ನವದೆಹಲಿ : ಸದ್ದಿಲ್ಲದೆ ದೆಹಲಿಗೆ ತೆರಳಿ ಎರಡು ದಿನ ಅಲ್ಲೇ ಬೀಡು ಬಿಟ್ಟು, ನಂತರ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಟೀಮ್‌ಗೆ ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸುವ ಭರವಸೆ ಹೈಕಮಾಂಡ್‌ನಿಂದ ದೊರಕಿದೆ. ಮಾಜಿ ಸಚಿವ ಕೆ.ಎನ್.ರಾಜಣ್ಣ ಹಾಗೂ ಪರಿಶಿಷ್ಟ ಪಂಗಡದ ಶಾಸಕರೊಂದಿಗೆ ದೆಹಲಿಗೆ ತೆರಳಿದ್ದ ಸತೀಶ್ ಜಾರಕಿಹೊಳಿ ತಂಡ ಶನಿವಾರ ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ್ದಾರೆ. ಈ ವೇಳೆ ರಾಜ್ಯದ ನಾಯಕತ್ವ ಗೊಂದಲ ಬಗೆಹರಿಸಿ, ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸತೀಶ್ ಜಾರಕಿಹೊಳಿ ಅವರನ್ನು ಪರಿಗಣಿಸಿ ಮತ್ತು ಸಂಪುಟದಿಂದ ಹೊರ ಬಿದ್ದಿರುವ ನಾಯಕ ಸಮುದಾಯದ ಇಬ್ಬರನ್ನೂ ಮತ್ತೆ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂಬ ಹಕ್ಕೊತ್ತಾಯ ಮಂಡಿಸಿದ್ದಾರೆ. ಇದಕ್ಕೆ ಪೂರಕವಾಗಿ ಸ್ಪಂದಿಸಿರುವ ಮಲ್ಲಿಕಾರ್ಜುವ ಖರ್ಗೆ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಉದ್ಭವಿಸಿರುವ ಮುಖ್ಯಮಂತ್ರಿ ಬದಲಾವಣೆ ವಿಚಾರದ ಬಗ್ಗೆ ಹೈಕಮಾಂಡ್ ಒಂದು ತೀರ್ಮಾನಕ್ಕೆ ಬಂದಿದೆ. ಆದಷ್ಟು ಬೇಗ ಈ ಗೊಂದಲ ಬಗೆಹರಿಸುತ್ತೇವೆ ಎಂಬ ಆಶ್ವಾಸನೆಯನ್ನು ನೀಡಿದ್ದಾರೆ.
ಖರ್ಗೆ ಭೇಟಿ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ ಅವರು, ನಾವು ಒಂದು ತೀರ್ಮಾನಕ್ಕೆ ಬಂದಿದ್ದೇವೆ. ಅದಷ್ಟೂ ಬೇಗ ರಾಜ್ಯದಲ್ಲಿನ ಗೊಂದಲ ಬಗೆಹರಿಸುತ್ತೇವೆ ಎಂದು ಖರ್ಗೆ ಅವರು ತಿಳಿಸಿದ್ದಾರೆ. ಇದೇ ಮೊದಲ ಬಾರಿಗೆ ಅವರು ಹೀಗೆ ಹೇಳಿದ್ದಾರೆ ಎಂದು ತಿಳಿಸಿದರು. ಖರ್ಗೆಯವರನ್ನು ನಾವು ಭೇಟಿ ಮಾಡಿದ್ದೆವು. ರಾಜ್ಯದ ಗೊಂದಲಗಳು, ಕೆಲ ವಿಚಾರ ಕುರಿತು ಖರ್ಗೆ ಅವರ ಗಮನಕ್ಕೆ ತಂದಿದ್ದೇವೆ. ರಾಜ್ಯದ ಗೊಂದಲಗಳನ್ನು ತುರ್ತು ಬಗೆಹರಿಸಲು ಮನವಿ ಮಾಡಿದ್ದೇವೆ. ಖರ್ಗೆಯವರು ಕೆಲ ಸಲಹೆ ಕೊಟ್ಟಿದ್ದಾರೆ. ಸಮಸ್ಯೆ, ಗೊಂದಲ ಬಗೆಹರಿಸುವ ಬಗ್ಗೆ ಇಡೀ ಪಕ್ಷ, ಕಾರ್ಯಕರ್ತರ ಎದುರು ನೋಡುತ್ತಿದ್ದೇವೆ ಎಂದು ತಿಳಿಸಿದರು. ಮಾಜಿ ಸಚಿವ ರಾಜಣ್ಣ ಮಾತನಾಡಿ, ಸತೀಶ ಅವರು ಹೇಳಿರುವ ಅಭಿಪ್ರಾಯಕ್ಕೆ ನಮ್ಮ ಸಹಮತ ವ್ಯಕ್ತಪಡಿಸಿದ್ದೇವೆ. ಗೊಂದಲ ಇರುವುದು ಸರ್ಕಾರಕ್ಕೂ ಮತ್ತು ಪಕ್ಷಕ್ಕೂ ಎರಡಕ್ಕೂ ಒಳಿತಲ್ಲ ಎಂದು ಹೇಳಿದರು.