image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ನಡುವಿನ ತಿಕ್ಕಾಟ ಸಿಎಂ ಸಿದ್ದರಾಮಯ್ಯ ಗೆ ತಲೆನೋವು!

ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ನಡುವಿನ ತಿಕ್ಕಾಟ ಸಿಎಂ ಸಿದ್ದರಾಮಯ್ಯ ಗೆ ತಲೆನೋವು!

ಬೆಂಗಳೂರು : ರಾಜ್ಯದಲ್ಲಿ ದಾವಣಗೆರೆ ದಕ್ಷಿಣ ಮತ್ತು ಬಾಗಲಕೋಟೆ ಉಪ ಚುನಾವಣೆ ಗರಿಗೆದರಿದೆ. ಬಿಜೆಪಿಯಲ್ಲಿ ಟಿಕೆಟ್ ಘೋಷಣೆ ಆದರೂ ಕಾಂಗ್ರೆಸ್‌ನಲ್ಲಿ ಟಿಕೆಟ್ ಅಂತಿಮಗೊಂಡಿಲ್ಲ. ಈ ನಡುವೆ ಬಾಗಲಕೋಟೆಯಲ್ಲಿ ಮೇಟಿ ಕುಟುಂಬದ ನಡುವಿನ ತಿಕ್ಕಾಟ ಸಿಎಂ ಸಿದ್ದರಾಮಯ್ಯ ಅವರಿಗೆ ತಲೆನೋವು ಉಂಟು ಮಾಡಿದೆ. ಮೇಟಿ ಕುಟುಂಬದ ಸದಸ್ಯರು ಸಿದ್ದರಾಮಯ್ಯ ಅವರ ಜೊತೆಗೆ ಮಾತುಕತೆ ನಡೆಸಿದ್ದಾರೆ. ಮೂವರು ತಮಗೆ ಟಿಕೆಟ್ ನೀಡಬೇಕು ಎಂದು ಪಟ್ಟು ಹಿಡಿದಿದ್ದರು. ಎಚ್ ವೈ ಮೇಟಿ ನಿಧನದಿಂದ ಬಾಗಲಕೋಟೆ ಕ್ಷೇತ್ರಕ್ಕೆ ಉಪ ಚುನಾವಣೆ ನಡೆಯುತ್ತಿದೆ. ಮೇಟಿ ಕುಟುಂಬಕ್ಕೆ ಟಿಕೆಟ್ ಎಂಬುವುದು ಫೈನಲ್ ಅಗಿದೆ. ಆದರೆ ಮೇಟಿ ಕುಟುಂಬದಲ್ಲಿ ಮೂವರು ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಬಾಯಕ್ಕ, ಮಲ್ಲಿಕಾರ್ಜುನ ಹಾಗೂ ಉಮೇಶ್ ಜೊತೆಗೆ ಮಹದೇವಿ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈ ನಾಲ್ವರು ಸಿಎಂ ಸಿದ್ದರಾಮಯ್ಯ ಅವರ ಜೊತೆಗೆ ಚರ್ಚೆ ನಡೆಸಿದ್ದಾರೆ.

