ಗುವಾಹಟಿ : 'ಉತ್ತಮ ಜೀವನ ಕಂಡುಕೊಳ್ಳುವುದಕ್ಕಾಗಿ ಈಶಾನ್ಯ ಭಾಗದ ಸಾವಿರಾರು ಯುವಕರು ಊರು ತೊರೆಯುತ್ತಿದ್ದಾರೆ. ಸ್ವತಃ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರ ಪುತ್ರ ಬೆಂಗಳೂರಿನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. ಅಸ್ಸಾಂನಲ್ಲಿ ಯುವಕರಿಗೆ ಉದ್ಯೋಗ ಸೃಷ್ಟಿಸುವತ್ತ ಕಾಂಗ್ರೆಸ್ ಗಮನ ಹರಿಸಲಿದ್ದು, ಅವರು ರಾಜ್ಯದಲ್ಲಿ ಯೋಗ್ಯ ಜೀವನೋಪಾಯ ಕಂಡುಕೊಳ್ಳಲು ಸಹಾಯ ಮಾಡಲಿದೆ' ಎಂದು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ. ಚುನಾವಣಾ ಪ್ರಚಾರ ನಡೆಸಿ ಮಾತನಾಡಿದ ಅವರು, 'ಅಸ್ಸಾಂನ ಯುವಕರಿಗೆ ಉದ್ಯೋಗದ ಭರವಸೆ ನೀಡುತ್ತೇವೆ. ಅನೇಕ ಸಮಸ್ಯೆಗಳೊಂದಿಗೆ ಯುವಕರು ಇಲ್ಲಿ ಶಿಕ್ಷಣವನ್ನು ಪೂರ್ಣಗೊಳಿಸಿ, ನಂತರ ಉದ್ಯೋಗಕ್ಕಾಗಿ ದಕ್ಷಿಣ ರಾಜ್ಯಗಳಿಗೆ ಹೋಗುತ್ತಾರೆ. ಸಿಎಂ ಬಿಸ್ವಾ ಅವರ ಮಗ ಕೂಡ ಬೆಂಗಳೂರಿನಲ್ಲಿ ಓದುತ್ತಿದ್ದಾರೆ. ಏಕೆಂದರೆ ಬೆಂಗಳೂರು ಸುರಕ್ಷಿತ ಮತ್ತು ಅವಕಾಶಗಳನ್ನು ಹುಡುಕುತ್ತಿರುವ ಯುವಕರಿಗೆ ಆಕರ್ಷಕ ನಗರ' ಎಂದರು. ಹಿಮಂತ ಅವರ ಪುತ್ರ ಬೆಂಗಳೂರಿನ ರಾಷ್ಟ್ರೀಯ ಕಾನೂನು ವಿವಿಯಲ್ಲಿ ವಿದ್ಯಾರ್ಥಿಯಾಗಿದ್ದಾರೆ ಎಂದರು.