image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಇತಿಹಾಸವನ್ನು ಹೇಳಲು ಚಿತ್ರಮಂದಿರದ ದೊಡ್ಡ ಪರದೆಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಇತಿಹಾಸವನ್ನು ತಿರುಚುವುದೇ ಛಾಳಿಯಾಗಿಬಿಟ್ಟಿದೆ : ಪ್ರಿಯಾಂಕ್ ಖರ್ಗೆ

ಇತಿಹಾಸವನ್ನು ಹೇಳಲು ಚಿತ್ರಮಂದಿರದ ದೊಡ್ಡ ಪರದೆಗಳನ್ನು ಬಳಸಿಕೊಳ್ಳುತ್ತಿದ್ದಾರೆ, ಇತಿಹಾಸವನ್ನು ತಿರುಚುವುದೇ ಛಾಳಿಯಾಗಿಬಿಟ್ಟಿದೆ : ಪ್ರಿಯಾಂಕ್ ಖರ್ಗೆ

ಬೆಂಗಳೂರು : ಇತ್ತೀಚೆಗೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ(ಆರೆಸ್ಸೆಸ್)ದವರು ವಾಟ್ಸ್‌ಆಯಪ್ ಯೂನಿವರ್ಸಿಟಿಯಿಂದ ಹೊರ ಬಂದು ಸುಳ್ಳು ಇತಿಹಾಸವನ್ನು ಹೇಳಲು ಚಿತ್ರಮಂದಿರದ ದೊಡ್ಡ ಪರದೆಗಳನ್ನು ಬಳಸಿಕೊಳ್ಳುತ್ತಿದ್ದಾರೆ. ಇವರಿಗೆ ಇತಿಹಾಸವನ್ನು ತಿರುಚುವುದೇ ಛಾಳಿಯಾಗಿಬಿಟ್ಟಿದೆ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಟೀಕಿಸಿದ್ದಾರೆ. ನಗರದ ಕಬ್ಬನ್‍ಪಾರ್ಕ್‍ನಲ್ಲಿರುವ ಸಚಿವಾಲಯ ಕ್ಲಬ್‍ನ ಸಭಾಂಗಣದಲ್ಲಿ ಪತ್ರಕರ್ತ ನವೀನ್ ಸೂರಿಂಜೆ ಬರೆದಿರುವ 'ಕರಾವಳಿಯ ಚರಿತ್ರೆಯಲ್ಲಿ ಹೈದರ್ ಅಲಿ ಮತ್ತು ಟಿಪ್ಪು ಸುಲ್ತಾನ್' ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇತ್ತೀಚಿನ ದಿನಗಳಲ್ಲಿ ಇತಿಹಾಸವನ್ನು ತಮ್ಮಿಚ್ಛೆಯಂತೆ ತಿರುಚುವುದು ಒಂದು ಫ್ಯಾಷನ್ ಆಗಿಬಿಟ್ಟಿದೆ. ಇದು ಕೇವಲ ಹವ್ಯಾಸವಾಗಿ ಉಳಿದಿಲ್ಲ, ಬದಲಾಗಿ ಸಾವಿರಾರು ಕೋಟಿ ರೂಪಾಯಿಗಳ ವ್ಯವಹಾರವಾಗಿ ಬದಲಾಗಿದೆ ಎಂದರು.

