ಬೆಂಗಳೂರು : ಉಪಚುನಾವಣೆ ಟಿಕೆಟ್ ಹಂಚಿಕೆ ವಿಚಾರದಲ್ಲಿ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಅಲ್ಪಸಂಖ್ಯಾತರಲ್ಲಿ ಅಸಮಾಧಾನ ಇರುವ ಬಗ್ಗೆ ಮಾಧ್ಯಮಗಳ ಬಳಿ ಹೇಳಿಬರಹುದು. ಆದರೆ, ನಮ್ಮ ಬಳಿ ಏನೂ ಹೇಳಿಲ್ಲ. ಆದಾಗ್ಯೂ ಅವರಿಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗಿದೆ. ಪಕ್ಷದ ತೀರ್ಮಾನವೇ ಅಂತಿಮ ಎಂದು ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ತಿಳಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ನಾನು, ಮುಖ್ಯಮಂತ್ರಿಯವರು ಹಾಗೂ ಜಮೀರ್ ಅಹಮದ್, ನಾಸೀರ್ ಹುಸೇನ್, ಸಲೀಂ ಅಹ್ಮದ್, ಹುಸೇನ್, ಹ್ಯಾರಿಸ್, ಜಬ್ಬಾರ್ ಎಲ್ಲ ಅಲ್ಪಸಂಖ್ಯಾತ ನಾಯಕರು, ಎಐಸಿಸಿ ಕಾರ್ಯದರ್ಶಿಗಳ ಜತೆ ಮಾತನಾಡಿ ಒಮ್ಮತದ ತೀರ್ಮಾನಕ್ಕೆ ಬಂದೇ ಶಾಮನೂರು ಕುಟುಂಬಕ್ಕೆ ಅವಕಾಶ ಮಾಡಿಕೊಡಲಾಗಿದೆ.
ಒಗ್ಗಟ್ಟಿನಿಂದ ಚುನಾವಣೆ ಮಾಡಿ ಎರಡೂ ಕ್ಷೇತ್ರಗಳನ್ನು ಗೆಲ್ಲಿಸಿಕೊಂಡು ಬರುವ ತೀರ್ಮಾನ ಮಾಡಲಾಗಿದೆ ಎಂದರು. ಶಾಮನೂರು ಶಿವಶಂಕರಪ್ಪ ಅವರು ತಮ್ಮ ನಂತರ ಮುಸ್ಲಿಂ ಸಮುದಾಯಕ್ಕೆ ಟಿಕೆಟ್ ನೀಡುತ್ತೇವೆ ಎಂದು ಹೇಳಿದ್ದರು. ಆ ಮಾತಿನಂತೆ ನಡೆದುಕೊಳ್ಳುತ್ತಿಲ್ಲ ಎನ್ನುವ ಅಸಮಾಧಾನದ ಬಗ್ಗೆ ಕೇಳಿದಾಗ, 'ಅಸಮಾಧಾನ ನಿಮ್ಮ ಬಳಿ ಹೇಳಿರಬಹುದು. ನಮ್ಮ ಬಳಿ ಹೇಳಿಲ್ಲ. ಅದಕ್ಕೇ ನಾವು ಮೂರು ಬಾರಿ ಅಬ್ದುಲ್ ಜಬ್ಬಾರ್ ಅವರನ್ನು ವಿಧಾನ ಪರಿಷತ್ತಿನ ಸದಸ್ಯರನ್ನಾಗಿ ಮಾಡಿರುವುದು. ಜಬ್ಬಾರ್ ಅವರನ್ನು ಇದೇ ಶಿವಶಂಕರಪ್ಪ ಅವರು ಎಸ್.ಎಂ. ಕೃಷ್ಣ ಅವರ ಕಾಲ, ಸಿದ್ದರಾಮಯ್ಯ ಅವರ ಕಾಲದಲ್ಲೂ ಎಂಎಲ್‌ಸಿ ಮಾಡಿದ್ದಾರೆ. ಆಗಾಗ್ಗೆ ಪರ್ಯಾಯ ವ್ಯವಸ್ಥೆಗಳನ್ನು ಮಾಡಲಾಗುತ್ತಿರುತ್ತದೆ. ಅಷ್ಟೇ ಯಾಕೆ, ಪರಿಷತ್ತಿನ ಸ್ಥಾನವನ್ನು ಶ್ರೀನಿವಾಸ್ ಮಾನೆ ಅವರ ಬದಲಿಗೆ ಧಾರವಾಡದಿಂದ ಸಲೀಂ ಅವರಿಗೆ ನೀಡಿದೆವು. ಸುನೀಲ್ ಬೋಸ್ ಅವರಿಗೆ ನೀಡಬೇಕಿತ್ತು. ಅದನ್ನು ಬಿಟ್ಟು ಪರ್ಯಾಯ ವ್ಯವಸ್ಥೆ ಮಾಡಲಿಲ್ಲವೇ? ಕೆಲವು ಸಂದರ್ಭಗಳಲ್ಲಿ ಈ ರೀತಿ ಮಾಡಬೇಕಾಗುತ್ತದೆ' ಎಂದು ಸ್ಪಷ್ಟಪಡಿಸಿದರು.