕಮಲ ಅರಳಿಸಲೇಬೇಕು ಎಂಬ ದೃಢ ಸಂಕಲ್ಪದೊಂದಿಗೆ ಬಿಜೆಪಿ ಪ್ರಚಾರ ಕಾರ್ಯವನ್ನು ಚುರುಕುಗೊಳಿಸಿದೆ.

​ಈ ನಿಟ್ಟಿನಲ್ಲಿ ತುಳು ಮತ್ತು ಕನ್ನಡ ಭಾಷಿಕರು ಹೆಚ್ಚಿನ ಸಂಖ್ಯೆಯಲ್ಲಿರುವ ಎಣ್ಮಕಜೆ ವ್ಯಾಪ್ತಿಯ ಕಂಡೇರಿ ಗ್ರಾಮ ಪಂಚಾಯತ್‌ನಲ್ಲಿ ಮಂಜೇಶ್ವರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಕೆ. ಸುರೇಂದ್ರನ್ ಅವರ ಪರವಾಗಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಕಿಶೋರ್ ಕುಮಾರ್ ಪುತ್ತೂರು ಅವರು ಮತಯಾಚನೆ ನಡೆಸಿದರು. ಮನೆ ಮನೆಗೆ ಭೇಟಿ ನೀಡಿದ ಅವರು, ಕೇಂದ್ರ ಸರ್ಕಾರದ ಯೋಜನೆಗಳು ಹಾಗೂ ಕಾಸರಗೋಡಿನ ಸಮಗ್ರ ಅಭಿವೃದ್ಧಿಯ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
​ಈ ಸಂದರ್ಭದಲ್ಲಿ ಮಾತನಾಡಿದ ಕಿಶೋರ್ ಕುಮಾರ್ ಪುತ್ತೂರು ಅವರು, "ಕೇರಳದಲ್ಲಿ ಎಲ್.ಡಿ.ಎಫ್ ಮತ್ತು ಯು.ಡಿ.ಎಫ್ ಕೂಟಗಳ ಆಡಳಿತ ವೈಫಲ್ಯದಿಂದ ಜನತೆ ಬೇಸತ್ತಿದ್ದಾರೆ. ಕಾಸರಗೋಡಿನ ಜ್ವಲಂತ ಸಮಸ್ಯೆಗಳು ದಶಕಗಳಿಂದ ಹಾಗೆಯೇ ಉಳಿದಿವೆ. ಹೀಗಾಗಿ ಜಿಲ್ಲೆಯ ಸಮಗ್ರ ಅಭಿವೃದ್ಧಿ ಹಾಗೂ 'ನವ ಕಾಸರಗೋಡು' ನಿರ್ಮಾಣಕ್ಕಾಗಿ ಜನತೆ ಈ ಬಾರಿ ಬದಲಾವಣೆಯನ್ನು ಬಯಸುತ್ತಿದ್ದು, ಬಿಜೆಪಿಗೆ ಭರ್ಜರಿ ಬೆಂಬಲ ವ್ಯಕ್ತವಾಗುತ್ತಿದೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.
​ಪ್ರಚಾರದ ಸಂದರ್ಭದಲ್ಲಿ ಪ್ರಮುಖರಾದ ಪದ್ಮನಾಭ ಭಟ್ ಕಂಡೇರಿ, ಪ್ರದೀಪ್ ಭಟ್ ಕಂಡೇರಿ, ಸಾತ್ವಿಕ್ ಕಂಡೇರಿ, ನಾಲ್ಕನೇ ವಾರ್ಡ್‌ನ ಪಂಚಾಯತ್ ಸದಸ್ಯರಾದ ಪುಷ್ಪಾವತಿ ವಿ. ರೈ ಉಪಸ್ಥಿತರಿದ್ದರು. ಇದೇ ವೇಳೆ ಪಕ್ಷದ ಸಿದ್ಧಾಂತಗಳನ್ನು ಒಪ್ಪಿ ಹೊಸದಾಗಿ ಸೇರ್ಪಡೆಗೊಂಡ ಸ್ವಸ್ತಿಕ್ ಕೆಂಗಣಾಜೆ, ಪ್ರಜ್ವಲ್ ಆರ್.ಕೆ. ದಂಬೆಕಾನ, ವಿನೋದ್ ಕೊಲ್ಯ, ಪ್ರಶಾಂತ್ ಹಾಗೂ ಹಲವಾರು ಪಕ್ಷದ ಕಾರ್ಯಕರ್ತರು ಪಾಲ್ಗೊಂಡು ಅಭ್ಯರ್ಥಿಯ ಗೆಲುವಿಗಾಗಿ ಶ್ರಮಿಸುವ ಸಂಕಲ್ಪ ಮಾಡಿದರು.

Category
ಕರಾವಳಿ ತರಂಗಿಣಿ