ಬಾಗಲಕೋಟೆ ಕ್ಷೇತ್ರದಲ್ಲಿ ಗೆಲುವು ಮುಖ್ಯವಾಗಿದೆ. ಹಾಗಾಗಿ ಹೈಕಮಾಂಡ್ ಯಾರಿಗೆ ಟಿಕೆಟ್ ಕೊಟ್ಟರೂ ಯಾರೂ ಭಿನ್ನಮತ ವ್ಯಕ್ತಪಡಿಸಬಾರದು. ಕ್ಷೇತ್ರದ ಪರಿಸ್ಥಿತಿ ಅಳೆದು ತೂಗಿ ನಾವು ಟಿಕೆಟ್ ನೀಡುವ ಬಗ್ಗೆ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಸಿಎಂ ಸಿದ್ದರಾಮಯ್ಯ ಅವರು ಟಿಕೆಟ್ ಆಕಾಂಕ್ಷಿಗಳಾಗಿರುವ ಎಚ್‌ವೈ ಮೇಟಿ ಮಕ್ಕಳಿಗೆ ತಿಳಿ ಹೇಳಿದ್ದಾರೆ. ಟಿಕೆಟ್ ಘೋಷಣೆ ಆದ ಬಳಿಕ ಎಲ್ಲರೂ ಒಟ್ಟಾಗಿ ಕೆಲಸ ಮಾಡಬೇಕು. ನಿಮ್ಮ ಮನೆಯಲ್ಲಿ ಒಬ್ಬರಿಗೆ ಟಿಕೆಟ್ ನೀಡುವುದು ಖಚಿತ. ಆದರೆ ಭಿನ್ನಾಭಿಪ್ರಾಯ ಬಹಿರಂವಾದರೆ ಅದು ಚುನಾವಣೆಯ ಮೇಲೆ ಪರಿಣಾಮ ಬೀಳಲಿದೆ. ನಾವು ಗೆದ್ದಿದ್ದ ಕ್ಷೇತ್ರವನ್ನು ಉಳಿಸಿಕೊಳ್ಳುವುದು ಮುಖ್ಯವಾಗಿದೆ ಎಂದು ತಿಳಿಹೇಳಿದ್ದಾರೆ. ಎಚ್ ವೈ ಮೇಟಿ ಅವರ ಮಕ್ಕಳ ಪೈಕಿ ಮಲ್ಲಿಕಾರ್ಜುನ ಹಾಗೂ ಬಾಯಕ್ಕ ಮೇಟಿ ನಡುವೆ ಪ್ರಬಲ ಪೈಪೋಟಿ ಇದೆ. ಎಚ್‌ವೈ ಮೇಟಿ ಇರುವಾಗಲೇ ಬಾಯಕ್ಕ ಮೇಟಿ ಅವರ ಹೆಸರು ಚಾಲ್ತಿಯಲ್ಲಿತ್ತು. ಹಾಗೂ ಅವರು ಕ್ಷೇತ್ರದಲ್ಲೂ ಸಕ್ರಿಯವಾಗಿದ್ದರು. ಜೊತೆಗೆ ಮಲ್ಲಿಕಾರ್ಜುನ ಮೇಟಿ ಕೂಡಾ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಈ ನಡುವೆ ಮಹದೇವಿ ಅವರು ಉಮೇಶ್ ಪರವಾಗಿ ನಿಂತಿದ್ದಾರೆ. ಉಮೇಶ್‌ಗೆ ಟಕೆಟ್ ನೀಡಿ ಅಥವಾ ನನಗೆ ಟಿಕೆಟ್ ಕೊಡಿ ಎಂದು ಅವರು ಬೇಡಿಕೆ ಇಟ್ಟಿದ್ದಾರೆ. ಹೀಗಾಗಿ ಗೊಂದಲಕ್ಕೆ ಎಡೆಮಾಡಿಕೊಡದಂತೆ ನಿರ್ಧಾರವನ್ನು ಕೈಗೊಳ್ಳಬೇಕಾದ ಅನಿವಾರ್ಯತೆಯೂ ಎದುರಾಗಿದೆ. ಮೇಟಿ ಮಕ್ಕಳ ಜೊತೆಗೆ ಸುದೀರ್ಘವಾಗಿ ಮಾತುಕತೆ ನಡೆಸಿರುವ ಸಿಎಂ ಯಾರಿಗೂ ಟಿಕೆಟ್ ಕೊಟ್ಟರೂ ಗೊಂದಲಕ್ಕೆ ಅವಕಾಶ ನೀಡದಂತೆ ಒಟ್ಟಾಗಿ ಕೆಲಸ ಮಾಡುವಂತೆ ಸೂಚಿಸಿದ್ದಾರೆ.

ದಾವಣಗೆರೆ ದಕ್ಷಿಣದಲ್ಲೂ ಟಿಕೆಟ್ ಅಂತಿಮಗೊಳಿಸಲು ಕೈ ನಾಯಕರು ಪ್ರಯತ್ನ ನಡೆಸುತ್ತಿದ್ದಾರೆ. ಸಮರ್ಥ್ ಗೆ ಟಿಕೆಟ್ ನೀಡಬೇಕು ಎಂಬುವುದು ಎಸ್ ಎಸ್ ಮಲ್ಲಿಕಾರ್ಜುನ ಬೇಡಿಕೆಯಾಗಿದೆ. ಆದರೆ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡಿ ಎಂಬುವುದು ಮುಸ್ಲಿಂ ಮುಖಂಡರ ಆಗ್ರಹವಾಗಿದೆ. ಈ ನಡುವೆ ನಾಯಕರು ಹೊಸತೊಂದು ದಾಳ ಉರುಳಿರುವ ಸಾಧ್ಯತೆ ಇದೆ. ಎಸ್‌ ಎಸ್ ಮಲ್ಲಿಕಾರ್ಜುನ ಅವರು ಹೇಳುವ ಯಾವುದೇ ಅಲ್ಪಸಂಖ್ಯಾತ ಮುಖಂಡರಿಗೆ ಟಿಕೆಟ್ ನೀಡಲು ಸಿದ್ದ ಎಂದು ನಾಯಕರು ಸಂದೇಶ ರವಾನಿಸಿದ್ದಾರೆ ಎಂದು ತಿಳಿದುಬಂದಿದೆ. ಆದರೆ ಇದಕ್ಕೆ ಮಲ್ಲಿಕಾರ್ಜುನ ಅವರು ಯಾವ ರೀತಿಯಲ್ಲಿ ಒಪ್ಪಿಕೊಳ್ಳುತ್ತಾರೆ ಎಂಬುವುದು ಸದ್ಯದ ಕುತೂಹಲವಾಗಿದೆ.

Category
ಕರಾವಳಿ ತರಂಗಿಣಿ