ಬೆಂಗಳೂರು: ಪ್ರಸ್ತುತ ನಡೆಯುತ್ತಿರುವ ವಿಧಾನ ಪರಿಷತ್ತಿನ ಅಧಿವೇಶನದಲ್ಲಿ ಅಕ್ರಮ-ಸಕ್ರಮ ಯೋಜನೆಯಡಿ ಮಂಜೂರಾದ ಜಮೀನುಗಳ ಅರಣ್ಯ ಮತ್ತು ಕಂದಾಯ ಭೂಮಿಯ ಗಡಿ ಗುರುತಿಸುವಿಕೆ (ಪ್ಲಾಟಿಂಗ್) ಪ್ರಕ್ರಿಯೆಯನ್ನು ಶೀಘ್ರವಾಗಿ ಪೂರ್ಣಗೊಳಿಸುವಂತೆ ಶಾಸಕ ಕಿಶೋರ್ ಕುಮಾರ್ ಪುತ್ತೂರು ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ. ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ರೈತರು ದಶಕಗಳಿಂದ ಕೃಷಿ ಮಾಡುತ್ತಿರುವ ಭೂಮಿಗೆ ಬಗರ್ ಹುಕುಂ ಸಮಿತಿ ಮೂಲಕ ಹಕ್ಕುಪತ್ರ ದೊರೆತಿದ್ದರೂ, ಅರಣ್ಯ ಇಲಾಖೆಯ ಗಡಿ ಸಮಸ್ಯೆ ಮತ್ತು ಪೋಡಿಯಾಗದ ಕಾರಣದಿಂದ ಆರ್.ಟಿ.ಸಿ (RTC) ದಾಖಲೆಗಳಲ್ಲಿ 'ಭಾಗಶಃ ಅರಣ್ಯ' ಎಂದು ನಮೂದಾಗುತ್ತಿದೆ. ಇದರಿಂದ ರೈತರಿಗೆ ಬ್ಯಾಂಕ್ ಸಾಲ, ಬೆಳೆ ವಿಮೆ ಮತ್ತು ವಿದ್ಯುತ್ ಸಂಪರ್ಕ ಪಡೆಯಲು ತೀವ್ರ ತೊಂದರೆಯಾಗುತ್ತಿದೆ ಎಂದು ಶಾಸಕರು ಸದನದ ಗಮನ ಸೆಳೆದರು.
ಈ ಗಂಭೀರ ಸಮಸ್ಯೆಯನ್ನು ಪರಿಹರಿಸಲು ಅರಣ್ಯ ಮತ್ತು ಕಂದಾಯ ಇಲಾಖೆಗಳು ಜಂಟಿ ಸರ್ವೆ (Joint Survey) ನಡೆಸಿ, ಡ್ರೋನ್ ಹಾಗೂ ಜಿ.ಐ.ಎಸ್ ತಂತ್ರಜ್ಞಾನ ಬಳಸಿ ಕಾಲಮಿತಿಯೊಳಗೆ ಗಡಿ ಗುರುತಿಸಬೇಕು ಎಂದು ಆಗ್ರಹಿಸಿದರು. ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಸಮನ್ವಯ ಸಮಿತಿ ರಚಿಸಿ ರೈತರ ಮೇಲಿನ ಅನಗತ್ಯ ಕಾನೂನು ಕ್ರಮಗಳನ್ನು ತಕ್ಷಣ ನಿಲ್ಲಿಸುವಂತೆ ಅವರು ಸಚಿವರಿಗೆ ಮನವಿ ಮಾಡಿದರು. ಇದೇ ಸಂದರ್ಭದಲ್ಲಿ ಪುತ್ತೂರು, ಕಡಬ, ಸುಳ್ಯ ಮತ್ತು ಬೆಳ್ತಂಗಡಿ ತಾಲೂಕುಗಳಲ್ಲಿ ಆನೆ ಹಾವಳಿ ತಡೆಗಟ್ಟಲು ಆನೆ ನಿಗ್ರಹ ಪಡೆ (ETF) ರಚಿಸಿರುವುದಕ್ಕಾಗಿ ಜಿಲ್ಲೆಯ ರೈತರ ಪರವಾಗಿ ಅರಣ್ಯ ಸಚಿವರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು.