ಚೆನ್ನೈ : ಏಪ್ರಿಲ್ 23ರಂದು ನಡೆಯಲಿರುವ ತಮಿಳುನಾಡು ವಿಧಾನಸಭೆ ಚುನಾವಣೆಯಲ್ಲಿ ತಾವು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುವುದಾಗಿ ಟಿವಿಕೆ ಮುಖ್ಯಸ್ಥ ದಳಪತಿ ವಿಜಯ್ ಘೋಷಿಸಿದ್ದಾರೆ. ಚೆನ್ನೈನ ಪೆರಂಬೂರು ಮತ್ತು ತಿರುಚಿರಾಪಳ್ಳಿ ಈಸ್ಟ್ ಕ್ಷೇತ್ರಗಳಿಂದ "ಸಿ ಜೋಸೆಫ್ ವಿಜಯ್" ಎಂಬ ಹೆಸರಿನಲ್ಲಿ ಸ್ಪರ್ಧಿಸುವುದಾಗಿ ತಿಳಿಸಿದರು. ಮೂಲತಃ ನಟರಾಗಿ ದೇಶಾದ್ಯಂತ ಜನಪ್ರಿಯರಾಗಿರುವ ಇಂದು ರಾಜಕಾರಣಿಯಾಗಿರುವ ದಳಪತಿ ವಿಜಯ್ ಅವರು ಪಕ್ಷದ ಮೊದಲ ಅಭ್ಯರ್ಥಿಗಳ ಪಟ್ಟಿಯನ್ನೂ ಪ್ರಕಟಿಸಿದರು. ಸಾಮಾನ್ಯ ಕಾರ್ಯದರ್ಶಿ ಎನ್ ಆನಂದ್ ಟಿ ನಗರದಿಂದ, ಖಜಾಂಚಿ ವೆಂಕಟರಾಮನ್ ಮೈಲಾಪುರದಿಂದ, ಚುನಾವಣಾ ಪ್ರಚಾರ ನಿರ್ವಹಣಾ ಸಾಮಾನ್ಯ ಕಾರ್ಯದರ್ಶಿ ಆದವ್ ಅರ್ಜುನಾ ವಿಲ್ಲಿವಾಕ್ಕಂನಿಂದ ಸ್ಪರ್ಧಿಸಲಿದ್ದಾರೆ. ಉಪ ಸಾಮಾನ್ಯ ಕಾರ್ಯದರ್ಶಿಗಳಾದ ಸಿಟಿಆರ್ ನಿರ್ಮಲ್ ಕುಮಾರ್ ತಿರುಪ್ಪರಂಕುಂದ್ರಂನಿಂದ ಮತ್ತು ರಾಜ್ ಮೋಹನ್ ಎಗ್ಮೋರ್‌ನಿಂದ ಸ್ಪರ್ಧಿಸಲಿದ್ದಾರೆ.
ಹೊಸ ಸೇರ್ಪಡೆಗಳಲ್ಲಿ, ಇತ್ತೀಚೆಗೆ ಟಿವಿಕೆಗೆ ಸೇರ್ಪಡೆಗೊಂಡು ಎಐಎಡಿಎಂಕೆಯಿಂದ ಹೊರಹಾಕಲ್ಪಟ್ಟ ಕೆಎ ಸೆಂಗೊಟ್ಟಯ್ಯನ್ ಗೋಬಿಚೆಟ್ಟಿಪಾಳಯಂನಿಂದ ಸ್ಪರ್ಧಿಸಲಿದ್ದಾರೆ. ಮಾಜಿ ಐಆರ್‌ಎಸ್ ಅಧಿಕಾರಿ ಮತ್ತು ಪಕ್ಷದ ಪ್ರಚಾರ ಕಾರ್ಯದರ್ಶಿ ಕೆಜಿ ಅರುಣ್‌ರಾಜ್ ತಿರುಚೆಂಗೋಡ್‌ನಿಂದ ಅಭ್ಯರ್ಥಿಯಾಗಿದ್ದಾರೆ. ಪಕ್ಷ ಅಧಿಕಾರಕ್ಕೆ ಬಂದರೆ, 29 ವರ್ಷಕ್ಕಿಂತ ಮೇಲ್ಪಟ್ಟ ನಿರುದ್ಯೋಗಿ ಪದವೀಧರರಿಗೆ ತಿಂಗಳಿಗೆ 4,000 ರೂಪಾಯಿ ನೆರವು ನೀಡಲಾಗುವುದು ಎಂದು ವಿಜಯ್ ಘೋಷಿಸಿದರು. ಯುವಕರಿಗಾಗಿ "ಗ್ಯಾರಂಟಿ" ಎಂದು ಕರೆಯಲಾದ ಕಾರ್ಯಯೋಜನೆಯನ್ನು ಅನಾವರಣಗೊಳಿಸಿದ ಅವರು, ಮಾದಕ ವಸ್ತುಗಳಿಲ್ಲದ ತಮಿಳುನಾಡು ನಿರ್ಮಾಣ, 12ನೇ ತರಗತಿಯಿಂದ ಪಿಎಚ್‌ಡಿ ವರೆಗೆ 20 ಲಕ್ಷದವರೆಗೆ ಜಾಮೀನು ಇಲ್ಲದ ಸಾಲ ಭರವಸೆ ಸೇರಿದಂತೆ ಹಲವು ಭರವಸೆಗಳನ್ನು ನೀಡಿದರು.