ಹಸಿ ಸುಳ್ಳುಗಳ ಇತಿಹಾಸದ ಕಥೆಗಳನ್ನು ದೊಡ್ಡ ಪರದೆಗಳಲ್ಲಿ ತಂದು ಜನರನ್ನು ದಿಕ್ಕಿ ತಪ್ಪಿಸುವ ಕೆಲಸವಾಗುತ್ತಿದೆ. ಗುಜರಾತ್ ಫೈಲ್ಸ್, ಕಾಶ್ಮೀರ ಫೈಲ್ಸ್, ಕೇರಳ ಸ್ಟೋರಿ, ಚಾವಾ ಹೀಗೆ ಅನೇಕ ಸಿನಿಮಾಗಳು ಬಂದಿವೆ. ಜನಸಾಮಾನ್ಯರು ಈ ಸಿನಿಮಾಗಳನ್ನು ನೋಡಿ ಪ್ರಶಂಸೆ ಮಾಡಿ ಸಾವಿರ ಕೋಟಿ ಲಾಭ ಮಾಡಿಕೊಟ್ಟರೆ ತೊಂದರೆಯಿಲ್ಲ. ಆದರೆ, ಮೊನ್ನೆಯಷ್ಟೇ ಬಿಡುಗಡೆಯಾದ ಧುರಂಧರ್ ಸಿನಿಮಾವನ್ನು ನೋಡಿದ ಇತಿಹಾಸ ಶಿಕ್ಷಕಿಯೊಬ್ಬರು, 'ಈ ಸಿನಿಮಾ ನೋಡಿ ನನ್ನ ಕಣ್ಣು ತೆರೆಯಿತು, ನಾವು ಮಕ್ಕಳಿಗೆ ತಪ್ಪು ಇತಿಹಾಸ ಕಲಿಸುತ್ತಿದ್ದೆವು' ಎಂದು ಹೇಳುತ್ತಿರುವುದು ನಿಜಕ್ಕೂ ಆತಂಕಕಾರಿ ಎಂದು ಪ್ರಿಯಾಂಕ್ ಖರ್ಗೆ ಕಳವಳ ವ್ಯಕ್ತಪಡಿಸಿದರು. ಒಬ್ಬ ಶಿಕ್ಷಕ 100 ಮಕ್ಕಳ ಮೇಲೆ ಪ್ರಭಾವ ಬೀರುತ್ತಾರೆ. ಆ ನೂರು ಮಕ್ಕಳು ಮತ್ತಷ್ಟು ಜನರ ಮೇಲೆ ಪ್ರಭಾವ ಬೀರಬಲ್ಲರು. ಇದು ಸಮಾಜದ ಸ್ವಾಸ್ಥ್ಯವನ್ನು ಕೆಡಿಸುತ್ತದೆ. ಇದೇ ಈ ಕಾಲದ ದೊಡ್ಡ ದುರಂತ ಎಂದು ಪ್ರಿಯಾಂಕ್ ಖರ್ಗೆ ಎಚ್ಚರಿಸಿದರು. 100 ವರ್ಷದ ಇತಿಹಾಸದಲ್ಲಿ ಆರೆಸ್ಸೆಸ್‍ನವರ 10 ಸಾಧನೆ ಕೇಳಿದರೆ ಹೇಳುವುದಿಲ್ಲ. ಅದನ್ನು ಬಿಟ್ಟು ನಾವು ಕೇರಳ ಪ್ರವಾಹ ಅಥವಾ ವಯನಾಡ್‍ನಲ್ಲಿ ನೆರವು ನೀಡಿದ್ದನ್ನು ಹೇಳುತ್ತಾರೆ. ನರೇಂದ್ರ ಮೋದಿ ಅವರ ಬಗ್ಗೆ ಮತ್ತು ಆರೆಸ್ಸೆಸ್ ಬಗ್ಗೆ ಬಂದ ಸಿನಿಮಾಗಳು 100 ಕೋಟಿ ಕೂಡ ದಾಟಲಿಲ್ಲ. ಏಕೆಂದರೆ ಅವುಗಳಲ್ಲಿ ಸೃಷ್ಟಿ ಮಾಡಲು ಏನೂ ಇಲ್ಲ. ನೈಜ ಇತಿಹಾಸವಿಲ್ಲ ಎಂದು ಪ್ರಿಯಾಂಕ್ ಖರ್ಗೆ ಟೀಕಿಸಿದರು.

Category
ಕರಾವಳಿ ತರಂಗಿಣಿ