ಮಂಗಳೂರು: ಅನಿಲ ಬೆಲೆ ಏರಿಕೆ, ವಾಣಿಜ್ಯ ಸಿಲಿಂಡರ್ ಪೂರೈಕೆ ಸ್ಥಗಿತ ಮತ್ತು ವಿದೇಶಾಂಗ ನೀತಿಯಲ್ಲಿನ ವೈಫಲ್ಯಗಳಿಂದ ದೇಶದ ಜನಸಾಮಾನ್ಯರು ಹಾಗೂ ಉದ್ದಿಮೆದಾರರು ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೇಂದ್ರದ ಮೋದಿ ಸರ್ಕಾರವು ಆಡಳಿತದ ಹತೋಟಿ ಕಳೆದುಕೊಂಡಿದ್ದು, ಪ್ರಸ್ತುತ ಪರಿಸ್ಥಿತಿಯು 'ತುಘಲಕ್ ದರ್ಬಾರ್' ನಂತೆ ಭಾಸವಾಗುತ್ತಿದೆ ಎಂದು ಹರೀಶ್ ಕುಮಾರ್ ಟೀಕಿಸಿದ್ದಾರೆ.
ಅವರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ದೇಶಾದ್ಯಂತ ವಾಣಿಜ್ಯ ಸಿಲಿಂಡರ್ (Non-Domestic Gas) ಪೂರೈಕೆಯನ್ನು ದಿಢೀರ್ ಸ್ಥಗಿತಗೊಳಿಸಿರುವುದರಿಂದ ಸಾವಿರಾರು ಹೋಟೆಲ್‌ಗಳು ಮುಚ್ಚುವ ಭೀತಿ ಎದುರಿಸುತ್ತಿವೆ. ಇದು ಕೇವಲ ಮಾಲೀಕರ ಸಮಸ್ಯೆಯಲ್ಲ, ಬದಲಿಗೆ ಹೋಟೆಲ್‌ಗಳನ್ನು ನಂಬಿಕೊಂಡಿರುವ ಸಾವಿರಾರು ಕಾರ್ಮಿಕರು, ವಿದ್ಯಾರ್ಥಿಗಳು ಮತ್ತು ಮೆಸ್ ಅವಲಂಬಿತರ ಜೀವನದ ಮೇಲೆ ಹೊಡೆತ ನೀಡಿದೆ. ಕೈಗಾರಿಕೆಗಳು ಸ್ಥಗಿತಗೊಳ್ಳುವ ಹಂತಕ್ಕೆ ತಲುಪಿದ್ದು, ಧಾರ್ಮಿಕ ಕೇಂದ್ರಗಳ ದಾಸೋಹ ವ್ಯವಸ್ಥೆಗಳಿಗೂ ಅನಿಲದ ಕೊರತೆ ಬಿಸಿ ತಟ್ಟಿದೆ. ಕೇಂದ್ರ ಪೆಟ್ರೋಲಿಯಂ ಸಚಿವರು ದೇಶದಲ್ಲಿ 75 ದಿನಗಳಿಗೆ ಆಗುವಷ್ಟು ಅನಿಲ ದಾಸ್ತಾನು ಇದೆ ಎಂದು ಹೇಳುತ್ತಿದ್ದರೆ, ತೈಲ ಕಂಪನಿಗಳು ಕೇವಲ 30 ದಿನಗಳ ದಾಸ್ತಾನು ಮಾತ್ರ ಇದೆ ಎನ್ನುತ್ತಿವೆ. ಈ ಪರಸ್ಪರ ವಿರೋಧಾಭ್ಯಾಸದ ಹೇಳಿಕೆಗಳಿಂದ ಸಾರ್ವಜನಿಕರಲ್ಲಿ ಗೊಂದಲ ಮೂಡಿದ್ದು, ಅನಿಲ ಲಭ್ಯವಿದ್ದರೂ ಪೂರೈಕೆಯನ್ನು ಏಕೆ ನಿಲ್ಲಿಸಲಾಗಿದೆ ಎಂಬ ಪ್ರಶ್ನೆಗೆ ಉತ್ತರ ಸಿಗುತ್ತಿಲ್ಲ ಎಂದರು. ಭಾರತದ ವಿದೇಶಾಂಗ ನೀತಿಯು ದುರ್ಬಲವಾಗಿದ್ದು, ರಷ್ಯಾದಿಂದ ಕಡಿಮೆ ಬೆಲೆಗೆ ತೈಲ ಖರೀದಿಸುವ ಅವಕಾಶವಿದ್ದರೂ ಅಮೆರಿಕದ ಒತ್ತಡಕ್ಕೆ ಮಣಿದು ಅದನ್ನು ನಿಲ್ಲಿಸಲಾಗಿತ್ತು ಎಂದು ಆರೋಪಿಸಲಾಗಿದೆ. ಇದರಿಂದಾಗಿ ಈಗ ಅಂತರಾಷ್ಟೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗಿರುವುದರಿಂದ ದೇಶಕ್ಕೆ ಆರ್ಥಿಕ ನಷ್ಟವುಂಟಾಗುತ್ತಿದೆ ಎಂದರು
ಪ್ರಧಾನಿಯವರು ಕಳೆದ 12 ವರ್ಷಗಳಲ್ಲಿ ಒಂದೂ ಪತ್ರಿಕಾಗೋಷ್ಠಿ ನಡೆಸದೆ ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ ಚರ್ಚಿಸಲು ನಿರಾಕರಿಸುತ್ತಿದ್ದಾರೆ ಮತ್ತು ಕೇವಲ 'ಮನ್ ಕಿ ಬಾತ್' ಮೂಲಕ ಏಕಪಕ್ಷೀಯವಾಗಿ ಮಾತನಾಡುತ್ತಾ ಸಾರ್ವಜನಿಕರ ಪ್ರಶ್ನೆಗಳಿಂದ ತಪ್ಪಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.