ನವದೆಹಲಿ : 'ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಪ್ರತಿಭಟನೆಯನ್ನು ನಾನು ವಿರೋಧಿಸುವುದಿಲ್ಲ. ವಿಪಕ್ಷವು ಎಷ್ಟು ಬೇಕಾದರೂ ಪ್ರತಿಭಟಿಸಬಹುದು. ಆದರೆ ಆ ಪ್ರತಿಭಟನೆಯು ಎಪ್ಪತ್ತೈದು ವರ್ಷಗಳ ಕಾಲ ನಾವೆಲ್ಲರೂ ಒಟ್ಟಾಗಿ ನಿರ್ಮಿಸಿಕೊಂಡಿದ್ದನ್ನು ಕೆಡವುವ ರೀತಿಯಲ್ಲಿ ಇರಬಾರದು' ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಪ್ರತಿಪಾದಿಸಿದ್ದಾರೆ. ಸಂಸತ್ ಅಧಿವೇಶನದಲ್ಲಿ ಕಾಂಗ್ರೆಸ್ ಸದಸ್ಯರಿಂದ ಕಲಾಪಕ್ಕೆ ಅಡ್ಡಿ ಉಂಟಾಗುತ್ತಿರುವ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ರಾಜ್ಯಸಭೆ ಸದಸ್ಯರೂ ಆಗಿರುವ ದೇವೆಗೌಡ, ಈ ಬಗ್ಗೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರಿಗೆ ಪತ್ರ ಬರೆದಿದ್ದು, ಬಜೆಟ್ ಅಧಿವೇಶನದ ವೇಳೆ ವಿಪಕ್ಷಗಳು ವಿಶೇಷವಾಗಿ ಕಾಂಗ್ರೆಸ್ ಸದಸ್ಯರು ತೋರಿಸುತ್ತಿರುವ ಅತಿರೇಕದ ವರ್ತನೆ, ಅಶಿಸ್ತಿನ ನಡವಳಿಕೆ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನನ್ನ ರಾಜಕೀಯ ಜೀವನದ 90ರಷ್ಟು ಕಾಲವನ್ನು ಪ್ರತಿಪಕ್ಷದಲ್ಲಿಯೇ ಕಳೆದಿದ್ದೇನೆ. ನೀವು ಹೆಚ್ಚು ಕಾಲ ವಿಪಕ್ಷದಲ್ಲಿಯೇ ಇದ್ದೀರಿ. ಪ್ರತಿಪಕ್ಷದ ಹೊಣೆಗಾರಿಕೆ ಹಾಗೂ ಜವಾಬ್ದಾರಿಗಳ ಬಗ್ಗೆ ತಮಗೆ ಅರಿವಿದೆ. ವಿಪಕ್ಷಗಳು ತಮ್ಮ ವಿರೋಧವನ್ನು ತೋರಿಸಬಹುದು, ಆದರೆ ಅದು ನಿಯಮಗಳು, ಸಂಪ್ರದಾಯಗಳು ಮತ್ತು ಘನತೆಗೆ ಧಕ್ಕೆ ತರುವಂತಿರಬಾರದು. ಆದರೆ, ಪ್ರಸಕ್ತ ಸಂದರ್ಭದಲ್ಲಿ ಪ್ರತಿಪಕ್ಷ ಸದಸ್ಯರ ವರ್ತನೆ ನನಗೆ ನೋವುಂಟು ಮಾಡಿದೆ. ಪ್ರತಿಪಕ್ಷದಲ್ಲಿ ಇದ್ದರೂ ಸಂಸತ್ತಿನ ಘನತೆ ಮತ್ತು ಸಂಪ್ರದಾಯಗಳನ್ನು ಕಾಪಾಡಿಕೊಳ್ಳಲು ಶ್ರಮಿಸಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಪ್ರತಿಪಕ್ಷ ಸದಸ್ಯರು, ಅದರಲ್ಲಿಯೂ ತಮ್ಮ ಪಕ್ಷದ ಸದಸ್ಯರು ವರ್ತನೆಯನ್ನು ಸರಿಪಡಿಸಿಕೊಂಡು ಸಂಸದೀಯ ವ್ಯವಸ್ಥೆಯ ಪಾವಿತ್ರ್ಯತೆಯನ್ನು ಎತ್ತಿಹಿಡಿಯುತ್ತಾರೆಂದು ನಿರೀಕ್ಷಿಸಿದ್ದೇ. ಅದು ಆಗಲಿಲ್ಲ. ನಿಮ್ಮ ಸದಸ್ಯರು ಸಂಸತ್ತಿನ ಆವರಣದಲ್ಲಿ ಮತ್ತು ಸಂಸತ್ತಿನ ಒಳಗೆ ಪ್ರಚೋದನಾತ್ಮಕ ರೀತಿಯಲ್ಲಿ ವರ್ತಿಸಿ, ಸಂಸತ್ತಿನ ಕಲಾಪಕ್ಕೆ ಅಡ್ಡಿ ಮಾಡುತ್ತಿದ್ದಾರೆ. ಹೀಗಾಗಿ ತಮಗೆ ಪತ್ರ ಬರೆಯುವ ಸನ್ನಿವೇಶ ಸೃಷ್ಟಿಯಾಯಿತು ಎಂದು ಅವರು ತಿಳಿಸಿದ್ದಾರೆ. ಸಂಸತ್ತಿನ ಮೆಟ್ಟಿಲುಗಳ ಮೇಲೆ ಚಹಾ ಸೇವನೆ ಮಾಡುವುದು ಸರಿಯಾದ ನಡವಳಿಕೆ ಅಲ್ಲ. ಈ ಹಿಂದೆ ವಿಪಕ್ಷಗಳು ರಾಷ್ಟ್ರೀಯ ಹಿತಾಸಕ್ತಿಯನ್ನು ಗೌರವಿಸಿ, ಸಂಯಮದಿಂದ ವರ್ತಿಸಿದ್ದವು. ಸಂಸತ್ತಿನ ಮೆಟ್ಟಿಲುಗಳ ಮೇಲೆ ಕುಳಿತು ಚಹಾ, ಬಿಸ್ಕತ್ತು, ಪಕೋಡಾ ತಿನ್ನುವುದು ಅತಿರೇಖದ ಕ್ರಮಗಳು. ಇವು ಅನುಚಿತ ಎಂದು ಅವರು ಟೀಕಿಸಿದ್ದಾರೆ.