ಕೋಲ್ಕತ್ತ: ಪಶ್ಚಿಮ ಬಂಗಾಳದಲ್ಲಿ ನಡೆಸಲಾದ ಮತದಾರರ ಪಟ್ಟಿಗಳ ವಿಶೇಷ ಸಮಗ್ರ ಪರಿಷ್ಕರಣೆಯ (ಎಸ್‌ಐಆರ್) ಮೂರನೇ ಪೂರಕ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಬಿಡುಗಡೆ ಮಾಡಿದೆ. ಮೂರನೇ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಅಥವಾ ಕೈಬಿಡಲಾದ ಮತದಾರರ ಸಂಖ್ಯೆಯ ವಿವರಗಳನ್ನು ಆಯೋಗ ನೀಡಿಲ್ಲ. ಎಸ್‌ಐಆರ್ ಬಳಿಕ ಫೆಬ್ರುವರಿ 28 ರಂದು ಪ್ರಟಕವಾದ ಮತದಾರರ ಪಟ್ಟಿಯಲ್ಲಿ, 'ವಿಚಾರಣಾ ಹಂತದಲ್ಲಿರುವ' ಎಂದು ವರ್ಗೀಕರಿಸಲಾದ ಮತದಾರರ ಹೆಚ್ಚುವರಿ ಹೆಸರುಗಳು ಈ 'ಪೂರಕ ಪಟ್ಟಿ'ಯಲ್ಲಿ ಇರಲಿದೆ ಎಂದು ಆಯೋಗದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. 'ವಿಚಾರಣಾ ಹಂತದಲ್ಲಿರುವ' ಮತದಾರರ ಮೊದಲ ಪೂರಕ ಪಟ್ಟಿಯನ್ನು ಆಯೋಗ ಸೋಮವಾರ ಬಿಡುಗಡೆ ಮಾಡಿತ್ತು. ಆದರೆ ಪಟ್ಟಿಯಿಂದ ತೆಗೆದುಹಾಕಲಾದ ಮತದಾರರ ಸಂಖ್ಯೆ ಅಥವಾ ವಿಲೇವಾರಿ ಮಾಡಲಾದ ಪ್ರಕರಣಗಳ ನಿಖರ ಅಂಕಿಅಂಶಗಳ ಬಗ್ಗೆ ಮಾಹಿತಿ ನೀಡಲು ನಿರಾಕರಿಸಿತ್ತು. ಆಯೋಗದ ಈ ಕ್ರಮವು ವಿವಿಧ ವಲಯಗಳಿಂದ ಟೀಕೆಗೆ ಗುರಿಯಾಗಿತ್ತು. ಈ ಪೂರಕ ಪಟ್ಟಿಯಲ್ಲಿ ಹೆಸರನ್ನು ಕೈಬಿಟ್ಟವರ ಮಾಹಿತಿಯನ್ನೂ ಚುನಾವಣಾ ಆಯೋಗ ಬಿಡುಗಡೆ ಮಾಡಿದೆ.