ಇಳಕಲ್ : ರಾಜ್ಯದಲ್ಲಿ ಹಿಂದೂ ವಿರೋಧಿ ಸರ್ಕಾರ ಹೆಚ್ಚೆಂದರೆ ಎರಡೂವರೆ ವರ್ಷ ಇರಬಹುದು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರುತ್ತದೆ. ಹಿಂದೂ ಕಾರ್ಯಕರ್ತರ ಮೇಲಿರುವ ಸುಳ್ಳು ಮೊಕದ್ದಮೆಗಳನ್ನು ಬಿಜೆಪಿ ಅಧಿಕಾರಕ್ಕೆ ಬಂದ ತಕ್ಷಣವೇ ಹಿಂಪಡೆಯಲಾಗುತ್ತದೆ. ಯಾರೋ ಅಜ್ಞಾನಿಗಳು ಶಿವಾಜಿ ಹೊರಗಡೆಯವರು, ಟಿಪ್ಪು ಸುಲ್ತಾನ್ ನಮ್ಮವರು ಎಂದಿದ್ದರು. ಆದರೆ, ಟಿಪ್ಪುವಿನ ತಂದೆ ಹೈದರಾಲಿ ಎಲ್ಲಿಯವರು? ಆತ ಇರಾನ್ ಮೂಲದವನು. ಟಿಪ್ಪು ಕನ್ನಡ ಭಾಷೆಯ ಜಾಗದಲ್ಲಿ ಪರ್ಷಿಯನ್ ಹೇರಲು ಹೊರಟಿದ್ದ ಕನ್ನಡ ವಿರೋಧಿ. ಆದರೆ ಶಿವಾಜಿ ನಮ್ಮವರು. ಶಿವಾಜಿ ಇಲ್ಲದಿದ್ದರೆ ಮಂದಿರ ಮಸೀದಿಯಾಗುತ್ತಿತ್ತು. ಎಲ್ಲರ ಸುನ್ನತಿಯಾಗುತ್ತಿತ್ತು ಎಂದು ವಿಧಾನ ಪರಿಷತ್ ಸದಸ್ಯ ಡಾ. ಸಿ ಟಿ ರವಿ ಹೇಳಿದರು. ಅವರು ಇಳಕಲ್ಲಿನ ಹಿಂದೂ ಸೇವಾ ಟ್ರಸ್ಟ್ ವತಿಯಿಂದ ಆಯೋಜನೆಗೊಂಡಿದ್ದ ಶ್ರೀ ಛತ್ರಪತಿ ಶಿವಾಜಿ ಮಹಾರಾಜರ ಜಯಂತ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಮಾತನಾಡುತ್ತಿದ್ದರು.
ಶಿವಾಜಿ ಜನಿಸಿದ ಸಮಯದಲ್ಲಿ ಬೀದರಿನಲ್ಲಿ ಬರೀದ್ ಶಾಹಿ, ಬಿಜಾಪುರದಲ್ಲಿ ಆದಿಲ್ ಶಾಹಿ, ಕಲಬುರ್ಗಿಯಲ್ಲಿ ಕುತುಬ್ ಶಾಹಿ, ದೆಹಲಿಯಲ್ಲಿ ಮೊಘಲ್ ಶಾಹಿ, ಹೈದರಾಬಾದಿನಲ್ಲಿ ನಿಜಾಮ್ ಶಾಹಿಗಳಿದ್ದವು. ಅವರ ನಡುವೆ ಹುಟ್ಟಿದ ಪುರುಷ ಸಿಂಹ ಶಿವಾಜಿ ಮಹಾರಾಜರು. ಅವರು ಸ್ಥಾಪಿಸಿದ್ದು ಹಿಂದವೀ ಸಾಮ್ರಾಜ್ಯ, ಆ ಸಾಮ್ರಾಜ್ಯದ ಸ್ಥಾಪನೆಯ ಕಾರಣಕ್ಕೆ ನಮ್ಮ ತಾಯಿಯರ ಸಿಂದೂರ, ಸೋದರಿಯರ ಶೀಲ ಉಳಿಯಿತು. ನಾವೆಲ್ಲರೂ ಹೆಮ್ಮೆಯಿಂದ ನಾವೆಲ್ಲ ಹಿಂದೂ, ನಾವೆಲ್ಲ ಒಂದು ಎನ್ನುವಂತಾಯಿತು. ಅಂತಹ ಶಿವಾಜಿ ಮಹಾರಾಜರು, ವೀರ ಸಾವರ್ಕರ್ ಬಗ್ಗೆ ಕೆಟ್ಟದಾಗಿ ಮಾತನಾಡಿದವರು ಮೊದಲು ಯಾರು ದೇಶವನ್ನು ತುಂಡರಿಸುವ ಕೆಲಸ ಮಾಡಿದ್ದು ಎಂದು ಗಮನಿಸಬೇಕು ಎಂದು ರವಿ ಟೀಕಿಸಿದರು.
