ಬೆಂಗಳೂರು: ರಾಜ್ಯದ ಸರ್ಕಾರಿ ಬಸ್ ನಿಲ್ದಾಣಗಳನ್ನು ಪ್ರಯಾಣಿಕ ಸ್ನೇಹಿಯಾಗಿಸಬೇಕು ಮತ್ತು ಗ್ರಾಮ ಆಡಳಿತಾಧಿಕಾರಿಗಳಿಗೆ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸಬೇಕೆಂದು ಪುತ್ತೂರು ಕ್ಷೇತ್ರದ ಶಾಸಕ ಕಿಶೋರ್ ಕುಮಾರ್ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ವಿಧಾನಸಭೆಯಲ್ಲಿ ಸಾರಿಗೆ ಸಚಿವರಿಗೆ ಚುಕ್ಕೆ ಗುರುತಿನ ಪ್ರಶ್ನೆ ಕೇಳಿದ್ದ ಕಿಶೋರ್ ಕುಮಾರ್, ರಾಜ್ಯದ 565 ಬಸ್ ನಿಲ್ದಾಣಗಳ ಪೈಕಿ ಕೇವಲ 142ರಲ್ಲಿ ಸಿಸಿಟಿವಿ, 61ರಲ್ಲಿ ಪೊಲೀಸ್ ಚೌಕಿ ಹಾಗೂ 198ರಲ್ಲಿ ಮಾತ್ರ ಅಗ್ನಿಶಾಮಕ ವ್ಯವಸ್ಥೆ ಇರುವುದನ್ನು ಬೆಟ್ಟು ಮಾಡಿದರು. ಬಸ್ ನಿಲ್ದಾಣಗಳ ಅಭಿವೃದ್ಧಿಗೆ ಸರ್ಕಾರ ಬಿಡುಗಡೆ ಮಾಡುತ್ತಿರುವ ಅನುದಾನ ಅತ್ಯಲ್ಪವಾಗಿದ್ದು, ಮಹಿಳೆಯರ ಸುರಕ್ಷತೆಗೆ ನಿರ್ದಿಷ್ಟ ಮಾರ್ಗಸೂಚಿಗಳಿಲ್ಲದಿರುವುದು ಆತಂಕಕಾರಿ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದರು. ಪ್ರಮುಖವಾಗಿ ಶೌಚಾಲಯಗಳ ಅಧ್ವಾನ, ಕುಡಿಯುವ ನೀರಿನ ಕೊರತೆ ಮತ್ತು ರಾತ್ರಿ ವೇಳೆ ಭದ್ರತೆಯಿಲ್ಲದೆ ನಡೆಯುತ್ತಿರುವ ಕಳ್ಳತನದ ಪ್ರಕರಣಗಳನ್ನು ತಡೆಯಲು ಗೃಹ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ ಶಾಶ್ವತ ಭದ್ರತೆ ಒದಗಿಸಬೇಕು ಹಾಗೂ ಕಡಬ, ಮೂಡುಬಿದಿರೆ ಮತ್ತು ಮುಲ್ಕಿಯಲ್ಲಿ ಹೊಸ ಬಸ್ ನಿಲ್ದಾಣಗಳನ್ನು ನಿರ್ಮಿಸಬೇಕು ಎಂದು ಅವರು ಆಗ್ರಹಿಸಿದರು.
ಅದೇ ರೀತಿ, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿಗಳ (VA) ಸಮಸ್ಯೆಗಳ ಕುರಿತು ಧ್ವನಿ ಎತ್ತಿದ ಅವರು, ರಾಜ್ಯದ 1,115 ಹುದ್ದೆಗಳು ಖಾಲಿ ಇರುವುದನ್ನು ಗಮನ ಸೆಳೆದರು. ಹಲವು ಕಚೇರಿಗಳು ಬಾಡಿಗೆ ಕಟ್ಟಡದಲ್ಲಿ ನಡೆಯುತ್ತಿದ್ದು, ಇಂಟರ್ನೆಟ್ ಮತ್ತು ವಿದ್ಯುತ್ ಬಿಲ್‌ಗೆ ಪ್ರತ್ಯೇಕ ಅನುದಾನವಿಲ್ಲದೆ ಅಧಿಕಾರಿಗಳು ಸಂಕಷ್ಟ ಎದುರಿಸುತ್ತಿದ್ದಾರೆ. ಸರ್ಕಾರಿ ಕೆಲಸಗಳು ಆನ್‌ಲೈನ್ ಮೂಲಕವೇ ನಡೆಯಬೇಕಿರುವುದರಿಂದ ಎಲ್ಲಾ ಕಚೇರಿಗಳಿಗೆ ಅಂತರ್ಜಾಲ ಸಂಪರ್ಕ ಕಲ್ಪಿಸಬೇಕು, ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು ಮತ್ತು ಬಾಡಿಗೆ ಕಟ್ಟಡಗಳಲ್ಲಿರುವ ಕಚೇರಿಗಳಿಗೆ ಸ್ವಂತ ಕಟ್ಟಡ ನಿರ್ಮಿಸಿಕೊಡಬೇಕೆಂದು ಕಿಶೋರ್ ಕುಮಾರ್ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.