ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಡಿಸಿರುವ 2026-27ನೇ ಸಾಲಿನ ರಾಜ್ಯ ಬಜೆಟ್ ಕರಾವಳಿಯ ಆರ್ಥಿಕತೆ, ಶಿಕ್ಷಣ ಮತ್ತು ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೊಸ ಚೈತನ್ಯ ನೀಡುವಂತಿದೆ ಎಂದು ವಿಧಾನ ಪರಿಷತ್ ಶಾಸಕ ಮಂಜುನಾಥ ಭಂಡಾರಿ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ಬಜೆಟ್ ಕುರಿತು ಸಮಗ್ರ ವಿಶ್ಲೇಷಣೆ ನಡೆಸಿ ಪತ್ರಿಕಾ ಪ್ರಕಟಣೆ ನೀಡಿರುವ ಅವರು, "ಇದು ಕೇವಲ ಅಂಕಿ-ಅಂಶಗಳ ಬಜೆಟ್ ಆಗಿರದೆ, ದಕ್ಷಿಣ ಕನ್ನಡದ ಸಮಗ್ರ ಪ್ರಗತಿಗೆ ಪೂರಕವಾದ ದೂರದೃಷ್ಟಿಯ 'ಅಭಿವೃದ್ಧಿ ಪತ್ರ'ವಾಗಿದೆ" ಎಂದು ಬಣ್ಣಿಸಿದ್ದಾರೆ.
ಬಜೆಟ್‌ನಲ್ಲಿ ಮೀನುಗಾರಿಕೆ ಕ್ಷೇತ್ರಕ್ಕೆ ಆಧುನಿಕ 'ಸೆಂಟರ್ ಆಫ್ ಎಕ್ಸಲೆನ್ಸ್' ಘೋಷಿಸಿರುವುದು ಸ್ವಾಗತಾರ್ಹವಾಗಿದೆ. ಇದು ಮೀನುಗಾರರಿಗೆ ಅತ್ಯಾಧುನಿಕ ತಂತ್ರಜ್ಞಾನದ ನೆರವು ನೀಡಲಿದೆ. ಇನ್ನು ಕರಾವಳಿ ಪ್ರವಾಸೋದ್ಯಮವನ್ನು ಜಾಗತಿಕ ಮಟ್ಟಕ್ಕೆ ಏರಿಸಲು 'ಸೀ ಪ್ಲೇನ್' ಮತ್ತು 'ಹೆಲಿ ಟ್ಯಾಕ್ಸಿ'ಗಳಂತಹ ಆಧುನಿಕ ಸಾರಿಗೆ ಸೌಲಭ್ಯಗಳನ್ನು ಘೋಷಿಸಿರುವುದು ಮಂಗಳೂರನ್ನು ಪ್ರಮುಖ ಪ್ರವಾಸಿ ತಾಣವಾಗಿ ಗುರುತಿಸಲು ಸಹಕಾರಿಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ದೀರ್ಘಕಾಲದ ಬೇಡಿಕೆಯಾಗಿದ್ದ ಬಂಟ್ವಾಳ ತಾಲ್ಲೂಕಿನ ಮಾಣಿ ಮತ್ತು ಸಜಿಪನಡುವಿನಲ್ಲಿ ಹೊಸ ಪೊಲೀಸ್ ಠಾಣೆಗಳನ್ನು ಸ್ಥಾಪಿಸುವ ಸರ್ಕಾರದ ನಿರ್ಧಾರವನ್ನು ಶಾಸಕರು ಶ್ಲಾಘಿಸಿದ್ದಾರೆ. ಈ ಭಾಗಗಳಲ್ಲಿ ಠಾಣೆಗಳು ಅಸ್ತಿತ್ವಕ್ಕೆ ಬರುವುದರಿಂದ ಸಾರ್ವಜನಿಕರಿಗೆ ಕಾನೂನು ನೆರವು ತಕ್ಷಣವೇ ದೊರೆಯಲಿದೆ ಮತ್ತು ಅಪರಾಧ ಚಟುವಟಿಕೆಗಳನ್ನು ನಿಯಂತ್ರಿಸಲು ಸಾಧ್ಯವಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಶಿಕ್ಷಣ ತಜ್ಞರೂ ಆಗಿರುವ ಮಂಜುನಾಥ ಭಂಡಾರಿ ಅವರು ಶಿಕ್ಷಣ ಕ್ಷೇತ್ರದ ನಿರ್ಧಾರಗಳನ್ನು ಮೆಚ್ಚಿಕೊಂಡಿದ್ದಾರೆ. ಮಂಗಳೂರಿನಲ್ಲಿ ಕೌಶಲ್ಯಾಭಿವೃದ್ಧಿ ಕೇಂದ್ರಗಳ ಸ್ಥಾಪನೆ ಮತ್ತು ಕೃತಕ ಬುದ್ಧಿಮತ್ತೆ (AI) ಆಧಾರಿತ ತರಬೇತಿಗಳಿಗೆ ಆದ್ಯತೆ ನೀಡಿರುವುದು ಜಿಲ್ಲೆಯ ಯುವಜನತೆಗೆ ಉದ್ಯೋಗಾವಕಾಶಗಳನ್ನು ಸೃಷ್ಟಿಸಲು ಅಡಿಪಾಯ ಹಾಕಲಿದೆ ಎಂದಿದ್ದಾರೆ.
ರಾಜ್ಯ ಆಡಳಿತದಲ್ಲಿ ಎಐ ಮಿಷನ್ ಜಾರಿ ತಂತ್ರಜ್ಞಾನಕ್ಕೆ ಹೆಚ್ಚಿನ ಒತ್ತು ನೀಡಿದೆ.
ಕರಾವಳಿಯ ಹೆದ್ದಾರಿ ಮತ್ತು ಮೂಲಸೌಕರ್ಯ ಅಭಿವೃದ್ಧಿಗೆ ವಿಶೇಷ ಗಮನ ನೀಡಲಾಗಿದೆ.
ಮಹಿಳಾ ಸಬಲೀಕರಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ರೂಪಿಸಿರುವ ಯೋಜನೆಗಳು ಸಮಾನತೆಯನ್ನು ಎತ್ತಿ ಹಿಡಿಯುತ್ತವೆ.
ಒಟ್ಟಾರೆಯಾಗಿ, ಈ ಬಜೆಟ್ ದಕ್ಷಿಣ ಕನ್ನಡ ಜಿಲ್ಲೆಯ ಉದ್ಯಮ, ಶಿಕ್ಷಣ ಮತ್ತು ಪ್ರವಾಸೋದ್ಯಮದ ಮೇಲೆ ಅತ್ಯಂತ ಸಕಾರಾತ್ಮಕ ಪ್ರಭಾವ ಬೀರಲಿದೆ ಎಂದು ಮಂಜುನಾಥ ಭಂಡಾರಿ ಅವರು ಪ್ರಕಟಣೆಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.