ಸಾವರ್ಕರ್ ಬ್ರಿಟಿಷರ ಬೂಟು ನೆಕ್ಕಿದ್ದರೆ ಅಂಡಮಾನಿನ ಸೆರೆಮನೆಯಲ್ಲಿ ಕಳೆಯಬೇಕಾಗಿರಲಿಲ್ಲ. ಯಾವ ಸನಾತನ ಧರ್ಮಕ್ಕೆ ಜನ್ಮದಿನವಿಲ್ಲವೋ, ಅದಕ್ಕೆ ಸಾವೂ ಇಲ್ಲ. ಅಂತಹ ಸನಾತನ ಧರ್ಮದಲ್ಲಿ ಜನಿಸಿದ್ದಕ್ಕೆ ನಾವು ಪುಣ್ಯವಂತರು. ನಮ್ಮದು ಸಂಘರ್ಷದ ಇತಿಹಾಸ. ನಾವು ಹೆದರುವವರಲ್ಲ. ನಮ್ಮದು ರಾಷ್ಟ್ರಕಾರ್ಯ, ನಮ್ಮ ಮಂತ್ರ ಸರ್ವೇಜನ ಸುಖಿನೋಭವಂತು. ನಾವು ಲವ್, ಲ್ಯಾಂಡ್, ಹಲಾಲ್ ಜಿಹಾದ್‌ಗಳನ್ನು ಅನುಸರಿಸುವವರಲ್ಲ. ನಮ್ಮದು ಸಪ್ತಪದಿ ನಡೆದು, ಏಳು ಜನ್ಮಗಳಿಗೂ ಸತಿಪತಿಗಳಾಗಿರುವ ಶ್ರೇಷ್ಠವಾದ ಪರಂಪರೆ. ನಮ್ಮದು ತಲಾಕಿನ ಪರಂಪರೆಯಲ್ಲ. ಜಗತ್ತಿನಲ್ಲಿ ಹಿಂದೂಗಳಿಗಿರುವುದು ಭಾರತ ಒಂದೇ ರಾಷ್ಟ್ರ. ಗಜ್ಜಾ ಎ ಹಿಂದ್‌ಗೆ ಭಾರತವನ್ನು ತುತ್ತಾಗಿಸಲು ನಾವು ಬಿಡುವುದಿಲ್ಲ. ಅಣು ಅಣುವನ್ನೂ ಮಹಾದೇವ ಸೃಷ್ಟಿ ಮಾಡಿರುವಾಗ ನಮ್ಮಲ್ಲಿ ಅಸ್ಪೃಶ್ಯತೆಗೆ ಅವಕಾಶ ನೀಡುವಂತಿಲ್ಲ. ನಮ್ಮ ಮೈ ಮರೆವಿನಿಂದಾಗಿ ಗಾಂಧಾರ ಅಫ್ಘಾನಿಸ್ತಾನವಾಯಿತು. ಸಿಂಥ್ ಪಾಕಿಸ್ತಾನವಾಯಿತು. ಢಾಕೇಶ್ವರಿ ಚಿತ್ತೇಶ್ವರಿ ಶಕ್ತಿಪೀಠಗಳಿದ್ದ ಢಾಕಾ ಬಾಂಗ್ಲಾದೇಶವಾಯಿತು. ತಾಯಿ ಶಾರದೆಯ ತವರುಮನೆ ಕಾಶ್ಮೀರ ಸಂಕಷ್ಟಕ್ಕೆ ಸಿಲುಕುವಂತಾಯಿತು. ಇದಕ್ಕಾಗಿ ನಾವು ಮೈಮರೆಯಬಾರದು ಎಂದರೆ ನಾವು ಶಿವಾಜಿ ಸಂಭಾಜಿ ಪರಂಪರೆ ನಮ್ಮದು ಎಂದು ನೆನಪಿಟ್ಟುಕೊಳ್ಳಬೇಕು ಎಂದು ರವಿ ಕರೆ ನೀಡಿದರು.
ಭಾರತೀಯರ ಪೂರ್ವಿಕರಾದ ಭರತ ಚಕ್ರವರ್ತಿ ಬುಗುರಿಯಲ್ಲಿ, ಚೆಂಡಿನಲ್ಲಿ ಆಡಿದವರಲ್ಲ. ಬದಲಿಗೆ, ಹಾಲುಗಲ್ಲದ ಹಸುಳೆಯಾಗಿದ್ದಾಗಲೇ ಸಿಂಹಗಳೊಡನೆ ಆಟವಾಡಿ ಅವುಗಳ ಹಲ್ಲು ಎಣಿಸಿದವರು. ಅಂತಹ ಪರಂಪರೆಯ ಅರಿವು ನಮಗಿರಬೇಕು. ನಮ್ಮೊಡನೆ ನಡೆಯುವವರನ್ನು ನಾವು ಎಂದೂ ಭೇದವೆಣಿಸುವುದಿಲ್ಲ. ನಾವು ಹಿಂದುತ್ವಕ್ಕಾಗಿ ರಾಜಕಾರಣಕ್ಕೆ ಬಂದಿದ್ದೇವೆಯೇ ಹೊರತು. ರಾಜಕಾರಣಕ್ಕಾಗಿ ಹಿಂದುತ್ವವನ್ನು ಹಿಡಿದುಕೊಂಡಿಲ್ಲ ಎಂದು ರವಿ ಹೇಳಿದರು.